Advertisement
ಶುಕ್ರವಾರ, ಪ್ರಾದೇಶಿಕ ಸಾರಿಗೆ ಕಚೇರಿ ಸಭಾಂಗಣದಲ್ಲಿ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿಯಮಿತವಾಗಿ ವಾಹನಗಳ ಆಯಿಲ್ ಬದಲಾವಣೆ ಹಾಗೂ ಏರ್, ಇಂಜೆಕ್ಟರ್ ಪರೀಕ್ಷೆ ಮೂಲಕ ಸುಸ್ಥಿತಿಯಲ್ಲಿಡಬೇಕು ಎಂದರು.
ವಾಹನಗಳಿಂದ ತೆಗೆದ ವೇಸ್ಟ್‌ಆಯಿಲ್ ಚರಂಡಿಗಳಲ್ಲಿ ಚೆಲ್ಲುವುದರಿಂದ ಪರಿಸರ ಮಲಿನವಾಗುತ್ತದೆ. ಅದನ್ನ ನಿರ್ವಹಿಸುವ ರೀತಿ ಇದೆ. ವೇಸ್ಟ್‌ಆಯಿಲ್ ನಿರ್ವಹಣೆ ಕುರಿತು ಸಣ್ಣ ಪುಟ್ಟ ಗ್ಯಾರೇಜ್‌ನವರಿಗೆ ಕಾರ್ಯಾಗಾರ ಏರ್ಪಡಿಸಲಾಗುವುದು ಎಂದು ತಿಳಿಸಿದರು. ಸಿಗ್ನಲ್ ಜಂಪ್, ಸೀಟ್‌ಬೆಲ್ಟ್ ಧರಿಸದೇ ಇರುವುದು, ಅತಿ ವೇಗ ಚಾಲನೆ, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ, ಹೆಲ್ಮಟ್ ಇಲ್ಲದೇ ದ್ವಿಚಕ್ರ ವಾಹನ ಸವಾರಿ, ಮದ್ಯ ಸೇವಿಸಿ ವಾಹನ ಚಾಲನೆ, ಓವರ್‌ಲೋಡ್ ಸೇರಿದಂತೆ 8 ರೀತಿಯ ಉಲ್ಲಂಘನೆಗಳಿಗೆ ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಕನಿಷ್ಠ 3 ತಿಂಗಳು ವಾಹನದ ಪರವಾನಗಿ ರದ್ದುಪಡಿಸಬಹುದು ಎಂದು ಅವರು ಹೇಳಿದರು.
Related Articles
Advertisement
ಪರವಾನಗಿ ಇಲ್ಲದೇ ವಾಹನ ಓಡಿಸಿದರೆ ಮೊದಲ ಬಾರಿಗೆ 1,500 ದಂಡ ವಿಧಿಲಾಗುವುದು ಹಾಗೂ ಅದನ್ನೇ ಮುಂದುವರೆಸಿದರೆ ಲೈಸೆನ್ಸ್ ರದ್ದುಪಡಿಸಲಾಗುವುದು. ಹೀಗೆ ವಿವಿಧ ರೀತಿಯ ಉಲ್ಲಂಘನೆಗಳಿಗೆ ಸುಪ್ರೀಂ ಕೋರ್ಟ್ ದಂಡ ವಸೂಲು ಮಾಡಲು ಆದೇಶಿಸಿದೆ ಎಂದು ತಿಳಿಸಿದರು.
ನಿವೃತ್ತ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ಪಿ. ನಾಗೇಂದ್ರ ಮಾತನಾಡಿ, ಆಹಾರ, ನೀರು ಇಲ್ಲದೇ ಸ್ವಲ್ಪ ಸಮಯ ಬದುಕಬಹುದು. ಆದರೆ, ಗಾಳಿಯಿಲ್ಲದೇ ಬದುಕಲು ಸಾಧ್ಯವಿಲ್ಲ. ಅಂತಹ ಅಮೂಲ್ಯವಾದ ಗಾಳಿಯನ್ನ ಮಲಿನವಾಗದಂತೆ ಸಂರಕ್ಷಿಸಬೇಕಿದೆ. ಪ್ರತಿಯೊಬ್ಬರಲ್ಲಿ ಪರಿಸರ ಕಾಳಜಿ ಬೆಳೆಯಬೇಕು. ಹಸಿರು ಹಾಗೂ ಮೋಡ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಗಿಡ ಮರಗಳು ದಟ್ಟವಾಗಿದ್ದಲ್ಲಿ ಮಳೆಯಾಗುತ್ತದೆ. ಹೆಚ್ಚು ಗಿಡ-ಮರ ಬೆಳೆಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.
ಪರಿಸರ ಮಾಲಿನ್ಯದಿಂದ ಭೂಮಿಗೆ ರಕ್ಷಾ ಕವಚದಂತಿರುವ ಓಜೋನ್ ಪದರದಲ್ಲಿ ರಂಧ್ರಗಳು ಉಂಟಾಗಿ ಜನರ ಮೇಲೆದುಷ್ಪರಿಣಾಮ ಉಂಟಾಗುತ್ತಿದೆ. ಹಾಗಾಗಿ ಪರಿಸರ ಮಾಲಿನ್ಯ ತಡೆಗಟ್ಟಬೇಕು. ನಗರಪಾಲಿಕೆಯವರು ಗಿಡ ಮರ ಬೆಳೆಸುವುದನ್ನು ಕಡ್ಡಾಯಗೊಳಿಸಿ ಮನೆ ಕಟ್ಟಿಕೊಳ್ಳಲು ಪರವಾನಗಿ ನೀಡುವಂತಾಗಬೇಕು. ಮಾಲಿನ್ಯ ಮಂಡಳಿಯವರು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಪ್ರತಿ ಗಾಡಿಯನ್ನು ಪರೀಕ್ಷಿಸಿ, ನಿಯಮಾನುಸಾರ ದಂಡ ವಿಧಿಸುವ ಹಾಗೂ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಆಶಿಸಿದರು. ಜಿಲ್ಲಾ ಖಾಸಗಿ ಬಸ್ ಮಾಲಿಕರ ಸಂಘದ ಅಧ್ಯಕ್ಷ ಕಣವಿಹಳ್ಳಿ ಮಂಜುನಾಥ್ ಮಾತನಾಡಿ, ಈಚೆಗೆ ವಾಹನಗಳ ಸಂಖ್ಯೆ
ಹೆಚ್ಚಿದೆ. ಎಲ್ಲರೂ ವೈಯಕ್ತಿಕ ವಾಹನಗಳ ಬಳಕೆ ಕಡಿಮೆ ಮಾಡಿ ಸಾರ್ವಜನಿಕ ಬಸ್, ಸೈಕಲ್ ಬಳಕೆ ಹೆಚ್ಚು ಮಾಡಬೇಕು ಎಂದು ಮನವಿ ಮಾಡಿದರು. ವಿಜ್ಞಾನ ಶಿಕ್ಷಕ ಸಿ. ನಾಗರಾಜ್ ಮಾತನಾಡಿ, ಇಂಧನ ಉರಿಸುವಿಕೆ ಹಾಗೂ ಕೈಗಾರಿಕೆಯಿಂದ ಯಥೇಚ್ಚವಾಗಿ ವಾಯು ಮಾಲಿನ್ಯವಾಗುತ್ತಿದೆ. ಇಂಧನ ಸರಿಯಾಗಿ ಸುಡದಿದ್ದರೆ ಹೆಚ್ಚು ಹೊಗೆ ಉಗುಳುತ್ತದೆ. ಪ್ರತಿ ವಾಹನದ ಇಂಜಿನ್‌ನ ದಕ್ಷತೆ ಪರೀಕ್ಷಿಸಬೇಕು. ವಾಯು ಮಾಲಿನ್ಯ ಪರೀಕ್ಷೆಯ ಬಗ್ಗೆ ಇನ್ನೂ ಹೆಚ್ಚಿನ ಅರಿವು ಮೂಡಿಸಬೇಕು ಎಂದರು. ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಪ್ರಯುಕ್ತ ಎಸ್‌ಪಿಎಸ್ ನಗರ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಏರ್ಪಡಿಸಲಾಗಿದ್ದ ಭಾಷಣ ಮತ್ತು ಚಿತ್ರಕಲೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.