ಕಲಬುರಗಿ: ಸಹಕಾರಿ ಬ್ಯಾಂಕುಗಳಲ್ಲಿನ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲನ್ನು ಸಂಪೂರ್ಣವಾಗಿ 2024ರ ಫೆಬ್ರವರಿ 29 ರೊಳಗೆ ತುಂಬಿದರೆ ಬಡ್ಡಿ ಮನ್ನಾ ಕುರಿತಾಗಿ ಶನಿವಾರ (ಜ.20) ಸಹಕಾರಿ ಇಲಾಖೆ ಅಧಿಸೂಚನೆ.
ಬೆಳಗಾವಿಯಲ್ಲಿ ನಡೆದ ಚಳಗಾಲ ಅಧಿವೇಶನದಲ್ಲಿ ಬರಗಾಲ ಹಾಗೂ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಾದ ವಿಷಯದ ಮೇಲೆ ಚರ್ಚೆ ನಡೆಯುತ್ತಿರುವಾಗ ಮುಂಗಾರು ಹಾಗೂ ಹಿಂಗಾರು ಎರಡೂ ಮಳೆಯನ್ನೇ ಕೈ ಕೊಟ್ಟ ಪರಿಣಾಮ ರೈತ ಸಂಕಷ್ಟದಲ್ಲಿದ್ದಾನೆ. ಹೀಗಾಗಿ ಸಹಕಾರಿ ಬ್ಯಾಂಕುಗಳಲ್ಲಿನ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲದ ಅಸಲನ್ನು ಕಟ್ಟಿದರೆ ಅದರ ಬಡ್ಡಿ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು.
ಆದರೆ ಬಡ್ಡಿ ಮನ್ನಾದ ಘೋಷಣೆ ಮಾಡಿ ತಿಂಗಳಾದರೂ ಆದೇಶ ಮಾತ್ರ ಹೊರ ಬೀಳದೇ ಹಾಗೆ ಮುನ್ನೆಡೆಸಿಕೊಂಡು ಬರಲಾಗಿತ್ತು. ಆದರೆ ಬಡ್ಡಿ ಮನ್ನಾ ಕುರಿತಾಗಿ ಸರ್ಕಾರದಿಂದ ಇನ್ನೂ ಹೊರ ಬೀಳದ ಆದೇಶ ಎಂಬುದಾಗಿ ಕಳೆದ ಜ. 13 ರಂದು ಉದಯವಾಣಿ ಯಲ್ಲಿ ವಿಶೇಷ ವರದಿ ಮಾಡಲಾಗಿತ್ತು.
ವರದಿ ನಂತರ ಎಚ್ಚೆತ್ತುಕೊಂಡ ಸರ್ಕಾರ ಶನಿವಾರ ಜ.20 ರಂದು ಆದೇಶ ಹೊರಡಿಸಿದೆ. ಸಹಕಾರಿ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ಎ.ಸಿ. ದಿವಾಕರ ಅಧಿಸೂಚನೆ ಹೊರಡಿಸಿದ್ದಾರೆ.
ಬರಗಾಲ ಹಿನ್ನೆಲೆಯಲ್ಲಿ ಜತೆಗೆ ತಮ್ಮ ಒತ್ತಾಯದ ಮೇರೆಗೆ ಸರ್ಕಾರ ಬಡ್ಡಿ ಮಾಡಿದ್ದು, ರೈತರು ಸಕಾಲಕ್ಕೆ ಸಾಲದ ಅಸಲನ್ನು ಸಂಪೂರ್ಣವಾಗಿ ತುಂಬಿ ಬಡ್ಡಿ ಮನ್ನಾದ ಸದುಪಯೋಗ ಪಡೆದುಕೊಳ್ಳಬೇಕೆಂದು ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ನ ಅಧ್ಯಕ್ಷ ಸೋಮಶೇಖರ ಗೋನಾಯಕ ಕೋರಿದ್ದಾರೆ.