ಸಿಂಧನೂರು: ಪ್ರತಿಯೊಬ್ಬರ ರೈತನಿಂದ 75 ಕ್ವಿಂಟಲ್ ಮಿತಿಯೊಳಗೆ ಜೋಳವನ್ನು ಖರೀದಿಸುವ ಷರತ್ತನ್ನು ಸರಕಾರ ತೆಗೆದು ಹಾಕಿದ್ದರೂ ತಂತ್ರಾಂಶದಲ್ಲಿ ಮಾತ್ರ ಬದಲಾಗದ್ದರಿಂದ ರೈತರ ಚಿತ್ತ ಪರಿಷ್ಕರಣೆಯತ್ತ ನೆಟ್ಟಿದೆ.
ಅಧಿಕೃತವಾಗಿ ಸರಕಾರದಿಂದ ಆದೇಶ ಹೊರಬಿದ್ದರೂ ನೋಂದಣಿ ಮಾಡಲು ಹೋದರೆ, ಸದ್ಯಕ್ಕೆ 75 ಕ್ವಿಂಟಲ್‌ಗೂ ಹೆಚ್ಚಿನ ಜೋಳವನ್ನು ತಂತ್ರಾಂಶ ಪರಿಗಣಿಸುತ್ತಿಲ್ಲ. ಹಳೇ ಲೆಕ್ಕದಲ್ಲಿ ಖರೀದಿ ಪ್ರಕ್ರಿಯೆಗಳು ಸಾಗಿದ್ದು, ಹೊಸದಾಗಿ ತಂತ್ರಾಂಶದಲ್ಲಿ ಅಪ್‌ಡೇಟ್ ಮಾಡಿದ ನಂತರವೇ ರೈತರಿಗೆ ಪ್ರಯೋಜನ ದೊರೆಯಲಿದೆ.
ಏನಿದೆ ಸ್ಥಿತಿಗತಿ?: 4,357 ರೈತರು ಈಗಾಗಲೇ ಜೋಳ ಮಾರಾಟಕ್ಕಾಗಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಇವರಿಂದ 1 ಲಕ್ಷ 50 ಸಾವಿರ ಕ್ವಿಂಟಲ್‌ಗೂ ಹೆಚ್ಚು ಜೋಳ ಖರೀದಿಸಬೇಕಿದೆ. ಮಾರಾಟಕ್ಕೆ ಒಂದೇ ಕೇಂದ್ರವಿದ್ದ ಹಿನ್ನೆಲೆಯಲ್ಲಿ ಆಗಿದ್ದ ತೊಂದರೆಯನ್ನು ತಪ್ಪಿಸಲು ವಾರದ ಬಳಿಕ ಹೊಸ ಎರಡು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಶಾಸಕರ ಸೂಚನೆ ಬಳಿಕವೂ ಪ್ರಕ್ರಿಯೆಗಳು ಆರಂಭವಾಗಲು ಹಲವು ದಿನ ಬೇಕಾಗುತ್ತಿದೆ. ಇದೀಗ ಜೋಳ ಮಾರಾಟಕ್ಕೆ ಇದ್ದ 5 ಎಕರೆ ಮಿತಿಯನ್ನು ತೆಗೆದು ಹಾಕಿದರೆ, 2 ಲಕ್ಷ ಕ್ವಿಂಟಲ್‌ಗೂ ಹೆಚ್ಚು ಜೋಳವನ್ನು ಸರಕಾರ ಖರೀದಿಸಬೇಕಾಗಲಿದೆ.
ತಂತ್ರಾಂಶ ಬದಲಾವಣೆಯಿಲ್ಲ: ಮೂರು ಪಹಣಿಗಳಿದ್ದರೆ ಕೃಷಿ ಇಲಾಖೆಯ ಫ್ರೂಟ್ ಐಡಿಯಲ್ಲಿ ಅಪ್‌ಡೇಟ್ ಆಗದ ಹಿನ್ನೆಲೆಯಲ್ಲಿ ಒಂದು ಪಹಣಿಯಲ್ಲಿನ ಜಮೀನು ಮಾತ್ರ ತಂತ್ರಾಂಶ ಪರಿಗಣಿಸುತ್ತಿತ್ತು. ರೈತರು ಕೃಷಿ ಇಲಾಖೆಯ ಕಚೇರಿಗೆ ಎಲ್ಲ ಪಹಣಿಗಳನ್ನು ಅಪ್‌ಡೇಟ್ ಮಾಡಿಸಿದ್ದಾರೆ. ತಂತ್ರಾಂಶದಲ್ಲಿ ಮಾತ್ರ ಹಿಂದಿನ ನೋಂದಣಿಯನ್ನು ಮಾತ್ರ ಪರಿಗಣಿಸಲಾಗುತ್ತಿದೆ. ತಿದ್ದುಪಡಿ ಅವಕಾಶವನ್ನೇ ಇದುವರೆಗೂ ನೀಡಿಲ್ಲ. ಇದೀಗ 10 ಎಕರೆ ಜಮೀನು ಹೊಂದಿರುವ ರೈತ ಇದ್ದರೆ, ಈಗಾಗಲೇ 5 ಎಕರೆ ಮಾತ್ರ ನೋಂದಣಿಯಾಗಿದ್ದರೂ ತಾಂತ್ರಿಕವಾಗಿ ದಾಖಲೆ ಆಧರಿಸಿ ಪರಿಷ್ಕರಣೆಗೊಳ್ಳಬೇಕಿದೆ. ಇದಕ್ಕಾಗಿ ತುರ್ತಾಗಿ ತಂತ್ರಾಂಶದಲ್ಲಿ ಇದಕ್ಕೆ ಅವಕಾಶ ಮಾಡಿಕೊಟ್ಟರೆ ಮಾತ್ರ ರೈತರಿಗೆ ಸೌಲಭ್ಯ ದೊರೆಯಲಿದೆ.