Advertisement

ಎನ್‌ಡಿಆರ್‌ಎಫ್ ತರಬೇತಿಗೆ ಸಹಕಾರ ನೀಡಿ: ಡೀಸಿ

09:44 PM Jan 18, 2020 | Lakshmi GovindaRaj |

ಚಾಮರಾಜನಗರ: ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ ಸಮುದಾಯ ಅರಿವು ಮತ್ತು ತರಬೇತಿ ಕಾರ್ಯಕ್ರಮ ಅತ್ಯಂತ ಮಹತ್ವದಾಗಿದ್ದು, ವಿಪತ್ತು ಸಂದರ್ಭದಲ್ಲಿ ಆಗಬಹುದಾದ‌ ಪ್ರಾಣ ಹಾನಿ ತಡೆಗಟ್ಟಲು ಸಂಪೂರ್ಣ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎನ್‌ಡಿಆರ್‌ಎಫ್(ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ) ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ವಿಪತ್ತು ಪ್ರತಿಕ್ರಿಯೆ ತರಬೇತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೇಶದ ವಿವಿಧೆಡೆ ಉಂಟಾಗಿದ್ದ ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ಎನ್‌ಡಿಆರ್‌ ಪಡೆ ತ್ವರಿತವಾಗಿ ಸ್ಪಂದಿಸಿ, ಉತ್ತಮ ಕಾರ್ಯನಿರ್ವಹಿಸಿದೆ. ಅದರಂತೆ ಎನ್‌ಡಿಆರ್‌ಎಫ್ ವತಿಯಿಂದ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಅರಿವು ಮತ್ತು ತರಬೇತಿ ಕಾರ್ಯಕ್ರಮ ಬಹಳ ಮಹತ್ವದ್ದಾಗಿರುತ್ತದೆ. ಈ ತರಬೇತಿಯಿಂದ ವಿಪತ್ತು ಉಂಟಾದಾಗ ತೆಗೆದುಕೊಳ್ಳಬಹುದಾದ ಕ್ರಮ ಹಾಗೂ ಪರಿಸ್ಥಿತಿ ಎದುರಿಸುವ ಬಗ್ಗೆ ಜನರಲ್ಲಿ ಅರಿವು ಮೂಡಲಿದೆ.

ಇದರಿಂದ ಪ್ರಾಣಹಾನಿ ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು. ಚಾಮರಾಜನಗರ ಜಿಲ್ಲೆ ಭೂ-ಆವೃತ್ತ ಪ್ರದೇಶವಾಗಿದೆ. ಹೀಗಾಗಿ ಇಲ್ಲಿ ಅತಿವೃಷ್ಟಿ ಉಂಟಾಗುವ ಸಂಭವ ಕಡಿಮೆ. ಆದ್ದರಿಂದ ಇಲ್ಲಿನ ಭೌಗೋಳಿಕ ಗುಣಲಕ್ಷಣಗಳಿಗೆ ತಕ್ಕಂತೆ ಕಾರ್ಯಯೋಜನೆ ರೂಪಿಸಿ, ತರಬೇತಿ ನೀಡಿದಲ್ಲಿ ಹೆಚ್ಚು ಪರಿಣಾಮಕಾರಿಯಾಗಲಿದೆ.

ಮುಖ್ಯವಾಗಿ ಕಾಲುಳಿತ, ಕಾಡ್ಗಿಚ್ಚು, ಅಪಘಾತ ಮುಂತಾದವುಗಳ ಕುರಿತು ಜಾಗೃತಿ ಅವಶ್ಯ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು. ಎನ್‌ಡಿಆರ್‌ಎಫ್ ಕೈಗೊಂಡಿರುವ ತರಬೇತಿ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ಹಾಗೂ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

Advertisement

ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ ಜಿ.ಎಲ್‌.ಆಕರ್ಷ್‌ ಮಾತನಾಡಿ, ಎನ್‌ಡಿಆರ್‌ಎಫ್ನ ತರಬೇತಿಯನ್ನು ಮುಖ್ಯವಾಗಿ ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ನೀಡಲಾಗುತ್ತಿದೆ. ಈ ಮೂಲಕ ವಿಪತ್ತು ಸಂದರ್ಭದಲ್ಲಿ ಅವರು ತೆಗೆದುಕೊಳ್ಳಬಹುದಾದ ಪ್ರಥಮ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ.

ವಿಪತ್ತು ಸಂದರ್ಭ ಎದುರಿಸುವ ಕೌಶಲ್ಯ ಹಾಗೂ ಮಾಡಬಹುದಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಡಲಾಗುತ್ತದೆ ಎಂದು ಮಾಹಿತಿ ನೀಡಿದರು. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ ತರಬೇತಿ ಕಾರ್ಯಕ್ರಮ ಜ.17ರಿಂದ 31 ರವರೆಗೆ ಜಿಲ್ಲೆಯ ವಿವಿಧ ಕಡೆ ನಡೆಯಲಿದೆ. ಎನ್‌ಡಿಆರ್‌ ಪಡೆಯ 25 ಸಿಬ್ಬಂದಿ ತಂಡ ಸಮುದಾಯ ಅರಿವು ಹಾಗೂ ಸನ್ನದ್ಧತಾ ಕ್ರಮಗಳ ಬಗ್ಗೆ ತರಬೇತಿ ನೀಡಲಿದೆ ಎಂದು ತಿಳಿಸಿದರು.

ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ಕೆ.ಎಲ್‌.ಶ್ರೀಹರ್ಷ, ಅಗ್ನಿಶಾಮಕ ದಳದ ನವೀನ್‌ ಕುಮಾರ್‌, ತಹಶೀಲ್ದಾರ್‌ ಮಹೇಶ್‌, ಉಪ-ತಹಶೀಲ್ದಾರ್‌ ಧನಂಜಯ್‌, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ರಮಾಕಾಂತ್‌ ಉಪಾಧ್ಯಾಯ, ಕೆ. ರಾಮಚಂದ್ರನ್‌, ಆರೋಗ್ಯ ಅಧಿಕಾರಿ ಡಾ.ವಿ.ಆದಿತ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next