Advertisement

ಸಹಕಾರ ಸಂಘಗಳ ಸಿಬ್ಬಂದಿಯನ್ನು ಕಾಯಂಗೊಳಿಸಿ

08:20 PM Feb 18, 2020 | Lakshmi GovindaRaj |

ತುರುವೇಕೆರೆ: ರಾಜ್ಯದ ವಿವಿಧ ಸಹಕಾರ ಸಂಘಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಕೂಡಲೇ ಕಾಯಂಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ತಾಲೂಕು ಸರ್ಕಾರಿ ಸಹಕಾರ ಸಂಘಗಳ ಪದಾಧಿಕಾರಿಗಳು ಶಾಸಕ ಮಸಾಲೆ ಜಯರಾಮ್‌ಗೆ ಆಗ್ರಹಿಸಿದರು.

Advertisement

ಪ್ರವಾಸಿ ಮಂದಿರದಲ್ಲಿ ಶಾಸಕರನ್ನು ಭೇಟಿ ಮಾಡಿದ ಪದಾಧಿಕಾರಿಗಳು, 117 ವರ್ಷ ಇತಿಹಾಸವಿರುವ ಸಹಕಾರ ಸಂಘದಲ್ಲಿ ಸೇವಾ ಭದ್ರತೆ ಇಲ್ಲದೆ ಸಾವಿರಾರು ಸಿಬ್ಬಂದಿ ಕರ್ತವ್ಯ ನಿರ್ವಸುತ್ತಿದ್ದಾರೆ. ಕಳೆದ 20 ವರ್ಷದಿಂದಲೂ ಸೇವಾ ಭದ್ರತೆ ಒದಗಿಸಿ ಎಂದು ಹಲವಾರು ಬಾರಿ ಒತ್ತಾಯಿಸುತ್ತಲೇ ಇದ್ದೇವೆ. ಆದರೂ ಬೇಡಿಕೆಗಳಿಗೆ ಮನ್ನಣೆ ಸಿಕ್ಕಿಲ್ಲ. ಈಗಲಾದರೂ ಬೇಡಿಕೆ ಮನ್ನಿಸಬೇಕೆಂದು ಒತ್ತಾಯಿಸಿದರು.

ಗ್ರಾಮಗಳಲ್ಲಿರುವ ಸಹಕಾರ ಸಂಘಗಳಲ್ಲಿ ಆಹಾರ ಪದಾರ್ಥ, ರಸಗೊಬ್ಬರ, ಕೃಷಿ ಉಪಕರಣ, ಔಷಧಗಳು ಸೇರಿ ಎಲ್ಲಾ ಸವಲತ್ತು ಜನರಿಗೆ ನೀಡಲಾಗುತ್ತಿದೆ. ಆದರೆ ಅಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಉದ್ಯೋಗ ಭದ್ರತೆ ಇಲ್ಲ. ಕಳೆದ ಹತ್ತಾರು ವರ್ಷಗಳಿಂದ ಸಂಘಗಳಲ್ಲಿ ದುಡಿಯುತ್ತಿರುವ ಕಾರ್ಯದರ್ಶಿಗಳಿಗೆ 3 ಸಾವಿರ ರೂ.ನಿಂದ ಹಿಡಿದು 10 ಸಾವಿರ ರೂ.ವರೆಗೆ ಗೌರವ ಧನ ದೊರೆಯಲಿದೆ.

ಸಿಬ್ಬಂದಿಗೆ ಉದ್ಯೋಗ ಭದ್ರತೆ ಇಲ್ಲ. ಅಲ್ಲಿ ಆರಿಸಿ ಬರುವ ಸಮಿತಿಯ ನಿರ್ಧಾರದ ಮೇಲೆ ಸಿಬ್ಬಂದಿ ಭವಿಷ್ಯವಿರುತ್ತದೆ. ಸಮಿತಿಗೆ ಯಾವುದೇ ಕ್ಷಣದಲ್ಲಿ ನಮ್ಮನ್ನು ಕರ್ತವ್ಯದಿಂದ ತೆಗೆದು ಹಾಕಲು ಅವಕಾಶವಿದೆ ಎಂದು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಒಟ್ಟು 17368 ಸಹಕಾರ ಸಂಘಗಳಿವೆ. ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾಲೂಕಿನಲ್ಲಿ 24 ಸಹಕಾರ ಸಂಘಗಳಿದ್ದು 96 ಮಂದಿ ಕರ್ತವ್ಯದಲ್ಲಿದ್ದಾರೆ. ಇವರೆಲ್ಲರಿಗೂ ಸೇವಾಭದ್ರತೆ ಇಲ್ಲ. ಸಂಬಳ ಭದ್ರತೆ ಇಲ್ಲ. ಆದ್ದರಿಂದ ನಮ್ಮನ್ನು ಕಾಯಂಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಮನವಿ ಮಾಡಿದರು.

Advertisement

ಕೇರಳದಲ್ಲಿ ಸಹಕಾರ ಸಿಬ್ಬಂದಿಯನ್ನು ನೌಕರರೆಂದು ಪರಿಗಣಿಸಲಾಗಿದೆ. ಈಗಾಗಲೇ ಸಂಘದ ರಾಜ್ಯಾಧ್ಯಕ್ಷ ಬಡಗೀಗೌಡರ ನೇತೃತ್ವದಲ್ಲಿ ಹಿಂದಿನ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದರೂ ಪ್ರಯೋಜನವಾಗಿಲ್ಲ ಎಂದು ಬೇಸರಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಮಸಾಲೆ ಜಯರಾಮ್‌, ಸಹಕಾರ ಸಂಘಗಳಲ್ಲಿ ಕರ್ತವ್ಯ ನಿರ್ವಸುತ್ತಿರುವವರ ಸಮಸ್ಯೆಯನ್ನು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಬಳಿ ಪ್ರಸ್ತಾಪಿಸಲಾಗುವುದು. ಹೇಳಿದರು.

ಅಲ್ಲದೇ ಮಾ.9 ರಂದು ಸಹಕಾರ ಸಂಘಗಳ ಪದಾಧಿಕಾರಿಗಳ ನಿಯೋಗವನ್ನು ಕರದೊಯ್ದು ಸಚಿವರನ್ನು ಭೇಟಿ ಮಾಡಿಸುವುದಾಗಿ ಹೇಳಿದರು. ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೂ ತರುವ ಭರವಸೆ ನೀಡಿದರು. ಸಂಘದ ಮುಖಂಡರಾದ ಎಂ.ಎ.ಪರಮೇಶ್‌, ಕೆ.ಟಿ.ಶ್ರೀನಿವಾಸ್‌, ಎಚ್‌.ಪ್ರಕಾಶ್‌, ಎನ್‌.ಜಿ.ಶಿವಕುಮಾರ್‌, ಆನಪ್ಪಗೌಡ, ಎ.ಬಿ.ಪ್ರಕಾಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next