ಮಂಡ್ಯ: ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ನಿಷೇಧದ ನಾಮಫಲಕಗಳನ್ನು ಅಳವಡಿಸಿ ಹಾಗೂ ತಂಬಾಕು ನಿಯಂತ್ರಣ ಮಾಡುವಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿ ಕಾರಿ ಡಾ.ಟಿ.ಎನ್.ಧನಂಜಯ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ವಿ.ಸಿ .ಸಭಾಂಗಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ನಡೆದ 2021-22ನೇ ಸಾಲಿನ ಜಿಲ್ಲಾ ಮಟ್ಟದ ನಾಲ್ಕನೇ ತ್ರೆçಮಾಸಿಕ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿದರು.
ತಂಬಾಕು ಮುಕ್ತ ಗ್ರಾಪಂಗೆ ಕ್ರಮವಹಿಸಿ: ಪ್ರತಿ ತಾಲೂಕಿನ ಒಂದು ಗ್ರಾಮ ಪಂಚಾಯಿತಿ ತಂಬಾಕು ಮುಕ್ತವಾಗುವಂತೆ ಕ್ರಮ ವಹಿಸಿ, ತಂಬಾಕು ಸೇವನೆ ನಿಯಂತ್ರಣದಲ್ಲಿ ಆರಕ್ಷಕ ಇಲಾಖೆಯು ಎಲ್ಲ ಅಂಗಡಿಗಳ ಮುಂದೆ ಸೆಕ್ಷನ್-4 ಮತ್ತು 6ಎ ಪ್ರದರ್ಶಿಸಲು ಕಟ್ಟುನಿಟ್ಟಾಗಿ ಸೂಚಿಸಬೇಕು. ಪಂಚಾಯತ್ ರಾಜ್ ಇಲಾಖೆಯು ಗ್ರಾಮ ಮಟ್ಟದಲ್ಲಿ ಮತ್ತು ನಗರಾಭಿವೃದ್ಧಿ ಇಲಾಖೆಯು ನಗರ ಮಟ್ಟದಲ್ಲಿ ನಿರಂತರ ಅರಿವು ಮೂಡಿಸುತ್ತ ತಂಬಾಕು ನಿಯಂತ್ರಣದ ಬಗ್ಗೆ ಗ್ರಾಮ ಮಟ್ಟದ ಸಮನ್ವಯ ಸಮಿತಿ ಸಭೆ ನಡೆಸಬೇಕು ಎಂದರು.
ತಂಬಾಕು ತ್ಯಜಿಸುವಂತೆ ಅರಿವು ಮೂಡಿಸಿ: ಶಿಕ್ಷಣ ಇಲಾಖೆಯು ಶಾಲಾ ಮಟ್ಟದಲ್ಲಿ ಸಮಿತಿ ರಚಿಸಿ, ಮಕ್ಕಳಿಗೆ ಅರಿವು ಮೂಡಿಸಬೇಕು. ವಿದ್ಯಾಸಂಸ್ಥೆಗಳ ಸುತ್ತಮುತ್ತ 100 ಮೀಟರ್ ಅಂತರದಲ್ಲಿ ಯಾವುದೇ ರೀತಿಯ ತಂಬಾಕು ಸೇವನೆ ಹಾಗೂ ಮಾರಾಟ ಮಾಡುವಂತಿಲ್ಲ. ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ವಹಿಸಬೇಕು. ಜಿಲ್ಲಾ ಸರ್ವೇಕ್ಷಣಾಧಿ ಕಾರಿಗಳ ತಂಡ ಹೊಟೇಲ್ ಹಾಗೂ ಇನ್ನಿತರ ಸಾರ್ವಜನಿಕರ ಸ್ಥಳಗಳಲ್ಲಿ ನಿರ್ದಿಷ್ಟ ಗುಂಪು ಚರ್ಚೆಗಳ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು. ತಂಬಾಕು ತ್ಯಜಿಸುವಂತೆ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಮೇ 31ರೊಳಗೆ ತಂಬಾಕು ಮುಕ್ತ ಗ್ರಾಮ ಘೋಷಿಸಿ: ಜಿಲ್ಲೆಯ ನಗುವಿನಹಳ್ಳಿ, ಕೆಆರ್‌ಎಸ್, ಬೃಂದಾವನ, ಬಳೇಘಟ್ಟ, ಚನ್ನಪಿಳ್ಳೆಕೊಪ್ಪಲು, ಗಿಡದಬೊಪ್ಪನಹಳ್ಳಿ, ಹೆಮ್ಮನಹಳ್ಳಿ, ಚಿಕ್ಕರಸಿನಕೆರೆ, ಕೋಣನಹಳ್ಳಿ ಗ್ರಾಮಗಳನ್ನು ಮೇ 31ರೊಳಗೆ ತಂಬಾಕು ಮುಕ್ತ ಗ್ರಾಮವನ್ನಾಗಿ ಘೋಷಿಸಬೇಕು. ಮೇ 31ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲು ಸಲಹೆ ಸೂಚನೆ ನೀಡಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸಂಜಯ್, ಐಎಂಎ ನಿರ್ದೇಶಕ ಡಾ.ಮರಿಗೌಡ, ವಕೀಲ ಗುರುಪ್ರಸಾದ್, ಸಹಾಯಕ ಸಂಚಾರ ವ್ಯವಸ್ಥಾಪಕಿ ಎಂ.ಕೆ.ಪುಷ್ಪಲತಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.