ದೇವನಹಳ್ಳಿ: ಅಳಿವಿನಂಚಿನಲ್ಲಿರುವ ಕೆರೆಗಳಿಗೆ ಮೂಲ ಸ್ವರೂಪ ನೀಡಿ ಜಲ ಸಂರಕ್ಷಣೆ ಮಾಡಲು ಸ್ಥಳೀಯರ ಸಹಕಾರದ ಸಹಭಾಗಿತ್ವದಲ್ಲಿ ಕೆರೆ ಹೂಳೆತ್ತುವ ಕಾರ್ಯ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿ.ಎಸ್.ಕರೀಗೌಡ ತಿಳಿಸಿದರು. ತಾಲೂಕಿನ ಚನ್ನರಾಯ ಪಟ್ಟಣ ಹೋಬಳಿ ಬೂದಿಗೆರೆ ಗ್ರಾಮದಲ್ಲಿ ಕೆರೆ ಹೂಳೆತ್ತುವ ಕಾರ್ಯದ ಕುರಿತು ನಡೆದ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದರು.
ಕೆರೆಗಳ ಪುನಶ್ಚೇತನ ಅವಶ್ಯ: ಬೂದಿಗೆರೆ ಕೆರೆ 399 ಎಕರೆ 12 ಗುಂಟೆ ಜಾಗವಿದೆ. ಗುರುವಾರ ಹೂಳೆತ್ತುವ ಕಾಮಗಾರಿಗೆ ಚಾಲನೆ ಕೊಡಲಾಗುವುದು. ಸರ್ಕಾರದ ನಯಾ ಪೈಸೆ ಹಣ ಬಳಸದೆ ಸಾರ್ವಜನಿಕರಿಂದಲೇ ಹಣವನ್ನು ಕ್ರೋಢೀಕರಿಸಿ ಕೆರೆ ಹೂಳೆತ್ತಲಾಗುವುದು. ಕಾಮಗಾರಿಗಾಗಿ ಜೆಸಿಬಿ, ಹಿಟಾಚಿ, ಟ್ರಾÂಕ್ಟರ್ , ಲಾರಿ ಕೊಡಬಹುದು. ಕೆರೆಗಳು ಅಭಿವೃದ್ಧಿ ಆದರೆ ಮಾತ್ರ ಗ್ರಾಮಗಳ ಅಭಿವೃದ್ಧಿ. ಬತ್ತಿ ಹೋಗಿರುವ ಕೆರೆಗಳನ್ನು ಪುನಶ್ಚೇತನ ಮಾಡಬೇಕಾದ ಅನಿವಾರ್ಯತೆ ಇದೆ. ಇಲ್ಲವಾದರೆ ಉಳಿಗಾಲವಿಲ್ಲ ಎಂದು ಮನವರಿಕೆ ಮಾಡಿದರು.
ಅಂತರ್ಜಲ ಮಟ್ಟ ಹೆಚ್ಚುತ್ತೆ: ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಲಕ್ಷ್ಮೀನಾರಾಯಣ್ ಮಾತನಾಡಿ, ಜಿಲ್ಲಾಧಿಕಾರಿಗಳು ಕೆರೆ ಹೂಳೆತ್ತುವ ಕಾರ್ಯವನ್ನು ಸಾರ್ವಜನಿಕರ ಹಣದಲ್ಲಿ ಮಾಡುತ್ತಿರುವುದು ಉತ್ತಮವಾಗಿದೆ. ಚನ್ನರಾಯ ಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ಹಂತ ಹಂತವಾಗಿ ಹೂಳೆತ್ತಿದರೆ ಕೆರೆಗಳಲ್ಲಿ ಮಳೆ ನೀರು ನಿಂತು ಅಂರ್ತಜಲ ಮಟ್ಟ ಏರಿಕೆಯಾಗಲಿದೆ ಎಂದು ತಿಳಿಸಿದರು.
ಉತ್ತಮ ಬೆಳವಣಿಗೆ: ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ.ಶ್ರೀನಿವಾಸಗೌಡ ಮಾತನಾಡಿ, ಜಿಲ್ಲೆಯಲ್ಲಿ ಹಲವು ಕೆರೆಗಳನ್ನು ಸ್ಥಳೀಯರು ಅಭಿವೃದ್ಧಿಪಡಿಸುತ್ತಿರುವುದು ಉತ್ತಮ ಬೆಳೆವಣಿಗೆ. ಬೂದಿಗೆರೆ ಕೆರೆಯನ್ನು ಹೂಳೆತ್ತಿದರೆ ಕೆರೆ ಅಭಿವೃದ್ಧಿ ಹೊಂದಿ ಅಂರ್ತಜಲ ಮಟ್ಟವೂ ಹೆಚ್ಚುತ್ತದೆ. ಜನ ಜಾನುವಾರುಗಳಿಗೆ , ಪ್ರಾಣಿ ಸಂಕುಲಗಳಿಗೆ ನೀರು ದೊರೆಯಲಿದೆ ಎಂದು ಹೇಳಿದರು.
ಈ ವೇಳೆಯಲ್ಲಿ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷೆ ಭಾರತಿ , ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಂಜುನಾಥ್, ತಾಪಂ ಮಾಜಿ ಸದಸ್ಯ ಲಕ್ಷ್ಮಣ್ ಗೌಡ, ಉಪ ತಹಶೀಲ್ದಾರ್ ಚಿದಾನಂದ್, ಚೌಡಪ್ಪನಹಳ್ಳಿ ಎಂಪಿಸಿಎಸ್ ಅಧ್ಯಕ್ಷ ಶಂಕರ್, ಗ್ರಾಪಂ ಸದಸ್ಯ ರಾಮಮೂರ್ತಿ, ಬೂದಿಗೆರೆ ವಿಎಸ್‌ಎಸ್‌ಎನ್ ಅಧ್ಯಕ್ಷ ಶಂಕರಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಸಿ.ಎಸ್.ರಾಜಣ್ಣ ಹಾಗೂ ಗ್ರಾಮಗಳ ಮುಖಂಡರು ಇದ್ದರು.
ಪ್ರತಿ ಕ್ರಿಮಿ, ಕೀಟ, ಪ್ರಾಣಿ , ಪಕ್ಷಿ , ಮನುಷ್ಯ ಸೇರಿದಂತೆ ಪ್ರತಿ ಜೀವಿಗಳಿಗೂ ಹಾಗೂ ಒಂದು ಕಡ್ಡಿ ಹುಲ್ಲು ಬೆಳೆಯಲೂ ನೀರು ಬೇಕಾಗಿದೆ. ಕೆರೆ ಅಭಿವೃದ್ಧಿಗಾಗಿ ಎಲ್ಲರ ಸಹಕಾರ ಅತ್ಯವಶ್ಯವಿದೆ. ಪ್ರತಿ ಕೆರೆಗಳನ್ನು ಹೂಳೆತ್ತಲು ಜನರು ಸ್ವಯಂ ಪ್ರೇರಿತವಾಗಿ ಮುಂದೆ ಬರುತ್ತಿರುವುದು ಶ್ಲಾಘನೀಯ.
-ಕರೀಗೌಡ, ಜಿಲ್ಲಾಧಿಕಾರಿ