Advertisement

ಕೂಲ್‌ ಕೂಲ್‌ ಹೇರ್‌ಪ್ಯಾಕ್‌ಗಳು

09:44 AM Jun 25, 2019 | mahesh |

ಬೇಸಿಗೆಯಲ್ಲಿ ಸೂರ್ಯನ ನೇರಳಾತೀತ ಕಿರಣಗಳಿಂದ, ಕ್ಲೋರಿನ್‌ಯುಕ್ತ ನೀರು, ಬೆವರು, ಧೂಳು, ಕೊಳೆ, ಉಪ್ಪಿನ ಅಂಶದ ಅಧಿಕತೆಯಿಂದ ಕೂದಲು ಹೊಳಪು ಕಳೆದುಕೊಳ್ಳುವುದು, ಉದುರುವುದು, ತುರಿಕೆ, ಹೊಟ್ಟು ಮುಂತಾದವು ಕಾಡುತ್ತವೆ. ಬೇಸಿಗೆಗಾಗಿಯೇ ಇರುವ ಈ ವಿಶೇಷ ಹೇರ್‌ಪ್ಯಾಕ್‌ಗಳು, ಬೇಸಿಗೆಯ ಕೂದಲಿನ ತೊಂದರೆಗಳನ್ನು ನಿವಾರಣೆ ಮಾಡುತ್ತವೆ.

Advertisement

ಬಾಳೆಹಣ್ಣು, ಗುಲಾಬಿದಳ ಹಾಗೂ ಮೊಸರಿನ ಹೇರ್‌ಪ್ಯಾಕ್‌ 2 ಬಾಳೆಹಣ್ಣು, 1/4 ಕಪ್‌ ಗುಲಾಬಿದಳ, 1/2 ಕಪ್‌ ದಪ್ಪ ಮೊಸರು- ಇವೆಲ್ಲವನ್ನೂ ಬೆರೆಸಿ ಚೆನ್ನಾಗಿ ಮಿಕ್ಸರ್‌ನಲ್ಲಿ ತಿರುವಬೇಕು. ಕೂದಲಿಗೆ ಲೇಪಿಸಿ, 30 ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆಯಬೇಕು.

ಈ ಹೇರ್‌ಪ್ಯಾಕ್‌ನಲ್ಲಿ ವಿಟಮಿನ್‌ಗಳು, ಆ್ಯಂಟಿಆಕ್ಸಿಡೆಂಟ್‌ಗಳು, ಪೊಟ್ಯಾಶಿಯಂ ಹಾಗೂ ತೇವಾಂಶಕಾರಕ ದ್ರವ್ಯಗಳು ವಿಪುಲವಾಗಿದ್ದು, ಉರಿ ಬಿಸಿಲಿನ ಝಳದಿಂದ ಹೊಳಪು ಕಳೆದುಕೊಂಡಿರುವ, ಶುಷ್ಕ ಕೂದಲಿಗೆ ತುಂಬ ಕಾಂತಿ ಹಾಗೂ ಸ್ನಿಗ್ಧತೆಯನ್ನು ನೀಡುತ್ತದೆ.

ಮೊಟ್ಟೆ ಹಾಗೂ ಆಲಿವ್‌ತೈಲದ ಹೇರ್‌ಮಾಸ್ಕ್
ಒಂದು ಸಣ್ಣ ಬೌಲ್‌ನಲ್ಲಿ ಬೀಟ್‌ ಮಾಡಿದ ಮೊಟ್ಟೆಯನ್ನು ತೆಗೆದುಕೊಂಡು ಅದಕ್ಕೆ 10 ಚಮಚದಷ್ಟು ಆಲಿವ್‌ತೈಲ, 5 ಚಮಚದಷ್ಟು ಬಿಳಿ ವಿನೆಗರ್‌ ಬೆರೆಸಿ ಚೆನ್ನಾಗಿ ಕಲಕಬೇಕು. ಈ ಮಿಶ್ರಣವನ್ನು ಕೂದಲಿಗೆ ದಪ್ಪವಾಗಿ ಲೇಪಿಸಿ ಹೇರ್‌ಮಾಸ್ಕ್ ಹಾಕಬೇಕು. 20 ನಿಮಿಷಗಳ ಬಳಿಕ ಬೆಚ್ಚಗಿನ ನೀರಲ್ಲಿ ಕೂದಲು ತೊಳೆಯಬೇಕು. ಕೂದಲಿಗೆ ಅವಶ್ಯವಿರುವ ಉತ್ತಮ ಕೊಬ್ಬಿನ ಅಂಶ ಹಾಗೂ ವಿಟಮಿನ್‌ “ಈ’ ಹಾಗೂ ಪ್ರೊಟೀನ್‌ಗಳಿಂದ ಸಮೃದ್ಧವಾಗಿರುವ ಈ ಹೇರ್‌ಮಾಸ್ಕ್ ಒಣಗಿದ ಕೂದಲು, ಟಿಸಿಲೊಡೆಯುವ ಕೂದಲ ತುದಿ ಹಾಗೂ ಕೂದಲು ಉದುರುವುದನ್ನು ನಿವಾರಣೆ ಮಾಡಲು ಉತ್ತಮ.

ಕಾಯಿಹಾಲಿನ ಹೇರ್‌ಮಾಸ್ಕ್
ಈ ಹೇರ್‌ಮಾಸ್ಕ್ನ ವಿಶೇಷತೆಯೆಂದರೆ ಇದನ್ನು ರಾತ್ರಿ ಲೇಪಿಸಿ, ಮರುದಿನ ಬೆಳಿಗ್ಗೆ ತೊಳೆಯಬೇಕು. ಶೀಘ್ರ ಪರಿಣಾಮಕಾರಿಯಾಗಿದೆ. 10 ಚಮಚ ತಾಜಾ ಕಾಯಿಹಾಲಿಗೆ 2 ಹನಿಗಳಷ್ಟು ಲ್ಯಾವೆಂಡರ್‌ ತೈಲ ಬೆರೆಸಬೇಕು. ಇದನ್ನು ರಾತ್ರಿ ಮಲಗುವ ಮೊದಲು ಚೆನ್ನಾಗಿ ಕೂದಲಿಗೆ, ಬುಡದಿಂದ ತುದಿಯವರೆಗೆ ಚೆನ್ನಾಗಿ ಲೇಪಿಸಿ, ಮಾಲೀಶು ಮಾಡಬೇಕು. ತದನಂತರ ಶವರ್‌ ಕ್ಯಾಪ್‌ ಧರಿಸಿ ಮಲಗಬೇಕು. ಮರುದಿನ ಬೆಚ್ಚಗಿನ ನೀರಿನಲ್ಲಿ ಕೂದಲು ತೊಳೆಯಬೇಕು.

Advertisement

ಇದು ವಿಟಮಿನ್‌, ಕ್ಯಾಲಿಯಂ, ಖನಿಜ ಲವಣಗಳಿಂದ ಸಮೃದ್ಧವಾಗಿದ್ದು ಕೂದಲಿಗೆ ಪೋಷಣೆ ಉಂಟುಮಾಡಿ, ಕೂದಲಿನಲ್ಲಿ ಉಂಟಾಗುವ ತುರಿಕೆ, ಬೆವರುಗುಳ್ಳೆ, ತಲೆಹೊಟ್ಟು ನಿವಾರಣೆ ಮಾಡಲು ಸಹಾಯಕ. ಕೂದಲಿನ ಕಾಂತಿ ವರ್ಧಿಸುವುದರ ಜೊತೆಗೆ ಕಣ್ಣಿಗೂ ಕೂಲ್‌ ಕೂಲ್‌!

ಬೆಣ್ಣೆಹಣ್ಣು ಮೊಟ್ಟೆಯ ಹೇರ್‌ಮಾಸ್ಕ್
ಚೆನ್ನಾಗಿ ಕಳಿತ ಬೆಣ್ಣೆಹಣ್ಣಿನ ತಿರುಳು 1 ಕಪ್‌ ತೆಗೆದುಕೊಂಡು, ಅದಕ್ಕೆ ಚೆನ್ನಾಗಿ ಬೀಟ್‌ಮಾಡಿದ ಮೊಟ್ಟೆಯನ್ನು ಸೇರಿಸಿ, 8 ಚಮಚ ಆಲಿವ್‌ತೆಲ ಬೆರೆಸಬೇಕು. ಚೆನ್ನಾಗಿ ಕಲಕಿ, ಕೂದಲಿಗೆ ಲೇಪಿಸಿ ಹೇರ್‌ಮಾಸ್ಕ್ ತಯಾರಿಸಬೇಕು. 1/2 ಗಂಟೆಯ ಬಳಿಕ ತಣ್ಣೀರಿನಲ್ಲಿ ಕೂದಲು ತೊಳೆಯಬೇಕು. ಬೆಣ್ಣೆ ಹಣ್ಣಿನಲ್ಲಿರುವ “ಬಿ’ ವಿಟಮಿನ್‌ಹಾಗೂ ಕೊಬ್ಬಿನ ಅಂಶವು ಕೂದಲಿಗೆ ಪೋಷಣೆ ಒದಗಿಸುವುದರ ಜೊತೆಗೆ ಉತ್ತಮ ಡೀಪ್‌ ಕಂಡೀಷನರ್‌ನಂತೆ ಕಾರ್ಯವೆಸಗುತ್ತದೆ.

ಆಲೂಗಡ್ಡೆ ಹಾಗೂ ಎಲೋವೆರಾ ಹೇರ್‌ಪ್ಯಾಕ್‌
ಒಂದು ಆಲೂಗಡ್ಡೆಯ ಸಿಪ್ಪೆ ತೆಗೆದು ತುರಿದು ಬಳಿಕ ಹಿಂಡಿ ರಸ ತೆಗೆಯಬೇಕು. 10 ಚಮಚ ಆಲೂಗಡ್ಡೆಯ ರಸಕ್ಕೆ 5 ಚಮಚ ಎಲೋವೆರಾ ತಿರುಳು ಹಾಗೂ 2 ಚಮಚ ಬಾದಾಮಿ ಎಣ್ಣೆ ಅಥವಾ ತಾಜಾ ಕೊಬ್ಬರಿ ಎಣ್ಣೆ ಬೆರೆಸಿ ಚೆನ್ನಾಗಿ ಕಲಕಬೇಕು. ಇದನ್ನು ಕೂದಲಿಗೆ ಲೇಪಿಸಿ, 2-3 ಗಂಟೆಗಳ ಬಳಿಕ ತಣ್ಣೀರಿನಲ್ಲಿ ಕೂದಲು ತೊಳೆದರೆ ಕೂದಲು ಉದುರುವುದು, ತಲೆಹೊಟ್ಟು ನಿವಾರಣೆಯಾಗಿ, ಕೂದಲು ರೇಷ್ಮೆ ಹೊಳಪು ಪಡೆಯುತ್ತದೆ. ವಾರಕ್ಕೆ 1-2 ಬಾರಿ ಈ ಹೇರ್‌ಪ್ಯಾಕ್‌ ಬಳಸಿದರೆ ಕೂದಲು ಉದ್ದವಾಗಿ ಬೆಳೆಯಲು ಸಹಕಾರಿ.

ಹೆನ್ನಾ ಕಂಡೀಷನಿಂಗ್‌ ಹೇರ್‌ಪ್ಯಾಕ್‌
ಬೇಸಿಗೆಯ ಉಷ್ಣತೆಯಿಂದ ಉಂಟಾಗುವ ಕೂದಲಿನ ಹಾನಿಯನ್ನು ತಡೆಗಟ್ಟುವುದು ಮಾತ್ರವಲ್ಲದೆ, ದೇಹಕ್ಕೂ, ಕಂಗಳಿಗೂ ತಂಪು ಕೊಡುವ ಈ ಕೂಲ್‌ ಕೂಲ್‌ ಹೇರ್‌ಪ್ಯಾಕ್‌ ಉತ್ತಮ ಹೇರ್‌ ಕಂಡೀಷನರ್‌ ಸಹ ಆಗಿದೆ.

ಒಂದು ಕಬ್ಬಿಣದ ಪಾತ್ರೆಯಲ್ಲಿ ಚಹಾ ಡಿಕಾಕ್ಷನ್‌ 1/2 ಕಪ್‌ ತೆಗೆದುಕೊಂಡು ಅದರಲ್ಲಿ ಹೆನ್ನಾಪುಡಿ (ಮೆಹಂದಿ) ಪೌಡರ್‌ 4 ಚಮಚ ಬೆರೆಸಿ, 4 ಚಮಚ ಆಲಿವ್‌ ತೈಲ ಅಥವಾ ಕೊಬ್ಬರಿ ಎಣ್ಣೆ ಸೇರಿಸಿ, 1/2 ನಿಂಬೆಯ ರಸ ಸೇರಿಸಿ ಚೆನ್ನಾಗಿ ಕಲಕಬೇಕು. ಮರುದಿನ ಈ ಮಿಶ್ರಣಕ್ಕೆ ಮಧ್ಯಮ ಹಾಗೂ ತೈಲಾಂಶಯುಕ್ತ ಕೂದಲು ಉಳ್ಳವರು 1/2 ಕಪ್‌ ತಾಜಾ ಮೊಸರು ಬೆರೆಸಬೇಕು. ಒಣ, ಒರಟು ಕೂದಲು ಉಳ್ಳವರು 1 ಮೊಟ್ಟೆಯನ್ನು ಬೀಟ್‌ ಮಾಡಿ ಬೆರೆಸಬೇಕು. ತದನಂತರ ಈ ಮಿಶ್ರಣವನ್ನು ಕೂದಲಿಗೆ ಲೇಪಿಸಿ, ತುದಿ ಬೆರಳಿನಿಂದ ಚೆನ್ನಾಗಿ ಮಾಲೀಶು ಮಾಡಿ 2-3 ಗಂಟೆಗಳ ಕಾಲ ಬಿಡಬೇಕು. ತದನಂತರ ತಣ್ಣಗಿನ ನೀರಿನಿಂದ ಕೂದಲು ತೊಳೆಯಬೇಕು. ಇದು ಬಿಳಿಕೂದಲನ್ನು ಕಪ್ಪಾಗಿಸಲೂ ಸಹಕಾರಿ. ಬಿಳಿ ಕೂದಲು ಉಳ್ಳವರು ಈ ಮಿಶ್ರಣಕ್ಕೆ 1/2 ಚಮಚ ಲವಂಗದ ಪುಡಿ ಬೆರೆಸಿ ಹೇರ್‌ಪ್ಯಾಕ್‌ ಮಾಡಿದರೆ ಕೂದಲು ಗಾಢ ಕಪ್ಪು ವರ್ಣ ಪಡೆದುಕೊಳ್ಳುತ್ತದೆ. ವಾರಕ್ಕೆ 1-2 ಬಾರಿ ಬಳಸಬೇಕು.

ಹೀಗೆ ವೈವಿಧ್ಯಮಯ ಹೇರ್‌ಪ್ಯಾಕ್‌ಗಳನ್ನು ಬಳಸಿದರೆ ಕೂದಲ ಸೌಂದರ್ಯ ವರ್ಧಿಸುವುದರ ಜೊತೆಗೆ ಬೇಸಿಗೆಯೂ ಕೂಲ್‌ ಕೂಲ್‌!

ಡಾ. ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next