Advertisement

ಸಕ್ಕರೆ ಕಾರ್ಖಾನೆ ಆರಂಭಕ್ಕೆ ಸಹಕಾರ

12:01 PM May 08, 2021 | Team Udayavani |

ಚಿಂಚೋಳಿ: ಚಿಂಚೋಳಿ-ಕಲಬುರಗಿ ರಾಜ್ಯಹೆದ್ದಾರಿ ಪಕ್ಕದಲ್ಲಿ ಮೂರು ದಶಕಗಳಿಂದ ನನೆಗುದಿಗೆ ಬಿದ್ದಿರುವ ಚಿಂಚೋಳಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಉದ್ಯಮಿಗಳು ಆಸಕ್ತಿ ತೋರಿದರೆ ಸಹಕಾರ ನೀಡುತ್ತೇನೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಭರವಸೆ ನೀಡಿದರು.

Advertisement

ಚಿಂಚೋಳಿ ಸಕ್ಕರೆ ಕಾರ್ಖಾನೆಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬೆಳಗಾವಿ ಜಿಲ್ಲೆಯಲ್ಲಿ ನನ್ನ ಮಾಲೀಕತ್ವದಲ್ಲಿ ಒಟ್ಟು ಒಂಭತ್ತು ಸಕ್ಕರೆ ಕಾರ್ಖಾನೆಗಳಿವೆ. ನಮ್ಮ ಸಕ್ಕರೆ ಕಾರ್ಖಾನೆಯಲ್ಲಿ ಪ್ರತಿನಿತ್ಯ 70 ಸಾವಿರ ಟನ್‌ ಕಬ್ಬು ನುರಿಸಲಾಗುತ್ತಿದೆ. ಕಬ್ಬು ನುರಿಸುವಲ್ಲಿ ದೇಶದಲ್ಲಿಯೇ 2ನೇ ಸ್ಥಾನವನ್ನು ನಮ್ಮ ಸಕ್ಕರೆ ಕಾರ್ಖಾನೆ ಪಡೆದಿದೆ. ಅಲ್ಲದೇ ಅಲ್ಲಿ 270 ಮೆಗಾವ್ಯಾಟ್‌ ವಿದ್ಯುತ್‌ ತಯಾರಿಸಲಾಗುತ್ತಿದೆ. 25 ಲಕ್ಷ ಲೀಟರ್‌ ಇಥೆನಾಲ್‌ ಉತ್ಪಾದಿಸಲಾಗುತ್ತಿದೆ. ಸಿಎಲ್‌ಜಿ ಮತ್ತು ಸಿಎಲ್‌ಒ ಎರಡು ಇವೆ. ಅಲ್ಲದೇ ಶಿಕ್ಷಣ ಮತ್ತು ಬ್ಯಾಂಕಿಂಗ್‌ನಲ್ಲೂ ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು.

ಕಲಬುರಗಿ ಜಿಲ್ಲೆಯಲ್ಲಿ ನಾನು ಯಾವುದೇ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವುದಿಲ್ಲ. ನನಗೆ 9 ಸಕ್ಕರೆ ಕಾರ್ಖಾನೆಗಳಿವೆ 9 ನನ್ನ ಲಕ್ಕಿ ನಂಬರ್‌ ಎಂದರಲ್ಲದೇ, ಚಿಂಚೋಳಿ ಸಕ್ಕರೆ ಕಾರ್ಖಾನೆ ಖರೀದಿಸಲು ಆಸಕ್ತಿ ಇಲ್ಲ. ಪರವಾನಗಿ ನವೀಕರಣ ಮಾಡಿಕೊಡುತ್ತೇನೆ ಎಂದರು.

ನಂತರ ಈ ಭಾಗದಲ್ಲಿ ಸುಣ್ಣದ ಕಲ್ಲುಗಣಿ ಇರುವುದರಿಂದ ಸಿಮೆಂಟ್‌ ಕಂಪನಿ ಪ್ರಾರಂಭಿಸುವ ಬಗ್ಗೆ ವಿಚಾರಿಸುತ್ತೇನೆ ಎಂದು ಭರವಸೆ ನೀಡಿದರು. ಚಿಂಚೋಳಿ ವಿಧಾನಸಭೆ ಮತಕ್ಷೇತ್ರದಲ್ಲಿ 2019ರ ಉಪ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಚಿಂಚೋಳಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿ ಇಲ್ಲಿನ ರೈತರಿಗೆ ಅನೂಕೂಲ ಮಾಡಿಕೊಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದ್ದರು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆ ವೇಳೆಯಲ್ಲಿ ನಾನು ಸಚಿವನಾಗಿರಲಿಲ್ಲ. ಚುನಾವಣೆ ಪ್ರಚಾರಕ್ಕೂ ಬಂದಿರಲಿಲ್ಲ. ಈ ಕುರಿತು ಮುಖ್ಯಮಂತ್ರಿಯೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದರು.

ತಾಲೂಕಿನ ಮಿರಿಯಾಣ, ಕಿಷ್ಟಾಪುರ, ಬೈರಂಪಳ್ಳಿ ಕಲ್ಲು ಗಣಿಯಲ್ಲಿ ಕೆಲಸ ಮಾಡಿ ಬದುಕುವ ಗಣಿ ಕಾರ್ಮಿಕರಿ ಗಾಗಿ 2016ರಲ್ಲಿಯೇ ಲೀಜ್‌ ಗೆ ಅನುಮತಿ ನೀಡಲಾಗಿದೆ. ಆದರೆ ವನ್ಯಜೀವಿಧಾಮ ಅರಣ್ಯಪ್ರದೇಶಕ್ಕೆ ಹೊಂದಿಕೊಂಡಿರುವುದರಿಂದ ಕಾನೂನು ಅಡಚಣೆ ಇದೆ ಎಂದರು. ಸಂಸದ ಡಾ| ಉಮೇಶ ಜಾಧವ, ಶಾಸಕ ಡಾ| ಅವಿನಾಶ ಜಾಧವ, ಶಾಸಕ ರಾಜಕುಮಾರ ಪಾಟೀಲ, ಶಶೀಲ ನಮೋಶಿ, ಜಿಪಂ ಸದಸ್ಯ ಗೌತಮ ಪಾಟೀಲ, ಡಾ| ವಿಕ್ರಮ ಪಾಟೀಲ, ಸಂತೋಷ ಗಡಂತಿ, ಜಗದೀಶಸಿಂಗ್‌ ಠಾಕೂರ, ಅಶೋಕ ಚವ್ಹಾಣ, ಶ್ರೀಮಂತ ಕಟ್ಟಿಮನಿ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next