ಜೇವರ್ಗಿ: ಸಹಕಾರಿ ಸಂಘಗಳ ಅಭಿವೃದ್ಧಿಗೆ ಜನರ ಸಹಕಾರ ಅಗತ್ಯವಾಗಿದೆ ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹೇಳಿದರು.
ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ಇರುವ ಭೂತಪೂರ ಕಾಂಪ್ಲೆಕ್ಸ್‌ನಲ್ಲಿ ಕೂಡಲಸಂಗಮ ಸೌಹಾರ್ದ ಸಹಕಾರಿ ನಿಯಮಿತ ನೂತನ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಹಕಾರಿ ಸಂಘಗಳು ಕೆಲವು ಅಭಿವೃದ್ಧಿ ಹೊಂದಿವೆ. ಇನ್ನು ಕೆಲವು ಅಭಿವೃದ್ಧಿ ಹೊಂದುತ್ತಿಲ್ಲ. ಇದಕ್ಕೆ ಕಾರಣ ಸಹಕಾರಿ ಸಂಘಗಳಲ್ಲಿನ ಲೋಪದೋಷ. ನಿಷ್ಠೆ, ಪ್ರಾಮಾಣಿಕತೆ, ಹೊಸತನ, ವಿಶೇಷ ಸವಲತ್ತುಗಳನ್ನು ಜನಸಾಮಾನ್ಯರಿಗೆ, ಮಹಿಳೆಯರಿಗೆ, ರೈತರಿಗೆ ತಲುಪಿಸುವ ಮೂಲಕ ಅಭಿವೃದ್ಧಿ ಹೊಂದಬೇಕು ಎಂದರು.
ಸಹಕಾರಿ ಸಂಘಗಳು ಕೇವಲ ಸಾಲ ಕೊಡುವುದಕ್ಕಷ್ಟೇ ಸೀಮಿತ ಆಗಬಾರದು. ಜನಸಾಮಾನ್ಯರೊಂದಿಗೆ, ಬೀದಿ ವ್ಯಾಪಾರಿಗಳು, ಉದ್ಯಮಿಗಳು, ರೈತರೊಂದಿಗೆ ಉತ್ತಮ ಸಂಪರ್ಕ ಹೊಂದಿ ಯಾವುದೇ ಹೊರೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ಮುಖಂಡ ರಾಜಶೇಖರ ಸೀರಿ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳಿಗೆ ಹೋಲಿಸಿದರೆ ಸಹಕಾರಿ ಸಂಘಗಳ ಮೂಲಕ ತ್ವರಿತಗತಿಯಲ್ಲಿ ಸಾಲಸೌಲಭ್ಯ ಪಡೆದುಕೊಳ್ಳಬಹುದು ಎಂದರು.
ಇದಕ್ಕೂ ಮುನ್ನ ಕೂಡಲಸಂಗಮ ಪ್ರೌಢ ಶಾಲೆ ಮುಖ್ಯಶಿಕ್ಷಕ ಬಸವರಾಜ ಬಿರಾದಾರ ನೂತನ ಶಾಖೆ ಉದ್ಘಾಟಿಸಿದರು. ಸಹಕಾರಿ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಆನಂದ ಮಹೇಂದ್ರಕರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಮುಖಂಡರಾದ ರಮೇಶಬಾಬು ವಕೀಲ, ವರ್ತಕರಾದ ಬಸವರಾಜ ಮದರಿ, ದತ್ತಾ ಚಂದನ್, ಗೋಪಾಲರಾವ್ ಮಾಲ್ಪಾಣಿ, ಮಲ್ಲಿಕಾರ್ಜುನ ಪಾಟೀಲ ಬಿರಾಳ, ಸುಭಾಶ್ಚಂದ್ರ ಭರ್ಮಾ, ಸಾಹೇಬಗೌಡ ಕಲ್ಲಾ ಮುಖ್ಯ ಅತಿಥಿಗಳಾಗಿದ್ದರು. ಸಹಕಾರಿ ಸಂಘದ ಆಡಳಿತ ಮಂಡಳಿ ಉಪಾಧ್ಯಕ್ಷೆ ವೀಣಾ ಭೂತಪೂರ, ನಿರ್ದೇಶಕರಾದ ಪ್ರೇಮಾ ಕಲ್ಲಾ, ಅನುಪಮಾ ನಾಗರಾಜ, ಚಂದ್ರಶೇಖರ ಮಡಿವಾಳಕರ್, ಕರುಣೇಶ ಘಂಟಿ, ಸೈಯದ್ ಅಬ್ಟಾಸ ಅಲಿ, ಪ್ರಮೋದಕುಮಾರ ಪತ್ತಾರ, ಸಂತೋಷಕುಮಾರ ಕಕ್ಕಳಮೇಲಿ ಮತ್ತಿತರರು ಇದ್ದರು.