Advertisement

ಕೋವಿಡ್‌ ಮುಕ್ತ ತಾಲೂಕಿಗೆ ಸಹಕರಿಸಿ: ಶಾಸಕ

10:52 AM May 18, 2021 | Team Udayavani |

ದೊಡ್ಡಬಳ್ಳಾಪುರ: ಗ್ರಾಮೀಣ ಪ್ರದೇಶಗಳಲ್ಲಿನ ಸೋಂಕಿತರಿಗೆ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಂಚಾರ ಕ್ಲಿನಿಕ್‌ಗಳ ಸೌಲಭ್ಯ ಒದಗಿಸಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದರು.

Advertisement

ನಗರದ ತಾಲೂಕು ಕಚೇರಿ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ಸಹಯೋಗದಲ್ಲಿ ನಡೆದ ಕೋವಿಡ್‌ ಸಂಚಾರಿ ಕ್ಲಿನಿಕ್‌ನ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹಳ್ಳಿಗಳಲ್ಲಿ ಹೋಂ ಐಸೋಲೇಷನ್‌ಗೆ ಒಳಗಾಗಿರುವವರಿಗೆ ಸೂಕ್ತ ಚಿಕಿತ್ಸೆ ನೀಡಲು, ಈ ಮೂಲಕ ಸೋಂಕನ್ನು ತಡೆಗಟ್ಟಲು ಈ ಸಂಚಾರಿ ಕ್ಲಿನಿಕ್‌ಗಳು ಸಹಕಾರಿ ಆಗಿವೆ. ಸಾರ್ವಜನಿಕರು ಕೋವಿಡ್‌ ಮುಕ್ತ ತಾಲೂಕನ್ನಾಗಿಸಲು ಎಲ್ಲಾ ರೀತಿಯ ಸಹಕಾರ ನೀಡಬೇಕಿದೆ ಎಂದು ಮನವಿ ಮಾಡಿದರು.

ಅರಿವು ಮೂಡಿಸಿ: ಕೋವಿಡ್ ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷ್ಯ ವಹಿಸದೇ ಮೊದಲು ಸರ್ಕಾರಿ ಆಸ್ಪತ್ರೆಗಳ ವೈದ್ಯರಲ್ಲಿ ಚಿಕಿತ್ಸೆ ಪಡೆಯಬೇಕು. ಅಗತ್ಯವಿದ್ದರೆ ಕೋವಿಡ್‌ ಪರೀಕ್ಷೆ ಕಡ್ಡಾಯವಾಗಿ ಮಾಡಿಸಬೇಕು. ಈ ಬಗ್ಗೆ ಸರ್ಕಾರ ಆಸ್ಪತ್ರೆಯ ಸಿಬ್ಬಂದಿ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.

ಜಾಗೃತಿ ವಹಿಸಿ: ಸಂಚಾರ ಕ್ಲಿನಿಕ್‌ನಲ್ಲಿ ಭಾಗವಹಿಸುವ ವೈದ್ಯರು, ಪೊಲೀಸ್‌ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು,ವಾಹನ ಚಾಲಕರುಬಹಳಷ್ಟು ಮುಂಜಾಗ್ರತೆ ವಹಿಸಬೇಕಿದ್ದು, ಗ್ರಾಮಗಳಲ್ಲಿ ಕೋವಿಡ್‌ ಹಿನ್ನೆಲೆ ಚಿಕಿತ್ಸೆಗೆ ತೆರಳದೆ ಇರುವವರನ್ನು ಗುರುತಿಸಿ ತಪಾಸಣೆಗೆ ಒಳಪಡಿಸಲು ಸಲಹೆ ನೀಡುವುದರ ಜೊತೆಗೆ,ಕೋವಿಡ್‌ ಸಂಪರ್ಕಿತರ ಆರೋಗ್ಯ ಸ್ಥಿತಿಗತಿ ಗಮನಿಸುವಂತೆ ಸಲಹೆ ನೀಡಿದರು.

ಕಾರ್ಯಕರ್ತೆಯರ ಸಹಕಾರ: ತಹಶೀಲ್ದಾರ್‌ ಟಿ.ಎಸ್‌. ಶಿವರಾಜ್‌ ಮಾತನಾಡಿ, 15 ಕೋವಿಡ್‌ ಚಿಕಿತ್ಸಾ ಮೊಬೈಲ್‌ ವಾಹನಗಳಿಗೆ ಚಾಲನೆ ನೀಡಲಾಗಿದೆ. ತಾಲೂಕಿನಲ್ಲಿ ಮೊದಲು 304 ಗ್ರಾಮಗಳನ್ನು

Advertisement

ಗುರುತಿಸಿದ್ದು, ಕೋವಿಡ್‌ ತಪಾಸಣಾ ಕ್ಲಿನಿಕ್‌ಮೊಬೈಲ್‌ ವಾಹನಗಳಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ, ಪೊಲೀಸ್‌ ಪ್ರಯಾಣಿಸಲಿದ್ದಾರೆ. ಇವರಿಗೆ ಸ್ಥಳೀಯವಾಗಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸಹಕರಿಸಲಿದ್ಗದಾರೆ ಎಂದು ಹೇಳಿದರು.

ಕೋವಿಡ್‌ ಸೋಂಕು ಉಲ್ಬಣವಾಗದಂತೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಸೋಂಕಿತ ವ್ಯಕ್ತಿಗಳಿಗೆ ಔಷಧೀಯ ಕಿಟ್‌ಗಳನ್ನೂ ನೀಡುವುದರ ಜೊತೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಸಂಚಾರಿ ಕ್ಲಿನಿಕ್‌ಗಳು ನೆರವಾಗಲಿದೆ. ಹೆಚ್ಚಿನ ಚಿಕಿತ್ಸೆ ಇರುವವರನ್ನು ನಗರದ ಸಾರ್ವಜನಿಕರ ಆಸ್ಪತ್ರೆಗೆ ದಾಖಲಾಗಲು ವೈದ್ಯರು ಸೂಚಿಸಲಿದ್ದಾರೆ. ಪ್ರತಿ ಗ್ರಾಮಕ್ಕೆ ಸಂಚಾರಿ ಕ್ಲಿನಿಕ್‌ ಸಿಬ್ಬಂದಿ ಮೂರು ಬಾರಿ ಭೇಟಿ ನೀಡಲಿದ್ದಾರೆ.

ಅವಶ್ಯಕತೆ ನೋಡಿಕೊಂಡು ಇನ್ನೂ ಇತರ ಗ್ರಾಮಗಳಿಗೆ ಸಂಚಾರಿ ಕ್ಲಿನಿಕ್‌ ಸೇವೆ ವಿಸ್ತರಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ, ತಾಪಂ ಇಒಮುರುಡಯ್ಯ, ಇನ್ಸ್ ಪೆಕ್ಟರ್‌ ಸುರೇಶ್‌, ಸಬ್‌ಇನ್ಸ್‌ಪೆಕ್ಟರ್‌ಗಳಾದ ಬಸವನಗೌಡ ಪಾಟೀಲ್‌, ಮಂಜುನಾಥ್‌, ಸಿಡಿಪಿಒ ಅನಿತಾಲಕ್ಷ್ಮೀ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next