ಪುತ್ತೂರು: ಕೋವಿಡ್-19 ಮಹಾಮಾರಿ ಸೋಂಕಿಗೆ ಒಳಗಾಗಿ ಜೀವನ್ಮರಣ ಸ್ಥಿತಿಯಲ್ಲಿದ್ದ ವ್ಯಕ್ತಿಯೋರ್ವನಿಗೆ ಪೊಲೀಸ್ ಸಿಬಂದಿ ತನ್ನ ದೇಹದಿಂದ ಪ್ಲಾಸ್ಮಾ ದಾನ ಮಾಡುವ ಮೂಲಕ ಜೀವ ಉಳಿಸಲು ನೆರವಾದ ಘಟನೆ ನಡೆದಿದ್ದು, ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಮಂಗಳೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿಯ ಡಿ.ಆರ್. ವಿಭಾಗದಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆಯ್ಯೂರು ಗ್ರಾಮದ ತೆಗ್ಗು ನೂಜಿ ಬರಮೇಲು ನಿವಾಸಿ ರಂಜಿತ್ ಕುಮಾರ್ ರೈ ಅವರು ಪ್ಲಾಸ್ಮಾ ದಾನ ಮಾಡುವ ಮೂಲಕ ಜೀವ ತುಂಬಿದ ಪೊಲೀಸ್.
ಬ್ರಹ್ಮಾವರ ಮೂಲದ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಪೂರ್ಣಾನಂದ ಅವರು ಕೋವಿಡ್ 19 ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದರು. ರಕ್ತದಲ್ಲಿ ಪ್ಲಾಸ್ಮಾ ಸಂಖ್ಯೆ ಕಡಿಮೆಯಾಗಿದ್ದರಿಂದ ಜೀವನ್ಮರಣ ಹೋರಾಟದಲ್ಲಿದ್ದರು. ಈ ಮಾಹಿತಿ ಪಡೆದ ರಂಜಿತ್ ಕುಮಾರ್ ರೈ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ 0+ ಪ್ಲಾಸ್ಮಾ 450 ಎಂ.ಎಲ್. ದಾನ ಮಾಡಿದ್ದಾರೆ. ಅದಾದ ಬಳಿಕ ಪೂರ್ಣಾನಂದ ಅವರ ಆರೋಗ್ಯದಲ್ಲಿ ಪೂರ್ಣ ಚೇತರಿಕೆ ಕಂಡು ಬಂದಿದೆ ಎಂಬ ಮಾಹಿತಿ ದೊರೆತಿದೆ.
ಇದನ್ನೂ ಓದಿ: ವಾಚ್ ಮ್ಯಾನ್ ಆಗದಿರುವ ಜಮೀರ್ ಈಗ ಆಸ್ತಿ ಬರೆದುಕೊಡ್ತಾರಾ: ಸಿ.ಟಿ ರವಿ ವ್ಯಂಗ್ಯ
ಜಿಲ್ಲೆಯ ಪ್ರಥಮ ಪೊಲೀಸ್
ಮನುಷ್ಯನ ದೇಹದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಪಾಸ್ಮಾ ಕಣಗಳಿವೆ. ಪಾಸ್ಮಾ ಕಣ ಇಳಿಮುಖವಾದರೆ ಅನಾರೋಗ್ಯ ಸ್ಥಿತಿ ಉಂಟಾಗುತ್ತದೆ. ಜೀವ ಹಾನಿಗೂ ಹೇತುವಾಗುತ್ತದೆ. ಇಂತಹ ಸಂದರ್ಭದಲ್ಲಿ ಇನ್ನೊಬ್ಬನ ದೇಹದಿಂದ ಪ್ಲಾಸ್ಮಾ ದಾನ ಮಾಡುವೊಂದೇ ದಾರಿ. ಆ ಕಾರ್ಯವನ್ನು ರಂಜಿತ್ ಮಾಡಿದ್ದು, ಪೊಲೀಸ್ ಇಲಾಖೆಗೆ ಸಂಬಂಸಿದಂತೆ ಪ್ಲಾಸ್ಮಾ ದಾನ ಮಾಡಿದವರಲ್ಲಿ ರಂಜಿತ್ ಕುಮಾರ್ ರೈ ಜಿಲ್ಲೆಗೆ ಪ್ರಥಮ ವ್ಯಕ್ತಿ ಆಗಿದ್ದಾರೆ. ಸಾರ್ವಜನಿಕ ವಲಯದಲ್ಲಿ ಒಟ್ಟು 16 ಮಂದಿ ಪ್ಲಾಸ್ಮಾ ದಾನ ಮಾಡಿದ್ದಾರೆ. ರಂಜಿತ್ ಅವರು 17ನೇಯವರು ಆಗಿದ್ದಾರೆ.
ಉತ್ತಮ ಕ್ರೀಡಾಪಟು
ನೂಜಿ ಬರಮೇಲು ಗಣೇಶ್ ರೈ ಮತ್ತು ರತ್ನಾವತಿ ರೈ ಅವರ ಪುತ್ರನಾಗಿರುವ ರಂಜಿತ್ ಕುಮಾರ್ ರೈ ಅತ್ಯುತ್ತಮ ಕ್ರೀಡಾಪಟು ಆಗಿದ್ದಾರೆ. ವಿದ್ಯಾರ್ಥಿ ಅವಧಿಯಲ್ಲಿ ಖೋ-ಖೋ, ದೂರದ ಓಟ ವಿಭಾಗದಲ್ಲಿ ಪ್ರಶಸ್ತಿ ಗಿಟ್ಟಿಸಿದ್ದರು. ಪುತ್ತೂರು ತಾಲೂಕಿನ ಕೆಯ್ಯೂರು ಪ.ಪೂ.ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದ ಅವಧಿಯಲ್ಲೇ ಪೊಲೀಸ್ ಇಲಾಖೆಗೆ ಆಯ್ಕೆಯಾಗಿದ್ದರು.
ಇದನ್ನೂ ಓದಿ: ಎಲ್ಲಾ ದೇವಸ್ಥಾನಗಳಗೆ ಭದ್ರತಾ ಸಿಬ್ಬಂದಿ, ಸಿಸಿ ಕ್ಯಾಮೆರಾ, ಗನ್‌ಮ್ಯಾನ್: ಸಚಿವ ಕೋಟ
ಬ್ರಹ್ಮಾವರ ಮೂಲದ ಪೂರ್ಣಾನಂದ ಅವರಿಗೆ 0+ ಪ್ಲಾಸ್ಮಾದ ಅಗತ್ಯತೆ ಇದೆ ಎನ್ನುವ ಮಾಹಿತಿ ಸಿಕ್ಕಿತ್ತು. ಹಾಗಾಗಿ ಸ್ವ ಇಚ್ಛೆಯಿಂದ ದಾನ ಮಾಡಿದ್ದೇನೆ. ಕಷ್ಟದಲ್ಲಿರುವ ವ್ಯಕ್ತಿಯ ಜೀವ ಉಳಿಸುವ ಕಾರ್ಯಕ್ಕಿಂತ ಶ್ರೇಷ್ಠ ಕಾರ್ಯ ಬೇರೋಂದಿಲ್ಲ. ಆ ಕೆಲಸ ಮಾಡಿದ ತೃಪ್ತಿ ಇದೆ ಎನ್ನುತ್ತಾರೆ ಹೆಡ್ ಕಾನ್ಸ್ಟೇಬಲ್ ರಂಜಿತ್ ಕುಮಾರ್ ರೈ.
ಕಿರಣ್ ಪ್ರಸಾದ್ ಕುಂಡಡ್ಕ