Advertisement

ಕೂಲ್‌ ಸ್ಯಾಂಡಲ್‌ವುಡ್‌

12:22 AM May 31, 2019 | Team Udayavani |

ಸಿನಿಮಾ ಅಂದರೆ ಹಾಗೆ, ಸದಾ ಲೆಕ್ಕಾಚಾರ ಹಾಕುತ್ತಲೇ ಇರಬೇಕು. ಅಷ್ಟಕ್ಕೂ ಸಿನಿಮಾ ಅನ್ನೋದು ‘ಲಾಟರಿ’ ಇದ್ದಂಗೆ. ಗೆದ್ದರೆ ಗೆದ್ದಂಗೆ, ಬಿದ್ದರೆ ಬಿದ್ದಂಗೆ. ಇಲ್ಲಿ ಅದೃಷ್ಟದಾಟವೂ ಮುಖ್ಯ. ತಾಕತ್ತು ಇದ್ದವರು ಚಿತ್ರಮಂದಿರದಲ್ಲಿರುತ್ತಾರೆ, ಇಲ್ಲದವರು ಹೊರ ನಡೆಯುತ್ತಾರೆ. ಇಲ್ಲೀಗ ಹೇಳಹೊರಟಿರುವುದು ಸಿನಿಮಾಗಳ ಲಾಭ-ನಷ್ಟದ ಕುರಿತು. ಹೌದು, ಚುನಾವಣೆ ಎಂಬ ಕಾರಣಕ್ಕೆ ಜನ ಚಿತ್ರಮಂದಿರಗಳತ್ತ ಸುಳಿಯಲಿಲ್ಲ. ಐಪಿಎಲ್ ಶುರುವಾಯ್ತು ಅನ್ನುವ ನೆಪ ಕೂಡ ಜನರು ಬರಲಿಲ್ಲ ಎಂಬುದಕ್ಕೆ ಬಲವಾದ ಕಾರಣವಾಯ್ತು. ಇದರಿಂದ ಅದೆಷ್ಟೋ ಚಿತ್ರಗಳಿಗೆ ಹಾಕಿದ ಬಂಡವಾಳ ಕೂಡ ವಾಪಾಸ್‌ ಬರಲಿಲ್ಲ ಎಂಬುದು ವಿಪರ್ಯಾಸ. ಸ್ಟಾರ್ ಸಿನಿಮಾ ಬಿಟ್ಟರೆ, ಹೊಸಬರ ಚಿತ್ರಗಳತ್ತ ಜನರು ಮುಖ ಮಾಡುತ್ತಿಲ್ಲ. ಎಲ್ಲೋ, ಅಲ್ಲೊಂದು ಇಲ್ಲೊಂದು ಕಂಟೆಂಟ್ ಸಿನಿಮಾ ಎಂಬ ಮಾತು ಕೇಳಿಸಿದರೆ ಮಾತ್ರ, ಆ ಚಿತ್ರ ನೋಡಲು ಒಂದಷ್ಟು ಮಂದಿ ಹಾಜರಾಗುತ್ತಾರೆ. ಅದು ಪೂರ್ಣಪ್ರಮಾಣ ಅಲ್ಲ ಅನ್ನೋದು ಗಮನಕ್ಕಿರಲಿ. ಈಗ ಚಿತ್ರಮಂದಿರಗಳಿಗೆ ‘ವಲ್ಡ್ರ್ಕಪ್‌ ಕ್ರಿಕೆಟ್’ ಎಂಬ ಗುಮ್ಮ ಭಯ ಹುಟ್ಟಿಸುತ್ತಿದೆ. ಹಾಗಂತ, ಅವರ್ಯಾರೂ ಅಷ್ಟೊಂದು ಭಯಭೀತರಾಗಿಲ್ಲ ಎಂಬುದೇ ಗಮ್ಮತ್ತಿನ ವಿಷಯ.

Advertisement

ಹೌದು, ಚುನಾವಣೆ ನಡೆದರೂ, ಐಪಿಎಲ್ ಬಂದರೂ ಸಿನಿಮಾ ನೋಡುಗರ ಸಂಖ್ಯೆ ಕಮ್ಮಿಯಾಗಿಲ್ಲ ಎಂಬುದು ಅನೇಕ ಸಿನಿಮಾ ಪಂಡಿತರ ಮಾತು. ಎಲ್ಲೋ ಕೆಲವು ಕಡೆ ಅಂತಹ ಎಫೆಕ್ಟ್ ಆಗಿದ್ದು ಬಿಟ್ಟರೆ, ಎಂದಿನಂತೆ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಯಾವುದೇ ಸಮಸ್ಯೆ ಎದುರಾಗಿಲ್ಲ ಎಂಬ ಮಾತು ಗಾಂಧಿನಗರದ ಪಂಡಿತರದ್ದು. ಮೊದಲೇ ಚಿತ್ರಮಂದಿರಗಳಿಗೆ ಜನರು ಬರುತ್ತಿಲ್ಲ ಎಂಬ ಮಾತು ಜೋರಾಗಿಯೇ ಕೇಳಿಬರುತ್ತಿದೆ. ಅದರಲ್ಲೂ ಈ ಚುನಾವಣೆ, ಐಪಿಎಲ್ ಬಂದು ತಕ್ಕಮಟ್ಟಿಗೆ ಸಿನಿಮಾ ನೋಡುಗರ ಸಂಖ್ಯೆಯನ್ನು ಕಡಿಮೆಗೊಳಿಸಿದೆ. ಇದು ಸಹಜವಾಗಿಯೇ ಚಿತ್ರಮಂದಿರದ ಮಾಲೀಕರು ಹಾಗು ನಿರ್ಮಾಪಕರಿಗೆ ಭೀತಿಯನ್ನುಂಟು ಮಾಡಿದ್ದು ಸುಳ್ಳಲ್ಲ. ಲಾಭ ಹೋಗಲಿ, ಹಾಕಿದ ಹಣ ಕೂಡ ಹಿಂದಿರುಗಲಿಲ್ಲ ಎಂಬ ಕೊರಗು ಹಲವು ನಿರ್ಮಾಪಕರದ್ದು. ಈಗ ಮತ್ತದೇ ವಲ್ಡ್ರ್ ಕಪ್‌ ಕ್ರಿಕೆಟ್ ಶುರುವಾಗುತ್ತಿದೆ. ಇದು ಸ್ಯಾಂಡಲ್ವುಡ್‌ಗೆ ಅಡ್ಡ ಪರಿಣಾಮ ಬೀರುತ್ತಾ? ಈ ಪ್ರಶ್ನೆಗೆ, ಯಾವುದೇ ಸಮಸ್ಯೆ ಆಗಲ್ಲ ಅನ್ನೋದು ಕೆಲಸಿನಿಮಾ ನಿರ್ಮಾಪಕ, ವಿತರಕರ ಭರವಸೆಯ ಮಾತು.

ಮೇ 30 ರಿಂದ ಜುಲೈ 14 ರವರೆಗೆ 46 ದಿನಗಳ ಕಾಲ ವಲ್ಡ್ರ್ ಕಪ್‌ ಕ್ರಿಕೆಟ್ ನಡೆಯಲಿದೆ. ಈ ಅಷ್ಟೂ ದಿನಗಳ ಕಾಲ ಕ್ರಿಕೆಟ್ ಜ್ವರ ಇದ್ದೇ ಇರುತ್ತೆ. ಈ ವಲ್ಡ್ರ್ಕಪ್‌ ಕ್ರಿಕೆಟ್ನಿಂದಾಗಿ ಕನ್ನಡ ಚಿತ್ರರಂಗಕ್ಕೆ ಒಂದಷ್ಟು ಹೊಡೆತ ಬೀಳುವುದು ಗ್ಯಾರಂಟಿಯಾದರೂ, ಅದು ದೊಡ್ಡ ಹೊಡೆತವಲ್ಲ ಎಂಬ ಮಾತು ಕೇಳಿಬರುತ್ತಿದೆ. ಸಾಮಾನ್ಯವಾಗಿ ಕ್ರಿಕೆಟ್ ಅಂದರೆ ಬಹಳಷ್ಟು ಮಂದಿಗೆ ಪ್ರೀತಿ. ಸಿನಿಪ್ರಿಯರು ಕ್ರಿಕೆಟ್ ನೋಡದೇ ಇರಲಾರರು. ಹೀಗಾಗಿ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಕೊಂಚ ವಿರಳ ಎಂಬುದು ಬಿಟ್ಟರೆ, ಪ್ರದರ್ಶನಕ್ಕೆ ದೊಡ್ಡ ಪೆಟ್ಟು ಬೀಳುವುದೇ ಇಲ್ಲ ಎನ್ನುತ್ತವೆ ಗಾಂಧಿನಗರದ ಮೂಲ.

ಕೆಟ್ ಪಂದ್ಯಗಳು ಮಧ್ಯಾಹ್ನ 3ಕ್ಕೆ ಶುರುವಾಗುತ್ತವೆ. ಅಂತೆಯೇ ಚಿತ್ರಮಂದಿರಗಳಲ್ಲೂ ಮಧ್ಯಾಹ್ನ 1.30ಕ್ಕೆ ಪ್ರದರ್ಶನ ಶುರುವಾಗುತ್ತವೆ. ಮಾರ್ನಿಂಗ್‌ ಶೋ ನಂತರ ಮಧ್ಯಾಹ್ನದ ಪ್ರದರ್ಶನಕ್ಕೆ ಜನ ಬರುತ್ತಾರೋ, ಇಲ್ಲವೋ ಎಂಬ ಗೊಂದಲ ಸಹಜವಾಗಿಯೇ ಇದೆ. ಬೆಳಗಿನ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಾಗದಿದ್ದರೂ, ಉಳಿದ ಮೂರು ಪ್ರದರ್ಶನಗಳಿಗೆ ತಕ್ಕಮಟ್ಟಿಗೆ ಸಮಸ್ಯೆ ತಲೆದೋರಿದರೆ ಅಚ್ಚರಿ ಇಲ್ಲ. ಮಧ್ಯಾಹ್ನ ಮೂರರ ನಂತರ ಕ್ರಿಕೆಟ್ ಶುರುವಾಗುವುದರಿಂದ ಎರಡು ಪ್ರದರ್ಶನಕ್ಕೆ ಯಾವುದೇ ಎಫೆಕ್ಟ್ ಆಗುವುದಿಲ್ಲ ಎಂಬುದನ್ನೂ ನಿರ್ಮಾಪಕರು ಬಲವಾಗಿ ನಂಬಿದ್ದಾರೆ. ಉಳಿದ ಎರಡು ಪ್ರದರ್ಶನಗಳಿಗಂತೂ ಹೊಡೆತ ಕಟ್ಟಿಟ್ಟ ಬುತ್ತಿ. ಈಗಲೂ ಸಂಜೆ ಮತ್ತು ರಾತ್ರಿಯ ಪ್ರದರ್ಶನಗಳಿಗೆ ಗ್ಯಾರಂಟಿ ಇಲ್ಲ. ಅದಕ್ಕೆ ನಿರ್ಮಾಪಕ, ವಿತರಕರು ಹೊಂದಿಕೊಂಡು ಹಲವು ವರ್ಷಗಳೇ ಕಳೆದುಹೋಗಿವೆ.

ಅಷ್ಟಕ್ಕೂ ವಲ್ಡ್ರ್ಕಪ್‌ ಕ್ರಿಕೆಟ್ ಪಂದ್ಯ ನೋಡುವ ಪ್ರೇಕ್ಷಕರು ಚಿತ್ರಮಂದಿರದತ್ತ ಮುಖ ಮಾಡುವುದಿಲ್ಲ ಎಂಬ ಸತ್ಯದ ಅರಿವು ಕೆಲ ಚಿತ್ರಮಂದಿರದ ಮಾಲೀಕರು, ನಿರ್ಮಾಪಕರಿಗೂ ಗೊತ್ತಿದೆ. ಆದರೂ, ಅದು ಅಷ್ಟೊಂದು ಪರಿಣಾಮ ಬೀರುವುದಿಲ್ಲ ಎಂಬ ನಂಬಿಕೆಯೂ ಅವರಿಗಿದೆ. ಯಾಕೆಂದರೆ, ಈಗಾಗಲೇ ಐಪಿಎಲ್ ಪಂದ್ಯಾವಳಿ ಕಣ್ಣಮುಂದೆಯೇ ನಡೆದುಹೋಗಿದೆ. ಇದರಿಂದ ಯಾವುದೇ ಸಮಸ್ಯೆ ಎದುರಾಗಿಲ್ಲ. ಎಂದಿನಂತೆಯೇ ಜನರು ಚಿತ್ರಮಂದಿರದತ್ತ ಮುಖ ಮಾಡಿದ್ದರು. ಒಳ್ಳೆಯ ಚಿತ್ರವನ್ನು ಬೆಂಬಲಿಸಿದ್ದರು. ಹಾಗಾಗಿ, ಐಪಿಎಲ್ ಅಷ್ಟೊಂದು ಸಮಸ್ಯೆ ಎನಿಸಲೇ ಇಲ್ಲ ಎಂಬುದು ಗಾಂಧಿನಗರದ ಹಲವರ ಮಾತು.

Advertisement

ವಲ್ಡ್ರ್ಕಪ್‌ ಕ್ರಿಕೆಟ್ನಿಂದ ಸಿನಿಮಾಗೆ ಪೆಟ್ಟು ಬೀಳುವುದೇ ಇಲ್ಲ ಅಂತ ಹೇಳುವುದು ಕಷ್ಟ. ಬಿದ್ದರೂ, ಅದು ಅಷ್ಟೊಂದು ಎಫೆಕ್ಟ್ ಆಗಲ್ಲವಷ್ಟೇ. ಈಗ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಕಾದಿವೆ. ಚುನಾವಣೆ ಕಾವು ಇದ್ದರೂ, ಐಪಿಎಲ್ ಶುರುವಾಗಿದ್ದರೂ, ಸಿನಿಮಾಗಳ ಬಿಡುಗಡೆಗೆ ಬ್ರೇಕ್‌ ಬಿದ್ದಿರಲಿಲ್ಲ. ಈಗ ವಲ್ಡ್ರ್ಕಪ್‌ ಕ್ರಿಕೆಟ್ ಮ್ಯಾಚ್ ಅನೌನ್ಸ್‌ ಆಗಿದ್ದರೂ, ಬಿಡುಗಡೆಯಾಗಲಿರುವ ಸಿನಿಮಾಗಳಿಗೆ ಲೆಕ್ಕವಿಲ್ಲ. ಆ ಸಾಲಿನಲ್ಲಿ ಸ್ಟಾರ್‌ ಚಿತ್ರಗಳೂ ಸೇರಿವೆ. ಇನ್ನು, ನಿರೀಕ್ಷೆಯ ಚಿತ್ರಗಳು ಆಗಸ್ಟ್‌ ನಲ್ಲಿ ತೆರೆಕಾಣುತ್ತಿವೆ. ಹಾಗಂತ, ಅವುಗಳಿಗೆ ವಲ್ಡ್ರ್ಕಪ್‌ ಭಯ ಅಂತಲ್ಲ, ವರಮಹಾಲಕ್ಷ್ಮೀ ಹಬ್ಬಕ್ಕೆ ಬರುವುದಾಗಿ ಅನೌನ್ಸ್‌ ಕೂಡ ಮಾಡಿವೆ. ದರ್ಶನ್‌ ಅಭಿನಯದ ‘ಮುನಿರತ್ನ ಕುರುಕ್ಷೇತ್ರ’ ಆಗಸ್ಟ್‌ಗೆ ಬರಲಿದೆ. ‘ಪೈಲ್ವಾನ್‌’, ‘ಭರಾಟೆ’ ಹೀಗೆ ಒಂದಷ್ಟು ಸ್ಟಾರ್‌ ನಟರ ಚಿತ್ರಗಳು ಆಗಸ್ಟ್‌ನಲ್ಲೇ ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿವೆ.

ಈಗ ವಲ್ಡ್ರ್ಕಪ್‌ ಇದ್ದರೂ, ಅದನ್ನು ಕೇರ್‌ ಮಾಡದೆ, ‘ಅಮರ್‌’, ‘ಕಮರೊಟ್ಟು ಚೆಕ್‌ಪೋಸ್ಟ್‌’, ‘ಭೀಮಸೇನ ನಳಮಹಾರಾಜ’, ‘ಹ್ಯಾಂಗೋವರ್‌’, ‘ಆಪರೇಷನ್‌ ನಕ್ಷತ್ರ’, ‘ಕಿಸ್‌’, ಸೇರಿದಂತೆ ಬಹುತೇಕ ಹೊಸಬರ ಚಿತ್ರಗಳು ಬಿಡುಗಡೆಯ ಸಾಲಿನಲ್ಲಿವೆ. ಇನ್ನು, ಸ್ಟಾರ್‌ ಚಿತ್ರಗಳೂ ಸಹ ಕ್ರಿಕೆಟ್ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಹಾಗಾಗಿ, ಶಿವರಾಜಕುಮಾರ್‌ ಅಭಿನಯದ ‘ರುಸ್ತುಂ’ ಮತ್ತು ಉಪೇಂದ್ರ ಅಭಿನಯದ ‘ಐ ಲವ್‌ ಯು’ ಚಿತ್ರಗಳು ಬಿಡುಗಡೆಯ ದಿನಾಂಕವನ್ನೂ ಘೋಷಿಸಿವೆ.

ವಲ್ಡ್ರ್ಕಪ್‌ ಕ್ರಿಕೆಟ್ ಪಂದ್ಯದಿಂದ ಕನ್ನಡ ಚಿತ್ರೋದ್ಯಮಕ್ಕೆ ಕೋಟಿಗಟ್ಟಲೆ ನಷ್ಟವಾಗುತ್ತದೆ ಎಂಬ ಮಾತುಗಳನ್ನು ಈಗ ಯಾರೂ ಒಪ್ಪಲು ರೆಡಿ ಇಲ್ಲ. ಒಂದರ್ಥದಲ್ಲಿ ಸ್ಯಾಂಡಲ್ವುಡ್‌ ಕ್ರಿಕೆಟ್ ಅನ್ನು ಅಷ್ಟೊಂದು ಸೀರಿಯಸ್‌ ಆಗಿ ತಗೊಂಡಿಲ್ಲ. ಕ್ರಿಕೆಟ್‌ಗೆ ಟಕ್ಕರ್‌ ಕೊಡುತ್ತಾ ತಮ್ಮ ಸಿನಿಮಾ ರಿಲೀಸ್‌ ಮಾಡುತ್ತಿವೆ. ಬರುವ ಎರಡು ತಿಂಗಳಲ್ಲಿ ಏನಿಲ್ಲವೆಂದರೂ 30 ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಗೆ ಕಾದಿವೆ. ವಲ್ಡ್ರ್ಕಪ್‌ ಸಮಯದಲ್ಲಿ ಆ ಚಿತ್ರಗಳನ್ನು ಬಿಡುಗಡೆ ಮಾಡಬೇಕೋ ಬೇಡವೋ ಎಂಬ ಗೊಂದಲದಲ್ಲೂ ಕೆಲ ನಿರ್ಮಾಪಕರಿದ್ದಾರೆ. ಆದರೆ, ಎರಡು ತಿಂಗಳ ಕಾಲ ತಡೆದುಕೊಳ್ಳುವ ಶಕ್ತಿ ಅವರಿಗಿಲ್ಲ. ಹಾಗಾಗಿ, ಬಂದಿದ್ದು ಬಂದುಬಿಡಲಿ ಅಂದುಕೊಂಡು, ಬಿಡುಗಡೆಯ ಜೋಶ್‌ನಲ್ಲಿದ್ದಾರೆ. ಕನ್ನಡ ಚಿತ್ರರಂಗ ಈಗ ಮೊದಲಿನಂತಿಲ್ಲ. ಪರಭಾಷಿಗರೂ ಸಹ ತಿರುಗಿ ನೋಡುವಂತಹ ಚಿತ್ರಗಳು ಬರುತ್ತಿರುವ ಹಿನ್ನೆಲೆಯಲ್ಲಿ, ತುಸು ಆಕರ್ಷಣೆ ಹೆಚ್ಚಾಗಿದೆ. ಹಾಗಾಗಿ, ಹೊಸಬರಲ್ಲೂ ಅದು ಮತ್ತಷ್ಟು ಧೈರ್ಯ ತುಂಬಿದೆ. ಆದ್ದರಿಂದ ಚುನಾವಣೆ ಬರಲಿ, ಕ್ರಿಕೆಟ್ ಮ್ಯಾಚ್ ಇರಲಿ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಮ್ಮ ಚಿತ್ರ ಬಿಡುಗಡೆ ಮಾಡುವ ಮೂಲಕ ಭರ್ಜರಿ ಬ್ಯಾಟಿಂಗ್‌ಗೆ ಸಜ್ಜಾಗುತ್ತಿದ್ದಾರೆ.

ಇಂಡಿಯಾ ಮ್ಯಾಚ್ ಮಾತ್ರ ಸಮಸ್ಯೆ
ಹಾಗಾದರೆ ಈ ವಲ್ಡ್ರ್ ಕಪ್‌ನಿಂದ ಸ್ಯಾಂಡಲ್ವುಡ್‌ಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲವೇ? ಈ ಪ್ರಶ್ನೆಗೆ ನಿರ್ಮಾಪಕ ಕಮ್‌ ವಿತರಕ ಜಯಣ್ಣ ಹೇಳುವುದು ಹೀಗೆ. ‘ಹಿಂದೆ ಐಪಿಎಲ್, ವಲ್ಡ್ರ್ಕಪ್‌ ಅಂದರೆ, ನಿರ್ಮಾಪಕರಿಗೆ ಒಂದು ಭಯ ಇರುತ್ತಿತ್ತು. ಆ ಸಮಯದಲ್ಲಿ ಚಿತ್ರ ಬಿಡುಗಡೆ ಮಾಡಲು ಹಿಂದೆ ಮುಂದೆ ನೋಡುತ್ತಿದ್ದರು. ಈಗ ಅಷ್ಟೊಂದು ಕ್ರಿಕೆಟ್ ಭಯವಿಲ್ಲ. ಆದರೂ, ಕೆಲವರು ಯೋಚಿಸಿ, ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಹಾಗೆ ನೋಡಿದರೆ, ವಲ್ಡ್ರ್ಕಪ್‌ ಬಳಿಕ ಸ್ಟಾರ್‌ ಚಿತ್ರಗಳು ರಿಲೀಸ್‌ ಆಗುತ್ತಿವೆ. ಶುರುವಿನಲ್ಲೂ ಸ್ಟಾರ್‌ ಚಿತ್ರಗಳು ಬಿಡುಗಡೆಯಾಗುತ್ತಿವೆ. ವಲ್ಡ್ರ್ಕಪ್‌ ಸಿನಿಮಾ ಪ್ರದರ್ಶನಕ್ಕೆ ಅಷ್ಟೊಂದು ದೊಡ್ಡ ಪರಿಣಾಮ ಬೀರುವುದಿಲ್ಲ. ಇಂಡಿಯಾ ಪಂದ್ಯಗಳಿದ್ದಾಗ ಸ್ವಲ್ಪ ಮಟ್ಟಿಗೆ ಎಫೆಕ್ಟ್ ಆಗಬಹುದು. ಆರೇಳು ದಿನ ಮ್ಯಾಚ್ ಬಂದಾಗ, ಗಳಿಕೆ ಕಡಿಮೆಯಾಗಬಹುದೇ ಹೊರತು, ಉಳಿದಂತೆ ಚಿತ್ರ ಪ್ರದರ್ಶನಕ್ಕೆ ಸಮಸ್ಯೆ ಆಗಲ್ಲ. ಈಗಾಗಲೇ ಬಿಡುಗಡೆಗೆ ಬಹಳಷ್ಟು ಚಿತ್ರಗಳು ಕಾದಿವೆ. ಮಳೆ ಬರಲಿ, ಐಪಿಎಲ್, ವಲ್ಡ್ರ್ಕಪ್‌ ಮ್ಯಾಚ್ ಇರಲಿ ಇವುಗಳಿಂದ ಯಾವುದೇ ಸಮಸ್ಯೆ ಎದುರಾಗಲ್ಲ. ನನ್ನ ಪ್ರಕಾರ ಭಾರತ ತಂಡದ ಪಂದ್ಯ ಇದ್ದಾಗ ಮಾತ್ರ ಜನರ ಸಂಖ್ಯೆ ಕಡಿಮೆಯಾಗಬಹುದು. ಕ್ರಿಕೆಟ್ ಶುರುವಾಗೋದು ಮಧ್ಯಾಹ್ನ ನಂತರ. ಹಾಗಾಗಿ, ಮಾರ್ನಿಂಗ್‌ ಶೋ ಮತ್ತು ಮಧ್ಯಾಹ್ನದ ಪ್ರದರ್ಶನಕ್ಕಂತೂ ಯಾವುದೇ ಅಡ್ಡಿಯಾಗಲ್ಲ. ಎಲ್ಲರೂ ಮಳೆ, ಐಪಿಎಲ್, ಎಲೆಕ್ಷನ್‌ ಎಂಬ ನೆಪ ಹೇಳುತ್ತಾರಷ್ಟೇ. ಕ್ರಿಕೆಟ್ನಿಂದ ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ. ನಿರ್ಮಾಪಕರು ಸಹ, ಈಗ ಮೊದಲಿನಂತಿಲ್ಲ. ಒಳ್ಳೆಯ ಸಿನಿಮಾ ಎಂಬ ನಂಬಿಕೆ ಇಟ್ಟುಕೊಂಡು, ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಒಳ್ಳೆಯ ಸಿನಿಮಾ ಇದ್ದರೆ, ಯಾವ ಮಳೆ, ಕ್ರಿಕೆಟ್ ಏನೂ ಮಾಡೋದಿಲ್ಲ’ ಎನ್ನುತ್ತಾರೆ ಜಯಣ್ಣ.

Advertisement

Udayavani is now on Telegram. Click here to join our channel and stay updated with the latest news.

Next