Advertisement

ರಸ್ತೆ ಅಗಲೀಕರಣಕ್ಕೆ ಸಹಕಾರ ಕೊಡಿ

04:14 PM Dec 20, 2019 | Team Udayavani |

ನಾಯಕನಹಟ್ಟಿ: ರಾಜ್ಯ ಹೆದ್ದಾರಿ 45ರ ಅಗಲೀಕರಣಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಲೋಕೋಪಯೋಗಿ ಇಲಾಖೆ ಎಇಇ ಸತ್ಯಪ್ಪ ಹೇಳಿದರು.

Advertisement

ಪಟ್ಟಣದಲ್ಲಿ ಹೆದ್ದಾರಿ ಅಗಲೀಕರಣ ಮಾರ್ಕಿಂಗ್‌ ಕಾರ್ಯಕ್ಕೆ ಗುರುವಾರ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪಟ್ಟಣದಲ್ಲಿ ರಾಜ್ಯ ಹೆದ್ದಾರಿ 45 ಹಾದುಹೋಗುತ್ತಿದೆ. ಜಿಲ್ಲೆಯ ಪ್ರಮುಖ ಧಾರ್ಮಿಕ ಸ್ಥಳ ಹಾಗೂ ಜನದಟ್ಟಣೆಯ ಪಟ್ಟಣವಾಗಿರುವುದರಿಂದ ಅಗಲೀಕರಣ ಆರಂಭಿಸಲಾಗಿದೆ. ಪಟ್ಟಣದ ಚಿಕ್ಕ ಕೆರೆ ಕೋಡಿ ಪ್ರದೇಶದಿಂದ ಒಳಮಠದ ಸಮೀಪದ ಪೆಟ್ರೋಲ್‌ ಬಂಕ್‌ವರೆಗೆ 1.6 ಕಿಮೀ ಹೆದ್ದಾರಿ ಅಗಲೀಕರಣಕ್ಕಾಗಿ ಅಳತೆ ಹಾಗೂ ಮಾರ್ಕಿಂಗ್‌ ಮಾಡಲಾಗಿದೆ. ಪ್ರಸ್ತುತ ಇರುವ 6.5 ಮೀಟರ್‌ ಅಗಲದ ರಸ್ತೆಯನ್ನು ಮಧ್ಯ ಭಾಗದಿಂದ ಎರಡೂ ಬದಿಯಲ್ಲಿ ತಲಾ12 ಮೀಟರ್‌ ಅಗಲಕ್ಕೆ ವಿಸ್ತರಿಸಲಾಗುವುದು.

ಈಗಾಗಲೇ ಚಳ್ಳಕೆರೆ-ಅರಭಾವಿ ರಾಜ್ಯ ಹೆದ್ದಾರಿ(45) ಅಗಲೀಕರಣವನ್ನು ಚಳ್ಳಕೆರೆಯಿಂದ ಆರಂಭಿಸಲಾಗಿದೆ. ಈಗಿದ್ದ 5.5 ಮೀಟರ್‌ ರಸ್ತೆಯನ್ನು 6.5 ಮೀಟರ್‌ಗೆ ಅಗಲೀಕರಣಗೊಳಿಸಲಾಗುತ್ತಿದೆ. ಆದರೆ ಪಟ್ಟಣ ಮಿತಿಯಲ್ಲಿ ಇದನ್ನು 24 ಮೀಟರ್‌ಗೆ ಹೆಚ್ಚಿಸಿ ದ್ವಿಪಥ ಡಾಂಬರ್‌ ರಸ್ತೆ ನಿರ್ಮಿಸಲಾಗುವುದು ಎಂದರು.

ಮಾರ್ಕಿಂಗ್‌ ಮಾಡಿರುವ ವ್ಯಾಪ್ತಿಯಲ್ಲಿರುವ ಎಲ್ಲ ಅಂಗಡಿ ಮುಂಗಟ್ಟುಗಳು ಹಾಗೂ ಗೂಡಂಗಡಿಗಳು ಮುಂದಿನ ಮೂರು ದಿನಗಳಲ್ಲಿ ತೆರವುಗೊಳಿಸಬೇಕು. ರಸ್ತೆ ಮಧ್ಯಭಾಗದ ಡಿವೈಡರ್‌ನಿಂದ ಎರಡು ಬದಿಯಲ್ಲಿ ತಲಾ 7.5 ಮೀಟರ್‌ ರಸ್ತೆ ನಿರ್ಮಿಸಲಾಗುವುದು. ನಂತರ ಎರಡೂ ಬದಿಯಲ್ಲಿ ತಲಾ 2.5 ಮೀಟರ್‌ ಜಾಗದಲ್ಲಿ ಚರಂಡಿ ಹಾಗೂ ಪುಟ್‌ಪಾತ್‌ ನಿರ್ಮಿಸಲಾಗುವುದು. ನಂತರ 2 ಮೀಟರ್‌ ಜಾಗವನ್ನು ವಿದ್ಯುತ್‌ ಕಂಬ ಹಾಗೂ ಪೈಪ್‌ಲೈನ್‌ಗೆ ಅವಕಾಶ ನೀಡಲಾಗುವುದು. ಹಾಗಾಗಿ ಈಗಿರುವ ರಸ್ತೆಯ ಮಧ್ಯದಿಂದ ಎರಡೂ ಬದಿಗೆ ತಲಾ 12 ಮೀಟರ್‌ ಮಾರ್ಕಿಂಗ್‌ ಮಾಡಲಾಗಿದೆ ಎಂದು ಹೇಳಿದರು.

ಮೂವತ್ತು ಹೆಚ್ಚು ಅಂಗಡಿ ಮುಂಗಟ್ಟುಗಳ ಮೇಲೆ ನಿಗದಿತ ಪ್ರದೇಶವನ್ನು ಅಳತೆ ಮಾಡಿದ ನಂತರ ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಕೆಂಪು ಬಣ್ಣದಿಂದ ಪ್ಲಸ್‌ ಗುರುತು ಹಾಕಿದರು. ಕೆನರಾ ಬ್ಯಾಂಕ್‌ ಎಟಿಎಂ, ವೈನ್‌ ಷಾಪ್‌ಗ್ಳು ಸೇರಿದಂತೆ ನಾನಾ ಅಂಗಡಿ ಹಾಗೂ ಮುಂಗಟ್ಟುಗಳು ಮುಂಭಾಗದ ಸ್ವಲ್ಪ ಭಾಗವನ್ನು ಕಳೆದುಕೊಳ್ಳಲಿವೆ ಎಂದು ತಿಳಿಸಲಾಯಿತು.

Advertisement

ಲೋಕೋಪಯೋಗಿ ಇಲಾಖೆ ಸೆಕ್ಷನ್‌ ಇಂಜಿನಿಯರ್‌ ಹಕೀಮ್‌, ಪಪಂ ಸದಸ್ಯರಾದ ಜೆ.ಟಿ.ಎಸ್‌ ತಿಪ್ಪೇಸ್ವಾಮಿ, ಟಿ. ಬಸಣ್ಣ, ಮನ್ಸೂರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next