ಕೆಂಗೇರಿ: ಸಾರ್ವಜನಿಕರು ಎಚ್ಚೆತ್ತುಕೊಂಡು ಮನೆಯಲ್ಲಿಯೇ ಇರುವುದರ ಮೂಲಕ ಕೋವಿಡ್ 19 ಸೋಂಕು ಯಾರಿಗೂ ಹರಡದಂತೆ ಸಹಕರಿಸಬೇಕು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮನವಿ ಮಾಡಿದರು.
ಮಾಗಡಿ ರಸ್ತೆ ಭಾರತ್ ನಗರದ ಶಾಸಕರ ಕಚೇರಿಯಲ್ಲಿ ಕೋವಿಡ್ 19 ಸಂಬಂಧ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಬಡವರು, ಕಟ್ಟಡ ಕಾರ್ಮಿಕರು,ಕೂಲಿ ಕಾರ್ಮಿಕರಿಗೆ ಆಹಾರ, ಕುಡಿಯುವ ನೀರಿನ ಸಮಸ್ಯೆಯಾಗದಂತೆ ಪ್ರತಿ ವಾರ್ಡ್‌ಗೆ 10 ಜನರ ಸ್ವಯಂಸೇವಕರನ್ನು ನೇಮಿಸಲಾಗಿದ್ದು 24×7 ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಯುಧ್ದೋಪಾದಿಯಲ್ಲಿ ಬಿಬಿಎಂಪಿ ಜಂಟಿ ಆಯುಕ್ತರು,ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿ, ತಹಶೀಲ್ದಾರ್,ಪೊಲೀಸ್ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ನಿರಂತರ ಸಂಪರ್ಕದಲ್ಲಿರುತ್ತಾರೆಂದರು. ಇದೇ ವೇಳೆ ಹೂ, ಹಣ್ಣು, ತರಕಾರಿ ತರುವ ರೈತರಿಗೆ ಪೊಲೀಸ್ ಅಧಿಕಾರಿಗಳು ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದು ಎಂದು ತಾಕೀತು ಮಾಡಿದರು.
ಬೆಂಗಳೂರು ದಕ್ಷಿಣ ವಿಭಾಗದ ಉಪ ವಿಭಾಗಾಧಿಕಾರಿ ಡಾ.ಶಿವಣ್ಣ, ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು ಸಾರ್ವಜನಿ ಕರಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ಉಪ ಪೋಲೀಸ್ ಅಧೀಕ್ಷಕ ಲಕ್ಷ್ಮಿನಾರಾಯಣ, ಕೆಲವು ಗ್ರಾಮಗಳಲ್ಲಿ ರಸ್ತೆಗೆ ಅಡ್ಡಲಾಗಿ ಮರದ ದಿಂಡು-ಕಲ್ಲುಗಳನ್ನು ಹಾಕಲಾಗಿದ್ದು, ಗ್ರಾಮಸ್ಥರ ಮನವೂಲಿಸಿ ತೆಗೆಸಲಾಗಿದೆ ಎಂದರು.
ಬಿಬಿಎಂಪಿ ಆರೋಗ್ಯ ಇಲಾಖೆ ಉಪ ಆರೋಗ್ಯಾಧಿಕಾರಿ ಡಾ.ಮನೋರಂಜನ್ ಹೆಗಡೆ, ಪೊಲೀಸ್ ಇನ್ಸ್ ಪೆಕ್ಟರ್ ಎ.ರಾಜೀವ್, ಬೆಂಗಳೂರು ದಕ್ಷಿಣ ತಾಲೂಕು ಅರೋಗ್ಯಾಧಿಕಾರಿ ಡಾ.ಧನ್ಯಾ, ಬಿಬಿಎಂಪಿ ಜಂಟಿ ಆಯುಕ್ತ ಡಿ.ಎನ್.ಜಗದೀಶ್, ಹೇರೋಹಳ್ಳಿ ಪಾಲಿಕೆ ಸದಸ್ಯ ರಾಜಣ್ಣ, ಮುಖ್ಯ ಎಂಜಿನಿಯರ್ ವಿಜಯಕುಮಾರ್, ಮುಖಂಡರಾದ ಅನಂತರಾಜು, ಅಂಜನ್‌ಕುಮಾರ್, ನಿಖೀಲ್ ಇದ್ದರು.