Advertisement

ಮನೆ ಗಣತಿಗೆ ಗೊಂದಲ ಸೃಷ್ಟಿಸದೆ ಸಹಕಾರ ನೀಡಿ

11:40 PM Mar 18, 2020 | mahesh |

ನಗರ: ಮನೆ ನಂಬರ್‌, ವಾಸದ ಮನೆಯ ಸ್ಥಿತಿಗತಿಗಳನ್ನು ತಿಳಿಯುವ ನಿಟ್ಟಿನಲ್ಲಿ ನಡೆಯುವ ಮನೆ ಗಣತಿಗೆ ಪ್ರತಿಯೊಬ್ಬರೂ ಸಹಕರಿಸಬೇಕು. ಮನೆಗೆ ಬಂದು ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಮಾಹಿತಿ ನೀಡಬೇಕು. ವಿರೋಧಿಸಿದರೆ ಶಿಕ್ಷಾರ್ಹ ಅಪರಾಧವಾಗುತ್ತದೆ. ಗೊಂದಲಗಳು ಉಂಟಾದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಸಂಪ್ಯದ ಪುತ್ತೂರು ಗ್ರಾಮಾಂತರ ಠಾಣಾ ಸಬ್‌ ಇನ್‌ಸ್ಪೆಕ್ಟರ್‌ ಉದಯರವಿ ಎಂ.ವೈ. ಹೇಳಿದರು.

Advertisement

ಎ. 15ರಿಂದ ಮೇ 29ರ ತನಕ ನಡೆಯಲಿರುವ ಮನೆ ಗಣತಿಯ ಅಂಗವಾಗಿ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಬುಧವಾರ ಠಾಣೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಜನಗತಿ 1948ರ ಕಾಯ್ದೆಯಂತೆ ಪ್ರತಿ ಹತ್ತು ವರ್ಷಗಳಿಗೊಮ್ಮೆ ಗಣತಿ ಕಾರ್ಯ ನಡೆಯುತ್ತಿದೆ. ಅದರಂತೆ ಈ ವರ್ಷ ಮನೆ ಗಣತಿ ಕಾರ್ಯ ನಡೆಯಲಿದ್ದು, ವಾಸದ ಮನೆಯ ಪ್ರಸ್ತುತ ಸ್ಥಿತಿಗತಿಗಳ ಮಾಹಿತಿ ಸಂಗ್ರಹಿಸಲಿದ್ದಾರೆ. ಈ ಕುರಿತು ಯಾವುದೇ ಸಂದೇಹಗಳು ಬೇಡ. ಗಣತಿ ಅಧಿಕಾರಿಗಳಿಗೆ ಅವರು ಕೇಳುವ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರ ನೀಡಬೇಕು ಎಂದು ಹೇಳಿದರು.

ಶಿಕ್ಷಾರ್ಹ ಅಪರಾಧ
ಗಣತಿದಾರರೊಂದಿಗೆ ಅನುಚಿತವಾಗಿ ವರ್ತಿಸುವಂತಿಲ್ಲ. ಅಂತಹ ಘಟನೆಗಳು ನಡೆದರೆ ಗಣತಿ ಕಾಯ್ದೆಯ ಸೆಕ್ಷನ್‌ 11ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ. ಗಣತಿ ಅಧಿಕಾರಿಗಳು ಮನೆಯವರೊಂದಿಗೆ ಅನುಚಿತವಾಗಿ ವರ್ತಿಸಿದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲು ಅವಕಾಶವಿದೆ. ಸ್ಥಳೀಯ ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಮನೆ ಗಣತಿ ಕಾರ್ಯಕ್ಕೆ ಆಗಮಿಸಲಿದ್ದು, ಅವರೊಂದಿಗೆ ಶಾಂತಿಯುತವಾಗಿ ಸಹಕರಿಸುವಂತೆ ಪಿಎಸ್‌ಐ ತಿಳಿಸಿದರು.

ಸರಳ ಕಾರ್ಯಕ್ರಮಗಳಿರಲಿ
ಕೊರೊನಾ ವೈರಸ್‌ ಮುನ್ನೆಚ್ಚರಿಕೆಗೆ ಸರಕಾರ ನೀಡಿರುವ ಸುತ್ತೋಲೆಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಜಾತ್ರೆ, ನೇಮ, ಉರೂಸ್‌ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು, ಮದುವೆ, ಸಭೆ, ಸಮಾರಂಭಗಳನ್ನು ಸರಳ ರೀತಿಯಲ್ಲಿ ಆಚರಿಸಬೇಕು. ಮಕ್ಕಳನ್ನು ಬೇಸಗೆ ಶಿಬಿರಗಳಿಗೆ ಕಳುಹಿಸದೆ ಮುಂಜಾಗ್ರತ ಕ್ರಮಗಳನ್ನು ಅನುಸರಿಸುವಂತೆ ಅವರು ಹೇಳಿದರು.

ಎಸ್‌ಡಿಪಿಐ ಅಧ್ಯಕ್ಷ ಸಿದ್ದೀಕ್‌, ಕೆದಂಬಾಡಿ ಗ್ರಾ.ಪಂ. ಸದಸ್ಯ ಬೋಳೊಡಿ ಚಂದ್ರಹಾಸ ರೈ, ಮುಂಡೂರು ಗ್ರಾ.ಪಂ. ಅಧ್ಯಕ್ಷ ಎಸ್‌. ಡಿ. ವಸಂತ, ಕೆದಂಬಾಡಿ ಗ್ರಾ.ಪಂ. ಅಧ್ಯಕ್ಷ ಪ್ರವೀಣ್‌ ಶೆಟ್ಟಿ, ಬಲಾ°ಡು ಗ್ರಾ.ಪಂ. ಅಧ್ಯಕ್ಷ ವಿನಯ, ನೆಟ್ಟಣಿಗೆ ಮುಟ್ನೂರು ಗ್ರಾ.ಪಂ. ಉಪಾಧ್ಯಕ್ಷ ಶ್ರೀರಾಂ ಪಕ್ಕಳ, ಬಡಗನ್ನೂರು ಗ್ರಾ.ಪಂ. ಸದಸ್ಯ ಗುರುಪ್ರಸಾದ್‌ ರೈ, ಮುಂಡೂರು ಸಿ.ಎ. ಬ್ಯಾಂಕ್‌ ಉಪಾಧ್ಯಕ್ಷ ಯಾಕೂಬ್‌ ಮುಲಾರ್‌, ರಾಜೇಶ್‌ ರೈ ಪರ್ಪುಂಜ, ಪಿ.ಎಂ. ಅಬ್ದುಲ್‌ ಖಾದರ್‌, ಇಬ್ರಾಹಿಂ ಮುಲಾರ್‌, ಇಸ್ಮಾಯಿಲ್‌, ಯೂಸುಫ್‌ ಗೌಸಿಯಾ, ಚೆನ್ನಪ್ಪ ಮರಿಕೆ, ಪ್ರಕಾಶ್ಚಂದ್ರ ರೈ, ಬಾಬು ಮರಿಕೆ, ನಿರಂಜನ ಕೆ., ಸದಾಶಿವ ರೈ, ಯೂಸುಫ್‌ ಕೈಕಾರ ಪಾಲ್ಗೊಂಡಿದ್ದರು.

Advertisement

ಸಿಎಎ, ಎನ್‌ಆರ್‌ಸಿಗೂ ಮನೆ ಗಣತಿಗೂ ಸಂಬಂಧವಿಲ್ಲ ಮನೆ ಗಣತಿಯು ಜನಗಣತಿಯ ಒಂದು ಭಾಗವಾಗಿದ್ದು, ಇದು ಹೊಸತಲ್ಲ. 1891ರಿಂದ ನಡೆಯುತ್ತಿದೆ. ಇದು ಸಿಎಎ ಅಥವಾ ಎನ್‌ಆರ್‌ಸಿ ಆಗಿರಬಹುದೋ ಎಂಬ ಆತಂಕ ಬೇಡ. ಮನೆ ಗಣತಿಗೂ ಸಿಎಎ, ಎನ್‌ಆರ್‌ಸಿಗೂ ಸಂಬಂಧವಿಲ್ಲ. ಮನೆ ಗಣತಿಯಲ್ಲಿ ಮನೆಯ ಸ್ಥಿತಿಗತಿ, ಪರಿಸರ, ಪಡಿತರ, ವಾಹನ, ಗ್ಯಾಸ್‌ ಇನ್ನಿತರ ಬಳಕೆಯ ಮಾಹಿತಿ ಪಡೆಯಲಿದ್ದಾರೆ. ಮನೆ ಗಣತಿಯ ಬಗ್ಗೆ ದೇವಸ್ಥಾನ, ಮಂದಿರ, ಮಸೀದಿ ಹಾಗೂ ಚರ್ಚ್‌ ಗಳಲ್ಲಿ ಮಾಹಿತಿ ನೀಡಿ ಜನರಲ್ಲಿ ಅರಿವು ಮೂಡಿಸುವಂತೆ ಪಿಎಸ್‌ಐ ಉದಯರವಿ ಅವರು ವಿನಂತಿಸಿದರು.

ನಿಯಮ ಪಾಲಿಸಿ
ವಾಹನ ಚಲಾವಣೆಯ ಸಂದರ್ಭ ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಹೆಲ್ಮೆಟ್‌, ಸೀಟ್‌ ಬೆಲ್ಟ್‌ಗಳನ್ನು ಧರಿಸುವುದು, ವಾಹನದ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಪಿಎಸ್‌ಐ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next