Advertisement

ಬಿಸಿಲು ನಾಡನ್ನೇನಡುಗಿಸಿದ ಚಳಿ

10:48 AM Dec 20, 2018 | Team Udayavani |

ಕಲಬುರಗಿ: ಜಿಲ್ಲೆಯ ಇತಿಹಾಸದಲ್ಲಿ ಹಗಲೊತ್ತಿನಲ್ಲಿಯೇ ಸ್ವೇಟರ್‌ ಧರಿಸಿ, ಟೋಪಿ ಹಾಕಿಕೊಂಡು ತಿರುಗಾಡುವಂತಹ ಚಳಿ ಬಿಸಿಲು ನಾಡು ಕಲಬುರಗಿ ಜಿಲ್ಲೆಯಾದ್ಯಂತ ಮುಂದುವರಿದಿದೆ.

Advertisement

ಬುಧವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಕಳೆದ ಒಂದೂವರೆ ದಶಕದ ಅವಧಿಗಿಂತ 12.4 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಇಷ್ಟೊಂದು ಪ್ರಮಾಣದ ಚಳಿಗೆ ಕಂಗಾಲಾದ ನಾಗರಿಕರು ಹೊರಕ್ಕೆ ಬರಲು ಹಿಂದೇಟು ಹಾಕಿದರು.

ವಿಪರೀತ ಚಳಿಯಿಂದಾಗಿ ಮಂಜು ವ್ಯಾಪಕವಾಗಿ ಆವರಿಸಿದ್ದರಿಂದ ಬುಧವಾರ ಮುಂಜಾವಿನಲ್ಲಿ ಹಾಗೂ ಬೆಳಗಿನ ಜಾವವೂ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಅರ್ಧ ಕಿ.ಮೀ ದೂರದ ನಂತರ ಏನೂ ಕಾಣದಷ್ಟು ಮಂಜು ಆವರಿಸಿತ್ತು. ಸೂರ್ಯೋದಯ ನಂತರ ಮೆಲ್ಲಗೆ ಮಂಜು ಕರಗಿದಾಗ ರಸ್ತೆ ಸಂಚಾರ ಎಂದಿನಂತೆ ಸುಗಮಗೊಂಡಿತು.

ಮಂಜು ಹಾಗೂ ಶೀತ ಗಾಳಿಗೆ ಮಕ್ಕಳಿಗೆ, ಮಹಿಳೆಯರಿಗೆ, ವಯೋವೃದ್ಧರಿಗೆ ತುಂಬಾ ತೊಂದರೆಯಾಗಿದೆ. ಜನ ಜಾನುವಾರಗಳಿಗೂ ತೊಂದರೆಯಾಗುವ ಸಾಧ್ಯತೆಗಳಿವೆ. ಜನವಂತೂ ಏನಪ್ಪ ಚಳಿ ಎಂದು ಹಗಲೋತ್ತಿನಲ್ಲಿಯೇ
ನಡುಗುತ್ತಿದ್ದಾರೆ. ಚಳಿಯಿಂದ ಪಾರಾಗಲು ಅಲ್ಲಲ್ಲಿ ಜನ ಬೆಂಕಿ ಹಚ್ಚಿ ಕಾಯಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಸ್ವೆಟರ್‌-ಟೋಪಿ ಖರೀದಿಗೆಂದು ಜನ ಅಂಗಡಿಗಳಿಗೆ ಮುತ್ತಿಗೆ ಹಾಕುತ್ತಿರುವ ರೀತಿಯಲ್ಲಿ ಕಂಡುಬರುತ್ತಿದೆ.

ಮಧ್ಯಾಹ್ನ ಹೊತ್ತಿಗೆ ಬಿಸಿಲಿನ ವೇಳೆ ಹೊರ ಬಂದ ನಂತರವೂ ಜನರು ಸ್ವೆಟರ್‌ ಧರಿಸಿಕೊಂಡೇ ಹೆಚ್ಚಿನ ಪ್ರಮಾಣದಲ್ಲಿ ಬರಲಾರಂಭಿಸಿದರು. ಬಿಸಿಲು ನಾಡು ಕಲಬುರಗಿಯಲ್ಲಿ ಹಗಲೋತ್ತಿನಲ್ಲೇ ಸ್ವೇಟರ್‌ ಹಾಕಿಕೊಂಡು ಬಂದ ಉದಾಹರಣೆಗಳೇ ಇರಲಿಲ್ಲ. ಮಂಗಳವಾರ ರಾತ್ರಿ 7 ಗಂಟೆ ಸುಮಾರಿಗೆ 19 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು. ಬುಧವಾರ ಮಧ್ಯಾಹ್ನ 2:30 ಗಂಟೆಗೆ 24 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾದರೆ ಸಂಜೆ ಮತ್ತೆ ಚಳಿ ಹೆಚ್ಚಾಗತೊಡಗಿತು

Advertisement

ವಾಡಿ: ಮಳೆಗಾಲದಲ್ಲೂ ಉರಿಯುವ ಬಿಸಿಲು ಕಂಡಿದ್ದ ಈ ಭಾಗದ ಜನತೆಗೆ ಚಳಿಗಾಲವೂ ಮೈನಡುಗಿಸುವಲ್ಲಿ ಸೋತಿತ್ತು. ಆದರೆ, ಕಳೆದ ಮೂರು ದಿನಗಳಿಂದ ವಾತಾವರಣ ತಂಪೇರಿದ್ದು, ಜನರಿಗೆ ಚಳಿಗಾಲದ ಅನುಭವ ತಟ್ಟಿದೆ. ಅಂಗಿ ಕಳೆದು ಓಡಾಡುತ್ತಿದ್ದ ಯುವಕರು ಈಗ ಬೆಚ್ಚನೆ ಉಡುಪು ಧರಿಸಿಕೊಂಡು ನಡುಗುತ್ತಲೇ ಚಹಾ ಅಂಗಡಿಗಳತ್ತ
ಬರುತ್ತಿದ್ದಾರೆ. ಪೌರಕಾರ್ಮಿಕರು ಗುಡಿಸಿಟ್ಟ ಬೀದಿ ಕಸ ತಂದು ಉರಿ ಹಚ್ಚುವ ಮೂಲಕ ಹುಡುಗರು ಮೈ ಕಾಯಿಸಿಕೊಳ್ಳುತ್ತಿದ್ದಾರೆ. ಚಹಾ ಎಷ್ಟೇ ಬಿಸಿ ಮಾಡಿದರೂ ನಾಲಿಗೆ ಚುರ್‌ ಎನ್ನುತ್ತಿಲ್ಲ. ಕೈಗಳನ್ನು ಬೆಂಕಿಗಿಟ್ಟರೂ ಶಾಖದ ಅನುಭವವಾಗುತ್ತಿಲ್ಲ. ಹೌದು! ವೇಗದಿಂದ ಬೀಸುತ್ತಿರುವ ಶೀತಗಾಳಿ ಎಲ್ಲವನ್ನೂ ತಣ್ಣಗಾಗಿಸುತ್ತಿದೆ. ಮೈ ಕೊರೆಯುವ ಚಳಿಯಿಂದಾಗಿ ಜನರು ಸಂಜೆ ಬಹುಬೇಗ ಮನೆ ಸೇರಿಕೊಳ್ಳುತ್ತಿದ್ದಾರೆ. ಬೆಳ್ಳಂಬೆಳಗ್ಗೆ ವಾತಾವರಣ ಮಂಜಿನಿಂದ ಕೂಡಿರುತ್ತಿದ್ದು, ಮಲೆನಾಡಿನ ಸೊಬಗೇ ಬಿಸಿಲು ನಾಡಿಗೆ ವಲಸೆ ಬಂದಂತೆ ಭಾಸವಾಗಿ ಪ್ರಕೃತಿ ಪ್ರಿಯರ ಮನಸ್ಸಿಗೆ ಹಿತ ನೀಡುತ್ತಿದೆ.

ಸಾಮಾನ್ಯವಾಗಿ ಜೋಳದ ಬೆಳೆ ಬೆಳವಣಿಗೆ ಚಳಿಗಾಲದ ಶೀತಗಾಳಿ ಮೇಲೆ ನಿಂತಿದೆ. ಈ ಬಾರಿ ಮಳೆಯೂ ಇಲ್ಲ, ಚಳಿಯೂ ಇಲ್ಲ ಎಂಬಂತಾಗಿ ಜೋಳ ಬೆಳೆದ ರೈತರು ಕಂಗಾಲಾಗಿದ್ದರು. ಏಕಾಏಕಿ ಏರುಪೇರಾದ ವಾತಾವರಣದಿಂದ ಶೀತಗಾಳಿ ರಭಸವಾಗಿ ಬೀಸುತ್ತಿದ್ದು, ಮುಗ್ಗರಿಸಲು ಅಣಿಯಾಗಿದ್ದ ಜೋಳದ ಬೆಳೆ ಚೇತರಿಸಿಕೊಂಡು ಥಳಥಳ ಹೊಳೆಯುತ್ತಿವೆ. ಹಸಿರು ಹೊತ್ತು ನಿಂತಿರುವ ಜೋಳದ ಬೆಳೆ, ಬರದ ನಾಡಿನ ಭೂರಮೆ ಕಂಗೊಳಿಸುವಂತೆ ಮಾಡಿದೆ. ಶೀತಗಾಳಿ ಹೀಗೆಯೇ ಇನ್ನಷ್ಟು ದಿನಗಳ ಕಾಲ ಮುಂದುವರಿದರೆ ಬಿಳಿ ಜೋಳ ಫಲನೀಡಲು ಅನುಕೂಲವಾಗುತ್ತದೆ ಎನ್ನುತ್ತಿದ್ದಾರೆ ರೈತರು.

ಉರಿ ಬಿಸಿಲಿಗೆ ಮೈಯೊಡ್ಡಿ ಬೆವರಿನಿಂದ ಬಸವಳಿದಿದ್ದ ವಾಡಿ ವ್ಯಾಪ್ತಿಯ ಜನರಿಗೆ ಥರಗುಟ್ಟುವಂತೆ ಮಾಡಿರುವ ಶೀತಗಾಳಿ ಮೈಚಳಿ ಬಿಡಿಸುವಲ್ಲಿ ಯಶಸ್ವಿಯಾಗಿದೆ. ವಯೋವೃದ್ಧರು ಮತ್ತು ಮಕ್ಕಳು ನೆಗಡಿ, ಕೆಮ್ಮಿನಿಂದ ಬಳಲುವಂತಾಗಿರುವುದು ಕಂಡರೆ ಚಳಿ ತೀವ್ರತೆ ಅರಿವಾಗುತ್ತದೆ. ಒಟ್ಟಾರೆ ಯುವಕರು, ಮಕ್ಕಳು, ಮಹಿಳೆಯರು, ಹಿರಿಯರು ನಡುಗುತ್ತಲೇ ಚಳಿ ಅನುಭವಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next