ಕಲಬುರಗಿ: ಸಹಕಾರ ಕ್ಷೇತ್ರ ಬಲವರ್ಧನೆಯಲ್ಲಿ ಮಹಿಳೆಯರ ಪಾತ್ರವೂ ಪ್ರಮುಖ ಎನ್ನುವುದು ಅರಿವಿಗೆ ಬಂದಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಹಕಾರ ಕ್ಷೇತ್ರದಲ್ಲಿ ತೊಡಗುವುದು ಅಗತ್ಯವಾಗಿದೆ ಎಂದು ಜಿಲ್ಲಾ ಅಭಿವೃದ್ಧಿ ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ಕವಿತಾ ಜಯಪ್ರಕಾಶ ಪಾಟೀಲ ಹೇಳಿದರು.
ಆದರ್ಶ ನಗರದ ಕಲಬುರಗಿ-ಯಾದಗಿರಿ ಜಿಲ್ಲಾಸಹಕಾರ ಯೂನಿಯನ್‌ದಲ್ಲಿ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸ್ವ ಸಹಾಯ ಗುಂಪುಗಳ ಸದಸ್ಯರಿಗೆ ಹಮ್ಮಿಕೊಳ್ಳಲಾಗಿದ್ದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಯಾವುದೇ ಕೆಲಸ ನಿರ್ವಹಿಸಬೇಕಾದರೆ ಅತ್ಯಂತ ಶೃದ್ಧೆಯಿಂದ ಮತ್ತು ತಾಳ್ಮೆಯಿಂದ ನಿರ್ವಹಿಸುತ್ತಾರೆ. ಹೀಗಾಗಿ ಯಶಸ್ವಿ ಹೊಂದಲು ಅದರಲ್ಲೂ ಸಹಕಾರಿ ಕ್ಷೇತ್ರದಲ್ಲಿ ಪ್ರಗತಿ ಹೊಂದಲು ಸಾಧ್ಯವಾಗುತ್ತಿದೆ ಎಂದರು.
ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಹಾಗೂ ರಾಜ್ಯಸಹಕಾರ ಮಹಾಮಂಡಳದ ನಿರ್ದೇಶಕ ಸಿದ್ರಾಮರೆಡ್ಡಿ ಎಸ್. ಪಾಟೀಲ ಮಾತನಾಡಿ, ಡಿಸಿಸಿ ಬ್ಯಾಂಕ್‌ನಿಂದ ಶೇ.4ರ ಬಡ್ಡಿ ದರದಲ್ಲಿ 3 ಲಕ್ಷರೂ.ವರೆಗೂ ಮಹಿಳಾ ಸಹಕಾರ ಸಂಘ-ಸಂಸ್ಥೆಗಳಿಗೆ ಹಾಗೂ ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಾಲ ನೀಡಲಾಗಿದೆ ಎಂದು ಹೇಳಿದರು.
ಕವಿತಾ ಪಾಟೀಲ, ಯೋಜನಾಧಿಕಾರಿಎಸ್.ಜಿ. ರಾಮಚಂದ್ರ ಮಾತನಾಡಿದರು. ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಶಾಂತಪ್ಪ ಪಸಾರ ಅಧ್ಯಕ್ಷತೆ ವಹಿಸಿದ್ದರು. ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೈಲಜಾ ಆರ್. ಚವ್ಹಾಣ ಸ್ವಾಗತಿಸಿದರು. ವ್ಯವಸ್ಥಾಪಕ ಚಂದ್ರಶೇಖರ ಜಿ. ಹಾವೇರಿ ವಂದಿಸಿದರು.