ವಿಜಯಪುರ: ಕನ್ನಡ ನಾಡು ನುಡಿಗಾಗಿ ಕನ್ನಡ ಸಾಹಿತ್ಯ ಪರಿಷತ್ ನಿರಂತರವಾಗಿ ಶ್ರಮಿಸುತ್ತಿದೆ. ಪರಿಷತ್‌ನ ಪ್ರತಿ ಚಟುವಟಿಕೆಗೆ ನಮ್ಮ ಇಲಾಖೆಯಿಂದ ಅಗತ್ಯ ಇರುವ ಎಲ್ಲ ಸಹಕಾರ, ನೆರವು ನೀಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈರಣ್ಣ ಆಶಾಪುರ ಹೇಳಿದರು.
ರವಿವಾರ ನಗರದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭವನದಲ್ಲಿ ಈವರೆಗೆ ಕಸಾಪ ಜಿಲ್ಲಾ ಘಟಕದ ಆಡಳಿತಾ ಧಿಕಾರಿಯಾಗಿದ್ದ ತಮಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕನ್ನಡ ನಾಡು ನುಡಿಗಾಗಿ ಉತ್ತಮ ವಾತಾವರಣವಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಮಾತ್ರವಲ್ಲ ಕನ್ನಡ ಪರ ಸಂಘಟಿತ ಸಾಂಸ್ಕೃತಿಕ ಚಟುವಟಿಕೆಗಳು ಕನ್ನಡ ಅಭಿವೃದ್ಧಿಗೆ ಪೂರಕವಾಗಿ ಹಮ್ಮಿಕೊಳ್ಳುವ ಪ್ರತಿ ಕಾರ್ಯಕ್ಕೆ ಅಗತ್ಯ ನೆರವು ನೀಡಲಾಗುತ್ತದೆ. ಇದಲ್ಲದೇ ಕನ್ನಡ ಮತ್ತ ಸಂಸ್ಕೃತಿ ಇಲಾಖೆ-ಕನ್ನಡ ಸಾಹಿತ್ಯ ಪರಿಷತ್ ಭವಿಷ್ಯದಲ್ಲಿ ಜಂಟಿಯಾಗಿ ಕನ್ನಡದ ವಿಷಯದಲ್ಲಿ ಉತ್ತಮ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಇದಲ್ಲದೇ ಎಲ್ಲರೂ ಸೇರಿ ಕನ್ನಡ ಕಟ್ಟುವ ಕೆಲಸದ ಜೊತೆಗೆ ಸಾಂಸ್ಕೃತಿಕ ಲೋಕಕ್ಕೆ ಉತ್ತಮ ಕೊಡುಗೆ ಕೊಡುವಂತೆ ಕೆಲಸ ಮಾಡೋಣ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಸಿಂಪೀರ್ ವಾಲೀಕಾರ ಮಾತನಾಡಿ, ಜಿಲ್ಲೆಯಲ್ಲಿ ಕನ್ನಡತನ ಬೆಳೆಯಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರ ಅತ್ಯಂತ ಮುಖ್ಯವಾಗಿದೆ. ಗ್ರಾಮೀಣ ಪ್ರದೇಶದ ಸೊಗಡು ಹೊರಬಿಂಬಿಸಲು ನಾವೆಲ್ಲ ಪ್ರಯತ್ನ ಪಡೋಣ, ಅಳಿದು ಹೋಗುವ ನಮ್ಮ ಕಲಾ ಸಂಸ್ಕೃತಿಯನ್ನು ಬೆಳೆಸುವ ಕೆಲಸವಾಗಬೇಕು ಎಂದರು.
ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸುವ ಕೆಲಸವಾಗಬೇಕಿದೆ. ಇದಕ್ಕಾಗಿ ಕನ್ನಡ ಕಟ್ಟುವ ಉತ್ತಮ ಕಾರ್ಯಗಳಿಗೆ ಎಲ್ಲರೂ ಸಹಕಾರ ನೀಡಿ, ಕೈ ಜೋಡಿಸಬೇಕು ಎಂದು ಮನವಿ ಮಾಡಿದರು. ಮಹಾದೇವ ರೆಬಿನಾಳ, ಮಲ್ಲಿಕಾರ್ಜುನ ಅವಟಿ, ಶಿಕ್ಷಕ ಕಬೂಲ್ ಕೊಕಟನೂರ, ಸುನೀಲ ಹಳ್ಳಿ, ಸೇರಿದಂತೆ ಇತರರು ಇದ್ದರು.