ಯಾದಗಿರಿ: ಎನ್ನೆಸ್ಸೆಸ್ ಮೂಲ ಉದ್ದೇಶ ಸ್ವಚ್ಛತೆ, ಸಾಕ್ಷರತೆ, ಆರೋಗ್ಯ ಹೀಗೆ ಮುಂತಾದ ವಿಷಯಗಳ ಕುರಿತು ಗ್ರಾಮೀಣ ಜನರಲ್ಲಿ ಅರಿವು ಮೂಡಿಸುವುದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ| ಸಿದ್ದಪ್ಪ ಹೊಟ್ಟಿ ಹೇಳಿದರು.
ಇಲ್ಲಿನ ಲಿಂಗೇರಿ ಕೋನಪ್ಪ ಮಹಿಳಾ ವಿದ್ಯಾಲಯದಲ್ಲಿ ಹಮ್ಮಿಕೊಂಡ ಎನ್ ಎಸ್‌ಎಸ್ ವಾರ್ಷಿಕ ಶಿಬಿರದಲ್ಲಿ ಅವರು ಮಾತನಾಡಿದರು.
ಯುವಕರಲ್ಲಿ ಸಹಬಾಳ್ವೆ-ನಾಯಕತ್ವದ ಗುಣಗಳು ಬೆಳೆದಲ್ಲಿ ಗಾಂಧೀಜಿಯವರ ಕನಸು ನನಸಾಗುತ್ತದೆ ಎಂದರು.
ಸಹಾಯಕ ಪ್ರಾಧ್ಯಾಪಕ ಡಾ| ದೇವಿಂದ್ರಪ್ಪ ಹಳಿಮನಿ ಮಾತನಾಡಿ, ಶಿಬಿರಗಳಿಂದ ವಿದ್ಯಾರ್ಥಿಗಳಲ್ಲಿ ದೇಶ ಸೇವೆ ಮನೋಭಾವ ಬೆಳೆಯುತ್ತದೆ ಎಂದರು.
ಪ್ರಾಂಶುಪಾಲ ಡಾ| ಶ್ರೀನಿವಾಸ ದೊಡ್ಮನಿ, ಶ್ರೀ ಚಂದ್ರಶೇಖರ ಸ್ವಾಮೀಜಿ ಮಾತನಾಡಿದರು. ಪ್ರಾಂಶುಪಾಲ ಗುರಪ್ಪಾಚಾರ್ಯ ವಿಶ್ವಕರ್ಮ ಅಧ್ಯಕ್ಷತೆ ವಹಿಸಿದ್ದರು. ಸಂಯೋಜನಾಧಿಕಾರಿ ಸತೀಶ್ ಕುಮಾರ ಹವಲ್ದಾರ್, ಸುರೇಶ್ ಮಠ, ಬಸವರಾಜ ಜುಗೇರಿ, ಡಾ| ವೆಂಕಟೇಶ್ ಕಲಾಲ್, ದೇವೀಂದ್ರಪ್ಪ, ಗೀತಾ ಪಾಟೀಲ್, ಮಂಗಳಾ, ಸುಧಾ, ಸವಿತಾ, ವೈಶಾಲಿ, ರಾಜೇಶ್ವರಿ, ಸುಷ್ಮಾ ಕುಲಕರ್ಣಿ ಇತರರಿದ್ದರು.