ಕಾನ್ಪುರ: ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಎನ್ ಕೌಂಟರ್ ಪ್ರಕರಣದಲ್ಲಿ ಭಾಗಿಯಾಗಿದ್ದ ಉತ್ತರಪ್ರದೇಶ ಪೊಲೀಸ್ ಕಾನ್ಸ್ ಟೇಬಲ್ ಒಬ್ಬರಿಗೆ ಕೋವಿಡ್ ಸೊಂಕು ದೃಢಪಟ್ಟಿದೆ.
ಉಜೈನ್ ದೇವಾಸ್ಥಾನವೊಂದರಲ್ಲಿ ವಿಕಾಸ್ ದುಬೆಯನ್ನು ಬಂಧಿಸಿ ಪೊಲೀಸ್ ವಾಹನದಲ್ಲಿ ಕಾನ್ಪುರ ಕರೆತರಲಾಗುತ್ತಿತ್ತು. ಈ ವೇಳೆ ವಾಹನದಲ್ಲಿದ್ದ ಓರ್ವ ಪೊಲೀಸ್ ಗೆ ಸೊಂಕು ದೃಢಪಟ್ಟಿದ್ದು, ಇತರ ನಾಲ್ವರು ಪೊಲೀಸರ ವರದಿ ನೆಗೆಟಿವ್ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ ಸೋಂಕು ದೃಢ ಪಟ್ಟ ಪೊಲೀಸ್ ಕಾನ್ಸ್ ಟೇಬಲ್ ಅನ್ನು ಐಸೋಲೇಶನ್ ವಾರ್ಡ್ ಗೆ ದಾಖಲಿಸಲಾಗಿದೆ ಎಂದು ಗಣೇಶ್ ಶಂಕರ್ ವಿದ್ಯಾರ್ಥಿ ವೈದ್ಯಕೀಯ ಕಾಲೇಜಿನ ಪ್ರಿನ್ಸಿಪಾಲ್ ಡಾ. ಆರ್ ಬಿ ಕಮಲ್ ತಿಳಿಸಿದ್ದಾರೆ.
ಗ್ಯಾಂಗ್ ಸ್ಟರ್ ವಿಕಾಸ್ ದುಬೆಯನ್ನು ಕಳೆದ ಶುಕ್ರವಾರ ಕಾನ್ಪುರ ಸಮೀಪ ಎನ್ ಕೌಂಟರ್ ಮಾಡಲಾಗಿತ್ತು. ಉಜೈನಿಯಿಂದ ಆತನನ್ನು ಕಾನ್ಪುರ ಕರೆತರುವಾಗ ಮಳೆಯ ಕಾರಣದಿಂದ ಪೊಲೀಸ್ ವಾಹನ ಅಪಘಾತಕ್ಕೀಡಾಗಿತ್ತು. ಪರಿಸ್ಥಿತಿಯ ಲಾಭ ಪಡೆದು ದುಬೆ ಪೊಲೀಸರ ಪಿಸ್ತೂಲ್ ಕಸಿದುಕೊಂಡು ತಪ್ಪಿಸಕೊಳ್ಳಲು ಯತ್ನಿಸಿದ್ದ. ಈ ವೇಳೆ ಎನ್ ಕೌಂಟರ್ ಮೂಲಕ ಹತ್ಯೆ ಮಾಡಲಾಗಿತ್ತು.
ಈ ಸಮಯದಲ್ಲಿ ಮೂವರು ಪೊಲೀಸರು ಕೂಡ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಇವರನ್ನೂ ಕೂಡ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು ಇದರಲ್ಲಿ ಒಬ್ಬ ಪೊಲೀಸ್ ಗೆ ಪಾಸಿಟಿವ್ ವರದಿ ಬಂದಿದೆ.