ಬೆಂಗಳೂರು: ಮಾದಕ ವಸ್ತು ಮಾರಾಟ, ಸೇವನೆ ಪಿಡುಗನ್ನು ತೊಲಗಿಸುವ ಕಾರ್ಯಕ್ಕೆ ನಾಗರಿಕರು ಸಹಕಾರ ನೀಡಬೇಕು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದರು. ಶುಕ್ರವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ “ಮಾದಕ ವಸ್ತು ವಿರೋಧಿ’ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮಾದಕವಸ್ತು ಜಾಲ ಗಂಭೀರವಾಗಿ ಪರಿಗಣಿಸಬೇಕಿದೆ.
ಈ ಜಾಲದಲ್ಲಿ ಕಾಲೇಜು ವಿದ್ಯಾರ್ಥಿಗಳು, ಯುವ ಸಮೂಹ, ಸುಶಿಕ್ಷಿತರು ಬಲಿಯಾಗುತ್ತಿದ್ದಾರೆ. ಈ ಜಾಲವನ್ನು ಹೋಗಲಾಡಿಸಲು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಶ್ರಮಿಸುತ್ತಿದೆ. ನಾಗರಿಕರು ಕೈ ಜೋಡಿಸಬೇಕೆಂದರು. ಮಾದಕ ವಸ್ತು ಮಾರಾಟ, ಸೇವನೆ ಕಂಡು ಬಂದರೆ ನಾಗರಿಕರು ಟೋಲ್ ಫ್ರೀ ನಂಬರ್ 1098 ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದರು. 2019 ರಿಂದ 2020ರಲ್ಲಿ ಇಲ್ಲಿಯವರೆಗೆ ನಗರ ಪೊಲೀಸರು ಮಾದಕ ವಸ್ತು ಮಾರಾಟ ಜಾಲ ಮಟ್ಟಹಾಕಲು ಶ್ರಮಿಸಿದ್ದಾರೆ. ಡಾರ್ಕ್ ವೆಬ್ ಮೂಲಕ ನಡೆಯುತ್ತಿದ್ದ ಜಾಲವನ್ನು ಭೇದಿಸಲಾಗಿತ್ತು.
ಅಂತಾರಾಷ್ಟ್ರೀಯ ದಂಧೆಕೋರರು ಕೊರಿಯರ್ ಮೂಲಕ ನಡೆಸುತ್ತಿದ್ದ ದಂಧೆಯನ್ನು ಬಯಲಿಗೆಳೆಯಲಾಗಿತ್ತು. ಅಷ್ಟೇ ಅಲ್ಲದೆ ಈ ಜಾಲದ ವಿರುದಟಛಿ ಎನ್‌ಡಿಪಿಎಸ್ ಕಾಯಿದೆ ಅಡಿಯಲ್ಲಿ 1,174 ಪ್ರಕರಣಗಳನ್ನು ದಾಖಲಿಸಿ 44 ವಿದೇಶಿ ಪ್ರಜೆಗಳು ಸೇರಿ 1845 ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 1,016 ಕೆ.ಜಿ ಗಾಂಜಾ, 2.9 ಕೆ.ಜಿ ಅಫೀಮು, 1.5 ಕೆ.ಜಿ ಹಶೀಶ್, 345 ಗ್ರಾಂ ಕೊಕೇನ್, 85 ಗ್ರಾಂ ಚರಸ್ , 1079 ಮಾದಕ ವಸ್ತು ಮಾತ್ರೆಗಳು ಸೇರಿ ಅಪಾರ ಪ್ರಮಾಣದ ಮಾದಕ ವಸ್ತು ಜಪ್ತಿ ಮಾಡಲಾಗಿದೆ ಎಂದು ಆಯುಕ್ತರು ವಿವರಿಸಿದರು.
ಮಾದಕ ವಸ್ತು ಸಮಾಜಕ್ಕೆ ಮಾರಕ; ಬೊಮ್ಮಾಯಿ: ಮಾದಕ ವಸ್ತು ವ್ಯಕ್ತಿಗೆ ಮಾತ್ರವಲ್ಲ. ಸಮಾಜಕ್ಕೂ ಮಾರಕ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ನಮ್ಮ ದೇಶ ಮತ್ತು ರಾಜ್ಯಕ್ಕೆ ದೊಡ್ಡ ಇತಿಹಾಸವಿದೆ. ಮಾನವೀಯತೆ ಇರದ ಸ್ಥಳದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇರುವುದಿಲ್ಲ. ಸಮಾಜದಲ್ಲಿ ಯಾರೇ ಮಾದಕ ವಸ್ತು ಸೇವನೆ ಮಾಡುತ್ತಿದ್ದರೆ ತಮಗೆ ಸಂಬಂಧವಿಲ್ಲ ಎಂದು ಭಾವಿಸಬಾರದು.
ಕೂಡಲೇ ಪೊಲೀಸರು ಅಥವಾ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಬೇಕು ಎಂದು ಹೇಳಿದರು. ಇನ್ನೂ ಸಿಸಿಬಿ ಪೊಲೀಸರು ನಗರಾದ್ಯಂತ ಮಾದಕ ವಸ್ತು ಮಾರಾಟಗಾರರನ್ನು ಬಂಧಿಸಿದ್ದಾರೆ. ಪ್ರಮುಖವಾಗಿ ಕೆನಡಾ, ಆಫ್ರಿಕಾ, ಕೇರಳದವರಾಗಿದ್ದಾರೆ. ಆದರೆ, ಕೆಲ ಆರೋಪಿಗಳಿಗೆ ಬಹುಬೇಗನೆ ಜಾಮೀನು ಸಿಗುತ್ತಿದೆ. ಈ ಬಗ್ಗೆ ಸಂಶೋಧನೆ ನಡೆಯುತ್ತಿದ್ದು, ಹೊಸ ಕಾನೂನು ಜಾರಿಗೆ ತರಲು ಚಿಂತಿಸಲಾಗಿದೆ.