Advertisement
ಅಮೆರಿಕನ್ ಸೈನ್ಯ ಹುಳ ಅರ್ಥಾತ್ ಫಾಲ್ ಆರ್ಮಿ ವರ್ಮ್, ಹೀಗಂದರೆ ಸಾಕು, ನಮ್ಮ ರೈತರು ಪತರಗುಟ್ಟು ಬಿಡುತ್ತಾರೆ. ಕಾರಣ ಇಷ್ಟೇ. ಕಳೆದ ಎಂಟು ತಿಂಗಳುಗಳಲ್ಲಿ ಆ ಕೀಟ ಭಾರತದ ಹತ್ತು ರಾಜ್ಯಗಳಲ್ಲಿ ಬೆಳೆಗಳನ್ನು ನಾಶಗೊಳಿಸಿದೆ. ಇದು ಆಫ್ರಿಕಾ ದೇಶಗಳಲ್ಲಿ ವೇಗವಾಗಿ ಹರಡಿ ಅಲ್ಲಿನ ಆಹಾರ ಭದ್ರತೆಗೇ ಅಪಾಯ ಒಡ್ಡಿರುವ ಸೈನ್ಯಹುಳ. ಈಗ ಏಷ್ಯಾ ಖಂಡದ ದೇಶಗಳ ಬೆಳೆಯ ಮೇಲೆ ಆಕ್ರಮಣ ಮಾಡುತ್ತಿದೆ.
Related Articles
Advertisement
ಆಂಧ್ರಪ್ರದೇಶದಲ್ಲಿ ಈ ಪೀಡೆಹುಳ ಪತ್ತೆಯಾದದ್ದು ಆಗಸ್ಟ್ 2018ರಲ್ಲಿ. ಆಗಲೇ ಅದು ಪೂರ್ವ ಮತ್ತು ಪಶ್ಚಿಮ ಗೋದಾವರಿ, ಶ್ರೀಕಾಕುಲಂ ಮತ್ತು ವಿಜಯನಗರಂ ಜಿಲ್ಲೆಗಳಲ್ಲಿ ಜೋಳದ ಹೊಲಗಳಲ್ಲಿ ಬೆಳೆಹಾನಿ ಮಾಡಿತ್ತು. ಗೋದಾವರಿ ಜಿಲ್ಲೆಯಲ್ಲಿ ಜೋಳದ ಬೀಜೋತ್ಪಾದನೆ ಮುಖ್ಯ ಕೃಷಿ ಚಟುವಟಿಕೆಯಾಗಿದ್ದು, ಹುಳದಿಂದಾಗಿ ಭಾರೀ ನಷ್ಟವಾಗಲಿದೆ. ಕೋಳಿ ಆಹಾರ ಮತ್ತು ಪಶು ಆಹಾರದಲ್ಲಿ ಜೋಳ ಪ್ರಧಾನ ಅಂಶವಾಗಿದ್ದು, ಜೋಳದ ಬೆಳೆಗೆ ಹಾನಿಯಾದರೆ ಮಾಂಸ ಮತ್ತು ಹಾಲಿನ ಉತ್ಪಾದನೆ ಕುಂಠಿತವಾಗಲಿದೆ ಎಂದು ಎಚ್ಚರಿಸುತ್ತಾರೆ ತಿರುಪತಿಯ ಎ.ಎನ್. ಜಿ ರಂಗ ಕೃಷಿ ವಿವಿ ಮುಖ್ಯ ವಿಜ್ಞಾನಿ ಎಂ. ಜಾನ್ ಸುಧೀರ್.
ತಮಿಳುನಾಡಿನ ಈರೋಡ್ ಮತ್ತು ಕರೂರು ಜಿಲ್ಲೆಗಳಲ್ಲಿ ಕಬ್ಬಿನ ಬೆಳೆಗೆ ಆ ಸೈನ್ಯ ಹುಳ ದಾಳಿ ಮಾಡಿರುವುದು ಖಚಿತವಾಗಿದೆ. ಮಧ್ಯಪ್ರದೇಶದಲ್ಲಿ 52 ಜಿಲ್ಲೆಗಳಿದ್ದು, ಅಲ್ಲಿನ 13 ಜಿಲ್ಲೆಗಳಲ್ಲಿ ಆ ಸೈನ್ಯ ಹುಳದಿಂದ ಬೆಳೆಗಳಿಗೆ ಹಾನಿಯಾಗಿರುವುದು ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ಸೋಲಾಪುರ ಜಿಲ್ಲೆಯ ತನ್-ಡುಲ್-ವಾಡಿ ಗ್ರಾಮದ ಜೋಳದ ಹೊಲದಲ್ಲಿ ಆ ಸೈನ್ಯ ಹುಳವನ್ನು ಮೊದಲು ಕಂಡವರು ಗಣೇಶ್ ಎಂಬ ರೈತ. ಅದಾಗಿ ಆರು ತಿಂಗಳಲ್ಲಿ ಮಹಾರಾಷ್ಟ್ರದ 15 ಜಿಲ್ಲೆಗಳ ಹೊಲಗಳಿಗೆ ಸೈನ್ಯ ಹುಳ ಆಕ್ರಮಣ ಮಾಡಿದೆ. ತೆಲಂಗಾಣದ ರೈತರ ಪರಿಸ್ಥಿತಿ ಶೋಚನೀಯವಾಗಿದೆ. ಬರಗಾಲದಿಂದಾಗಿ ಅಲ್ಲಿನ ರೈತರು ಸಾಂಪ್ರದಾಯಿಕ ಬೆಳೆಗಳ ಬದಲಾಗಿ ಜೋಳ ಬೆಳೆಯ ತೊಡಗಿದರು. ಹಾಗಾಗಿ, ಅಲ್ಲಿ ಐದು ಲಕ್ಷ ಹೆಕ್ಟೇರುಗಳಿಗೆ ಜೋಳದ ಕೃಷಿ ವ್ಯಾಪಿಸಿದೆ. ಇದೀಗ ತೆಲಂಗಾಣದ ಎಲ್ಲ ಜಿಲ್ಲೆಗಳಲ್ಲಿಯೂ ಸೈನ್ಯ ಹುಳದ ಹಾವಳಿ.
ಎರಡು ಕಾರಣಗಳಿಗಾಗಿ ಫಾಲ್ ಸೈನ್ಯ ಹುಳ ಅಪಾಯಕಾರಿ: ವಿಸ್ತಾರ ಪ್ರದೇಶದಲ್ಲಿ ವೇಗವಾಗಿ ವ್ಯಾಪಿಸುವ ಸಾಮರ್ಥ್ಯ ಮತ್ತು ಅಧಿಕ ಸಂತಾನೋತ್ಪತ್ತಿ ಸಾಮರ್ಥ್ಯ. ಇವೆರಡೂ ಇದರ ಶಕ್ತಿ. ಅದರ ಪತಂಗ ಒಂದು ರಾತ್ರಿಯಲ್ಲಿ 100 ಕಿಮೀ ದೂರಕ್ಕೆ ಹಾರಬಲ್ಲದು. ಆದ್ದರಿಂದಲೇ ಕೇವಲ ಎಂಟು ತಿಂಗಳುಗಳಲ್ಲಿ ಅದು ಭಾರತದ ಹತ್ತು ರಾಜ್ಯಗಳಿಗೆ ದಂಡೆತ್ತಿ ಹೋಗಿದೆ. ಎರಡನೆಯದಾಗಿ, ಮೊಟ್ಟೆಯಿಂದ ಪತಂಗದ ತನಕ ಅದರ ಜೀವನಚಕ್ರದ ಅವಧಿ ಮೂವತ್ತು ದಿನಗಳಾಗಿದ್ದು, ಹೆಣ್ಣು ಪತಂಗ ತನ್ನ ಜೀವಿತಾವಧಿಯಲ್ಲಿ 600ರಿಂದ 700 ಮೊಟ್ಟೆಗಳನ್ನಿಡುತ್ತದೆ. ಆಫ್ರಿಕಾದಲ್ಲಿ ಅನುಕೂಲ ಪರಿಸ್ಥಿತಿಯಿದ್ದಾಗ ಹೆಣ್ಣು ಪತಂಗ 1,600 ಮೊಟ್ಟೆ ಇಟ್ಟದ್ದು ದಾಖಲಾಗಿದೆ. ಹಾಗಾಗಿ, ಆ ಪೀಡೆಕೀಟದ ದಾಳಿಯಿಂದಾಗಿ ಆಫ್ರಿಕಾದಲ್ಲಿ ಜೋಳದ ಫಸಲು ಹೆಕ್ಟೇರಿಗೆ 4 ಟನ್‌ಗಳಿಂದ ಮೂರು ಟನ್‌ಗೆ ಕುಸಿಯಿತು.
ನಿಯಂತ್ರಣ ಹೇಗೆ?ಫಾಲ್ ಸೈನ್ಯ ಎಂಬ ವಿನಾಶಕಾರಿ ಹುಳ ನಮ್ಮ ಜೋಳದ ಬೆಳೆಗಾರರಿಗೆ ದೊಡ್ಡ ಸವಾಲಾಗಿದೆ. ಇದನ್ನು ನಿಯಂತ್ರಿಸದಿದ್ದರೆ ಜೋಳದ ಕೃಷಿಯಲ್ಲಿ ಭಾರೀ ನಷ್ಟವಾದೀತು. ಇದರ ಹತೋಟಿಗಾಗಿ ಇಮಾಮೆಕ್ಟಿನ್ ಬೆನೊjಯೇಟ್ (ಲೀಟರಿಗೆ 0.4 ಗ್ರಾಮ ಬೆರೆಸಿದ) ದ್ರಾವಣ ಸಿಂಪಡಿಸಬೇಕೆಂಬುದು ಕೀಟಶಾಸ್ತ್ರಜ್ಞರ ಸಲಹೆ; ಬೇರಾವುದೇ ರಾಸಾಯನಿಕ ಸಿಂಪಡಿಸಬಾರದೆಂದೂ ಎಚ್ಚರಿಸುತ್ತಾರೆ. ಈ ಪೀಡೆಹುಳದ ದಾಳಿ ಕಡಿಮೆ ಪ್ರಮಾಣದಲ್ಲಿದ್ದರೆ, ಬೇವಿನೆಣ್ಣೆಯ ದ್ರಾವಣ ಸಿಂಪಡಿಸಿ ನಿಯಂತ್ರಿಸಲು ಸಾಧ್ಯ ಎನ್ನುತ್ತಾರೆ ಕೀಟಶಾಸ್ತ್ರಜ್ಞರು. ಫಾಲ್ ಸೈನ್ಯ ಹುಳದ ದಾಳಿಯಿಂದಾಗಿ ದೊಡ್ಡಮಟ್ಟದ ಹಾನಿಯಾಗುವ ಮುನ್ನ ರೈತರು ಎಚ್ಚೆತ್ತುಕೊಳ್ಳಬೇಕಾಗಿದೆ. ಅದು ಹೊಲದಲ್ಲಿ ಕಾಣಿಸಿದೊಡನೆ ಹತೋಟಿ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ. – ಅಡ್ಡೂರು ಕೃಷ್ಣ ರಾವ್