Advertisement

“ಅಡ್ಡ  ಮತದಾನ ಮಾಡಲು ಹೇಳಿದ್ದೇ ಕುಮಾರಸ್ವಾಮಿ’

10:49 AM Apr 10, 2017 | Team Udayavani |

ಬೆಂಗಳೂರು: “ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಅಡ್ಡ ಮತದಾನ ಮಾಡಲು ಹೇಳಿದ್ದೇ ಕುಮಾರಣ್ಣ. ಯಾವ ದೇವಸ್ಥಾನಕ್ಕೆ ಬಂದ್ರೂ, ಪ್ರಮಾಣ ಮಾಡಲು ಸಿದ್ಧ ‘ ಎಂದು ಮಾಜಿ ಸಚಿವ ಜಮೀರ್‌ ಅಹಮದ್‌ ಹೇಳಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, “ನಾನೂ ಸೇರಿದಂತೆ ಏಳು ಶಾಸಕರಿಗೆ ಜೆಡಿಎಸ್‌ನಲ್ಲೇ ಬದುಕಬೇಕು ಎಂದೇನಿಲ್ಲ. ಕುಮಾರಸ್ವಾಮಿಯವರಿಗೆ ರಾಜಕೀಯ ಅನಿವಾರ್ಯ ಇರಬಹುದು, ನಾವ್ಯಾರೂ ರಾಜಕೀಯ ನಂಬಿ ಬದುಕುತ್ತಿಲ್ಲ. ಜನರಿಗಾಗಿ ಸ್ವಾಭಿಮಾನ ಬಿಟ್ಟು ಜೆಡಿಎಸ್‌ನಲ್ಲಿದ್ದೇವೆ. ನಮ್ಮ ಕ್ಷೇತ್ರದಲ್ಲಿ ಎಷ್ಟೇ ಪರ್ಯಾಯ ನಾಯಕತ್ವ ಸೃಷ್ಟಿ ಮಾಡಿದ್ರು ಜನರ ತೀರ್ಮಾನ ಅಂತಿಮ.

ಈಗಲೂ ನಾನು ಕುಮಾರಸ್ವಾಮಿಯವರಿಗೆ ಸವಾಲು ಹಾಕುತ್ತೇನೆ. ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಕುಮಾರಸ್ವಾಮಿ ಹೇಳಿದಂತೆಯೇ ನಾವು ನಡೆದುಕೊಂಡಿದ್ದೇವೆ. ಅಡ್ಡ ಮತದಾನ ಮಾಡಲು ಅವರೇ ಹೇಳಿದ್ದು, ಯಾವ ದೇವಸ್ಥಾನಕ್ಕೆ ಬಂದರೂ  ಪ್ರಮಾಣ ಮಾಡಲು ಸಿದ್ಧ. ಯಾಕೆಂದರೆ ಅಡ್ಡ ಮತದಾನ ಮಾಡಿದ ಸತ್ಯ ರಾಜ್ಯದ ಜನತೆಗೆ ಗೊತ್ತಾಗಬೇಕಿದೆ’ ಎಂದರು.

“ಜೆಡಿಎಸ್‌ ಬಿಡಬೇಕು ಎಂದು ನಾವು ಎಂದೂ ಅಂದುಕೊಳ್ಳಲಿಲ್ಲ. ಆದರೆ, ಪಕ್ಷದ ನಾಯಕರೇ ನಾವು ಬೇಡ ಎಂದು ತೀರ್ಮಾನ ಮಾಡಿದರು. ಹೀಗಾಗಿ, ನಾವು ಬಿಜೆಪಿಗಂತೂ ಹೋಗಲು ಸಾಧ್ಯವಿಲ್ಲದ ಕಾರಣ ಕಾಂಗ್ರೆಸ್‌ ಸೇರಲು ನಿರ್ಧರಿಸಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಜತೆಗೂ ಮಾತನಾಡಿದ್ಧೇವೆ. ಹೂವು ಹಿಡಿದ್ರೆ ಬೀಳ್ತೀವೆ, ಕೈ ಹಿಡಿದ್ರೆ ಏಳ್ತೀವಿ, ಜೆಡಿಎಸ್‌ನಿಂದ ಆಹ್ವಾನ ಬಂದ್ರೂ ಮತ್ತೂಮ್ಮೆ ಯೋಚನೆ ಮಾಡ್ತೀವಿ’ ಎಂದು ಮಾರ್ಮಿಕವಾಗಿ ನುಡಿದರು.

ಭೇಟಿ ನಿರಾಕರಿಸಿದ್ದು ಸರಿಯಲ್ಲ:
ಶ್ರೀರಂಗಪಟ್ಟಣ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಅವರು ಸಹೋದರಿ ವಿವಾಹಕ್ಕೆ ಆಮಂತ್ರಣ ನೀಡಲು ಬಂದಾಗ ಎಚ್‌.ಡಿ.ಕುಮಾರಸ್ವಾಮಿಯವರು ಭೇಟಿಗೆ ನಿರಾಕರಿಸಿದ್ದು ಸರಿಯಲ್ಲ ಎಂದು ಜಮೀರ್‌ ಅಹಮದ್‌ ಬೇಸರ ವ್ಯಕ್ತಪಡಿಸಿದರು. 

Advertisement

ರಾಜಕೀಯ ಏನೇ ಇರಲಿ, ವೈಯಕ್ತಿಕವಾಗಿ ಕುಮಾರಣ್ಣ ಅವರ ಬಗ್ಗೆ ಅತೀವ ಗೌರವ ಇಟ್ಟುಕೊಂಡಿದ್ದ ನಮಗೆ ಈ ವರ್ತನೆ ನೋವು ತರಿಸಿದೆ ಎಂದು ಹೇಳಿದರು. ಕುಮಾರಸ್ವಾಮಿಯವರ ಜತೆ ರಾಜಕೀಯ ಮಾಡಿರುವ ಅನುಭವದ ಆಧಾರದ ಮೇಲೆ ಅವರು ಒಳ್ಳೆಯವರು ಎಂದು ಭಾವಿಸಿದ್ದೆ. ಆದರೆ, ಅವರಿಗೆ ದೊಡ್ಡ ಮನಸ್ಸು ಇಲ್ಲ ಎಂಬುದು ಮೊನ್ನೆಯ ಘಟನೆಯಿಂದ ಸಾಬೀತಾಗಿದೆ. ಪಕ್ಷದ ಶಾಸಕರೊಬ್ಬರು ಮದುವೆ ಆಮಂತ್ರಣ ಕೊಡಲು ಹೋದಾಗ ಸ್ವೀಕರಿಸಬೇಕಿತ್ತು. ಮನೆ ಬಾಗಿಲಿಗೆ ಬಂದವರನ್ನು ಮನೆಯೊಳಗೆ ಬಿಟ್ಟಕೊಳ್ಳದಿರುವುದು ಸರಿಯೇ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next