ಮುದಗಲ್ಲ: ಹಿಂಗಾರಿ ಮಳೆ ಕೈಕೊಟ್ಟ ಪರಿಣಾಮ ಹಿಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಜೋಳ, ಕಡಲೆ, ಗೋದಿ, ಸೂರ್ಯಕಾಂತಿ ಕುಸುಬೆ ಬೆಳೆಗಳು ತೇವಾಂಶ ಕೊರತೆ ಬಾಡಿದ್ದು, ಇಳುವರಿಯಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ.
ಮಳೆ ಕೊರತೆಯಿಂದ ಮುಂಗಾರು ಬೆಳೆ ಸಂಪೂರ್ಣ ಹಾಳಾಗಿದೆ. ಆದರೆ ಹಿಂಗಾರಿಗೆ ವಾಯುಭಾರ ಕುಸಿತ ಅಥವಾ ಯಾವುದಾದರೂು ಚಂಡಮಾರುತ ಬೀಸಿದರೆ ಸಾಕು ಮಳೆ ಸುರಿದು ಯರಿಭೂಮಿ ತೇವಾಂಶ ಹೆಚ್ಚಾಗಿ ಬೆಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಈ ಭಾಗದ ರೈತರು ಜೋಳ, ಕಡಲೆ, ಗೋದಿ, ಸೂರ್ಯಕಾಂತಿ ಬಿತ್ತಿದ್ದರು. ಆರಂಭದಲ್ಲಿ ಒಂದೆರಡು ಮಳೆಯಾಗಿದ್ದು ಬಿಟ್ಟರೆ ಬಿತ್ತಿದಾಗಿನಿಂದ ಮಳೆ ಕೊರತೆ ಕಾಡಿದೆ. ಪರಿಣಾಮ ಬೆಳೆ ತೆನೆ, ಹೂ, ಕಾಯಿ ಕಟ್ಟುವ ಸಮಯದಲ್ಲಿ ಹೊಲದಲ್ಲಿಯೇ ಬಾಡಿ ನಿಂತಿದೆ. ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಸೇರಿದಂತೆ ಬಿತ್ತನೆಗೆ ಮಾಡಿದ ಖರ್ಚು ರೈತರ ಕೈ ಸೇರುವುದು ಕಷ್ಟವಾಗಿದೆ. ಇನ್ನು ಜೋಳದ ಬೆಳೆ ಕೂಡಾ ಸರಿಯಾಗಿ ಬೆಳೆಯದ್ದರಿಂದ ಜಾನುವಾರುಗಳಿಗೆ ಮೇವಿನ ಅಭಾವವೂ ಎದುರಾಗುವ ಲಕ್ಷಣ ಕಾಣುತ್ತಿದ್ದು, ಹೀಗಾಗಿ ರೈತರು ನೀರಾವರಿ ಪ್ರದೇಶದ ಭತ್ತದ ಹುಲ್ಲಿಗೆ ದುಂಬಾಲು ಬಿದ್ದಿದ್ದಾರೆ.
ಬಿತ್ತನೆ ಪ್ರದೇಶ: ಹಿಂಗಾರು ಹಂಗಾಮಿನಲ್ಲಿ 85,792 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಇದರಲ್ಲಿ 26,523 ಹೆಕ್ಟೇರ್ ಜೋಳ, 58,886 ಹೆಕ್ಟೇರ್ ಕಡಲೆ ಸೇರಿದಂತೆ ಗೋದಿ, ಕುಸಬಿ, ಸೂರ್ಯಕಾಂತಿ ಬಿತ್ತನೆ ಮಾಡಲಾಗಿದೆ. ಹಿಂಗಾರಿನಲ್ಲಿ ವಾಡಿಕೆಯಂತೆ 392.40 ಮಿ.ಮೀ. ಮಳೆ ಆಗಬೇಕಿತ್ತು. ಆದರೆ ಈ ಬಾರಿ 178.7 ಮಿ.ಮೀ. ಮಳೆಯಾಗಿದೆ. ಶೇ.55ರಷ್ಟು ಮಳೆ ಕೊರತೆ ಆಗಿದೆ. ಪರಿಣಾಮ 81,504 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಗೀಡಾಗಿದೆ ಎಂದು ಲಿಂಗಸುಗೂರ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್. ರಕ್ಕಸಗಿ ಪತ್ರಿಕೆಗೆ ತಿಳಿಸಿದ್ದಾರೆ.
ನಷ್ಟದ ವರದಿ: ಕೇವಲ 178.7 ಮಿ.ಮೀ. ಮಳೆ ಆಗಿದ್ದರೂ ಅದು ಕೂಡ ಸರಿಯಾದ ಸಮಯಕ್ಕೆ ಸುರಿದಿಲ್ಲ. ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ನಡೆಸಿದ ಜಂಟಿ ಸಮೀಕ್ಷೆಯಲ್ಲಿ ಹಿಂಗಾರಿಗೆ 81,504 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಗೀಡಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಆಗ್ರಹ: ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಬರ ಆವರಿಸಿದೆ. ಬೆಳೆ ಹಾನಿಗೀಡಾದ ರೈತರಿಗೆ ಬೆಳೆ ಪರಿಹಾರ ನೀಡಬೇಕು. ಜಾನುವಾರುಗಳಿಗೆ ಗೋಶಾಲೆ ತೆರೆದು ಗೋವುಗಳ ರಕ್ಷಣೆಗೆ ಮುಂದಾಗಬೇಕು ಎಂದು ರೈತ ಮುಖಂಡರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.