Advertisement

ಕೂಳೂರು ಸೇತುವೆ ಸಂಚಾರ ಸ್ಥಗಿತ ಸದ್ಯಕ್ಕಿಲ್ಲ !

12:51 AM Jul 02, 2019 | mahesh |

ಮಹಾನಗರ: ಮಂಗಳೂರು – ಉಡುಪಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಾ.ಹೆ.66ರಲ್ಲಿ ಕೂಳೂರುವಿನಲ್ಲಿರುವ 67 ವರ್ಷಗಳ ಹಳೆಯ ಕಮಾನು ಸೇತುವೆ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂಬ ತಜ್ಞರ ವರದಿಯ ಆಧಾರದಲ್ಲಿ ಘನ ವಾಹನ ಗಳ ಸಂಚಾರವನ್ನು ಕೆಲವೇ ದಿನಗಳಲ್ಲಿ ಸಂಪೂರ್ಣ ಸ್ಥಗಿತಗೊಳಿಸುವಂತೆ ಜೂ. 4ರಂದು ದ.ಕ. ಜಿಲ್ಲಾಡಳಿತ ಆದೇಶಿ ಸಿದ್ದರೂ ಅದು ಇನ್ನೂ ಕೂಡ ಜಾರಿಗೆ ಬಂದಿಲ್ಲ !

Advertisement

ಎಲ್ಪಿಜಿ ಸಾಗಾಟ ಮಾಡುವ ಟ್ಯಾಂಕರ್‌ಗಳನ್ನು ಹಳೆಯ ಸೇತುವೆಯಲ್ಲಿ ಸಂಚರಿಸುವುದನ್ನು ನಿಷೇಧಿಸಿದರೆ ಅವರಿಗೆ ಪರ್ಯಾಯವಾಗಿ ಇರುವ ಮಾರ್ಗಗಳು ಸಮಸ್ಯೆ, ಅಪಾಯಕಾರಿಯಾಗಿವೆ. ಹಾಗಾಗಿ ಎಲ್ಪಿಜಿ ಟ್ಯಾಂಕರ್‌ನವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸೇತುವೆ ಮೇಲಿನ ಸಂಚಾರ ಸ್ಥಗಿತ ತಡವಾಗಿದೆ.

ಇನ್ನೊಂದು ಸರ್ವೆಗೆ ಚಿಂತನೆ
ಉಡುಪಿಯಿಂದ ಬೆಂಗಳೂರು ಕಡೆಗೆ ಹೋಗುವ ಮತ್ತು ಬೆಂಗಳೂರಿನಿಂದ ಎಂಆರ್‌ಪಿಎಲ್ ಉಡುಪಿ ಕಡೆಗೆ ಬರುವ ಬುಲೆಟ್ ಟ್ಯಾಂಕರ್‌ಗಳು ಪಡುಬಿದ್ರಿ, ಕಾರ್ಕಳ – ಗುರುವಾಯನ ಕೆರೆ- ಧರ್ಮಸ್ಥಳ ಕೊಕ್ಕಡ-ಪೆರಿಯಶಾಂತಿ ಮೂಲಕ ಸಂಚರಿಸಬೇಕು ಎಂದು ಜಿಲ್ಲಾಡಳಿತ ಸೂಚಿಸಿತ್ತು. ಕೇರಳದಿಂದ ಉಡುಪಿ ಕಡೆಗೆ ಬರುವ ಬುಲೆಟ್ ಟ್ಯಾಂಕರ್‌ಗಳು ಕೆ.ಪಿ.ಟಿ.ಯಿಂದ ಕಾವೂರು ಬಜಪೆ ಕಾನ ಸುರತ್ಕಲ್ ಮೂಲಕ ಸಂಚರಿಸಲು ಸೂಚಿಸಿತ್ತು. ಈ ಮಾರ್ಗವು ಟ್ಯಾಂಕರ್‌ ಸಾಗಾಟಕ್ಕೆ ಪೂರಕವಾಗಿಲ್ಲ ಎಂದು ಸಂಬಂಧಪಟ್ಟ ಎಲ್ಪಿಜಿ ಟ್ಯಾಂಕರ್‌ನವರಿಂದ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿತ್ತು. ಇದರಂತೆ ಮಂಗಳೂರು ಸಹಾಯಕ ಆಯುಕ್ತರು, ಎನ್‌.ಎಚ್. ಅಧಿಕಾರಿಗಳು, ಟ್ರಾಫಿಕ್‌ ಪೊಲೀಸ್‌ ಸಹಿತ ಇತರ ಅಧಿಕಾರಿಗಳಿಂದ ರಚಿತವಾದ ಸಮಿತಿಯಲ್ಲಿ ಈ ಸಂಬಂಧ ಚರ್ಚೆ ನಡೆದು ಪರ್ಯಾಯ ಮಾರ್ಗಗಳ ಬಗ್ಗೆ ಇನ್ನೊಂದು ಸರ್ವೆ ನಡೆಸುವ ಬಗ್ಗೆ ಚಿಂತಿಸಲಾಗಿದೆ. ಹೀಗಾಗಿ ಒಂದು ತಿಂಗಳಿನಿಂದ ಕೂಳೂರು ಸೇತುವೆ ಸಂಚಾರ ಮಾರ್ಗ ಬದಲಾವಣೆ ಆದೇಶ ಜಾರಿಗೆ ಬಂದಿಲ್ಲ.

ಸಂಚಾರ ಅಯೋಗ್ಯ: ವರದಿ
ಭೂಸಾರಿಗೆ ಸಚಿವಾಲಯದ ನಿರ್ದೇಶನ ಅನ್ವಯ ಹೈದರಾಬಾದ್‌ನ ಆರ್ವಿ ಅಸೋಸಿಯೇಟ್ಸ್‌ ಎಂಬ ಖಾಸಗಿ ಸಂಸ್ಥೆ ಕೂಳೂರು ಸೇತುವೆ ಸ್ಥಿತಿ ಪರಿಶೀಲಿಸಿ ಘನ ವಾಹನಗಳ ಸಂಚಾರಕ್ಕೆ ‘ಅಯೋಗ್ಯ’ ಎಂದು ಈ ಹಿಂದೆಯೇ ವರದಿ ನೀಡಿತ್ತು. ಬಳಿಕ ಭಾರತ್‌ಮಾಲಾ ಯೋಜನೆ ಬಗ್ಗೆ ಸಮೀಕ್ಷೆ ನಡೆಸಿದ ತಜ್ಞರ ತಂಡ ಕೂಡ ಹಳೆ ಸೇತುವೆ ವಾಹನ ಸಂಚಾರಕ್ಕೆ ಯೋಗ್ಯ ವಾಗಿಲ್ಲ ಎಂದು ವರದಿ ನೀಡಿತ್ತು.

ತಜ್ಞರ ವರದಿ ಆಧರಿಸಿ ಪ್ರಸ್ತಾವಿತ ಹಳೆ ಸೇತುವೆ ಮತ್ತು ಸುಸ್ಥಿತಿಯಲ್ಲಿರುವ ಇನ್ನೊಂದು ಸೇತುವೆ ನಡುವೆ ನಿರ್ಮಿಸಲು ಉದ್ದೇಶಿಸಲಾಗಿರುವ 65 ಕೋಟಿ ರೂ. ವೆಚ್ಚದ ನೂತನ ಷಟ್ಪಥ ಸೇತುವೆಗೆ ಈಗಾಗಲೇ ಸರಕಾರದ ಅನುಮೋದನೆ ಕೂಡ ದೊರಕಿತ್ತು.

Advertisement

ಇನ್ನೂ ತಡವಾಗುವ ಸಾಧ್ಯತೆ
ಈ ಮಧ್ಯೆ ಸೇತುವೆ ಕಾಮಗಾರಿ ಮಾಡಲು ರಾಷ್ಟ್ರೀಯ ಹೆದ್ದಾರಿ ವಿಭಾಗದವರು ಇನ್ನು ಕೂಡ ಡಿಪಿಆರ್‌ ಸಿದ್ಧಪಡಿಸದ ಪರಿಣಾಮ ಟೆಂಡರ್‌ ಕಾರ್ಯವಾಗದೇ ಸೇತುವೆಯ ಕಾಮಗಾರಿ ಆರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದಲೂ ಸೇತುವೆ ಮೇಲೆ ಸಂಚಾರ ಸ್ಥಗಿತ ವಿಚಾರ ಇನ್ನೂ ತಡವಾಗುವ ಸಾಧ್ಯತೆಯಿದೆ.

ಮಾಹಿತಿ ಪಡೆದು ಕ್ರಮ

ಎಲ್ಪಿಜಿ ಸಾಗಾಟ ಮಾಡುವ ಟ್ಯಾಂಕರ್‌ಗಳ ಸಂಚಾರವನ್ನು ಹಳೆಯ ಸೇತುವೆಯಲ್ಲಿ ನಿಷೇಧ ಮಾಡಿದರೆ ಅವರಿಗೆ ಪರ್ಯಾಯವಾಗಿ ಇರುವ ಮಾರ್ಗಗಳು ಸಮಸ್ಯೆ ಹಾಗೂ ಅಪಾಯಕಾರಿ ಎಂಬ ಕಾರಣದಿಂದ ಎಲ್ಪಿಜಿ ಟ್ಯಾಂಕರ್‌ನವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸೇತುವೆ ಮೇಲಿನ ಸಂಚಾರ ಸ್ಥಗಿತ ತಡವಾಗಿದೆ. ಈ ಬಗ್ಗೆ ಅಧಿಕಾರಿಗಳಲ್ಲಿ ಮಾಹಿತಿ ಪಡೆದು ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು.
– ಶಶಿಕಾಂತ್‌ ಸೆಂಥಿಲ್, ದ.ಕ. ಜಿಲ್ಲಾಧಿಕಾರಿ
Advertisement

Udayavani is now on Telegram. Click here to join our channel and stay updated with the latest news.

Next