Advertisement

ತಂಪು ತಂಪು ತಂಬುಳಿ

10:43 PM May 07, 2019 | mahesh |

ಬೇಸಿಗೆ ಕಾಲದಲ್ಲಿ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ, ಉಷ್ಣ ಹೆಚ್ಚದಂತೆ ನೋಡಿಕೊಳ್ಳಬೇಕು. ಈ ಎರಡೂ ಅಗತ್ಯಗಳನ್ನು ಪೂರೈಸುವ ಪದಾರ್ಥವೊಂದಿದೆ. ಅದುವೇ ತಂಬುಳಿ. ಮಲೆನಾಡಿನ ಫೇಮಸ್‌ ಸೊಪ್ಪಿನ ತಂಬುಳಿ, ದೇಹಕ್ಕೆ ನೀರಿನಂಶ ಒದಗಿಸುವುದರ ಜೊತೆಗೆ ದೇಹವನ್ನೂ ತಂಪಾಗಿಡುತ್ತದೆ. ಸೊಪ್ಪಿನಿಂದ ಮಾತ್ರವಲ್ಲದೆ, ಮೆಂತ್ಯೆ, ಎಳ್ಳು ಮುಂತಾದ ಅಡುಗೆ ಸಾಮಗ್ರಿಗಳಿಂದಲೂ ದೇಹ ತಂಪಾಗಿಡುವ ತಂಬುಳಿಗಳನ್ನು ತಯಾರಿಸಬಹುದು…

Advertisement

1. ಚಕ್ರಮುನಿ (ವಿಟಮಿನ್‌) ಸೊಪ್ಪಿನ ತಂಬುಳಿ
ಬೇಕಾಗುವ ಸಾಮಗ್ರಿ: ಜೀರಿಗೆ- 1 ಚಮಚ, ಕಾಳುಮೆಣಸು -8, ತುಪ್ಪ- 2 ಚಮಚ, ಚಕ್ರಮುನಿ ಸೊಪ್ಪು- 1 ಬಟ್ಟಲು, ಕಾಯಿತುರಿ- 2 ಚಮಚ, ಮೊಸರು ಅಥವಾ ಮಜ್ಜಿಗೆ- 2 ಕಪ್‌, ಉಪ್ಪು- ರುಚಿಗೆ ತಕ್ಕಷ್ಟು. ಒಗ್ಗರಣೆಗೆ: ಸಾಸಿವೆ, ಜೀರಿಗೆ, ಒಣಮೆಣಸು.

ಮಾಡುವ ವಿಧಾನ: ಬಾಣಲೆಯಲ್ಲಿ ತುಪ್ಪ ಬಿಸಿಗಿಟ್ಟು ಜೀರಿಗೆ ಮತ್ತು ಕಾಳುಮೆಣಸನ್ನು ಹುರಿದುಕೊಳ್ಳಿ. ನಂತರ ಅವನ್ನು ಮಾತ್ರ ಪ್ರತ್ಯೇಕಿಸಿ, ಮಿಕ್ಸಿಗೆ ಹಾಕಿಡಿ. ಬಾಣಲೆಯಲ್ಲಿ ಉಳಿದ ತುಪ್ಪದಲ್ಲಿ ವಿಟಮಿನ್‌ ಸೊಪ್ಪನ್ನು ಹಸಿವಾಸನೆ ಹೋಗುವ ತನಕ ಬಾಡಿಸಿ, ಕಾಯಿತುರಿ ಹಾಗೂ ಮೊಸರು/ಮಜ್ಜಿಗೆ ಸೇರಿಸಿ ಎಲ್ಲವನ್ನೂ ನುಣ್ಣಗೆ ರುಬ್ಬಿ. ಆ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ, ಅದಕ್ಕೆ ಸ್ವಲ್ಪ ನೀರು ಮತ್ತು ಮೊಸರು ಸೇರಿಸಿ ತೆಳ್ಳಗೆ ಮಾಡಿ. ನಂತರ, ತುಪ್ಪದಲ್ಲಿ ಸಾಸಿವೆ, ಜೀರಿಗೆ, ಒಣಮೆಣಸಿನ ಒಗ್ಗರಣೆ ಕೊಡಿ.

2. ಮಜ್ಜಿಗೆಹುಲ್ಲಿನ ತಂಬುಳಿ
ಬೇಕಾಗುವ ಸಾಮಗ್ರಿ: ಉದ್ದನೆಯ ಮಜ್ಜಿಗೆಹುಲ್ಲು -10, ಶುಂಠಿ- ಎರಡು ಇಂಚು, ಹಸಿಮೆಣಸು -1, ಮಜ್ಜಿಗೆ -2 ಕಪ್‌, ಕಾಯಿತುರಿ -2 ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮಜ್ಜಿಗೆ ಹುಲ್ಲನ್ನು ಚಿಕ್ಕದಾಗಿ ಕತ್ತರಿಸಿ, ಕಾಯಿತುರಿ, ಶುಂಠಿ, ಮೆಣಸು, ನೀರು ಸೇರಿಸಿ ನುಣ್ಣಗೆ ರುಬ್ಬಿ. ಹುಲ್ಲು ನುಣ್ಣಗಾಗುವುದಿಲ್ಲ. ಅದನ್ನು ಜಾಲರಿಯಿಂದ ಸೋಸಿಕೊಂಡು, ಅದಕ್ಕೆ ಉಪ್ಪು, ನೀರು ಸೇರಿಸಿದರೆ ತಂಬುಳಿ ರೆಡಿ. ಇದನ್ನು ಜ್ಯೂಸಿನಂತೆ ಕುಡಿಯಲೂಬಹುದು.

Advertisement

3. ಬಿಲ್ವಪತ್ರೆ ತಂಬುಳಿ
ಬೇಕಾಗುವ ಸಾಮಗ್ರಿ: ಬಿಲ್ವಪತ್ರೆ-ಒಂದು ಮುಷ್ಟಿ, ಹಸಿಮೆಣಸು -1 ಚಿಕ್ಕದು, ಕಾಯಿತುರಿ – 2 ಚಮಚ, ಮಜ್ಜಿಗೆ -2 ಕಪ್‌, ಉಪ್ಪು- ರುಚಿಗೆ.0

ಮಾಡುವ ವಿಧಾನ: ಮಜ್ಜಿಗೆಯನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ನುಣ್ಣಗೆ ರುಬ್ಬಿ. ನಂತರ ಆ ಮಿಶ್ರಣಕ್ಕೆ ಮಜ್ಜಿಗೆಯನ್ನು ಬೆರೆಸಿ, ಉಪ್ಪು ಸೇರಿಸಿ.

4. ಪೇರಲೆ ಕುಡಿ ತಂಬುಳಿ
ಬೇಕಾಗುವ ಸಾಮಗ್ರಿ: ಚಿಗುರು ಪೇರಲೆ ಎಲೆ -10, ಜೀರಿಗೆ-1 ಚಮಚ, ತುಪ್ಪ-2 ಚಮಚ, ಕಾಯಿತುರಿ-2 ಚಮಚ, ಮಜ್ಜಿಗೆ-2 ಕಪ್‌, ರುಚಿಗೆ ತಕ್ಕಷ್ಟು ಉಪ್ಪು, ಕಾಳುಮೆಣಸು -8.

ಮಾಡುವ ವಿಧಾನ: ಬಾಣಲೆಯಲ್ಲಿ ತುಪ್ಪ ಬಿಸಿಗಿಟ್ಟು ಜೀರಿಗೆ, ಕಾಳುಮೆಣಸು, ಪೇರಲೆಕುಡಿ ಹಾಕಿ ಹುರಿದುಕೊಳ್ಳಿ. ಹುರಿದ ಪದಾರ್ಥಕ್ಕೆ ಮಜ್ಜಿಗೆ, ಉಪ್ಪು ಹಾಗೂ ಕಾಯಿತುರಿ, ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಇನ್ನೊಂದು ಪಾತ್ರೆಗೆ ಸೋಸಿ, ಮಜ್ಜಿಗೆ ಮತ್ತು ಸ್ವಲ್ಪ ನೀರು ಸೇರಿಸಿ.

5. ಕರಿಬೇವಿನ ಸೊಪ್ಪಿನ ತಂಬುಳಿ
ಬೇಕಾಗುವ ಸಾಮಗ್ರಿ: ಕರಿಬೇವಿನ ಸೊಪ್ಪು- ಮೂರು ದಂಟು, ಹಸಿಮೆಣಸು-1, ಕಾಯಿತುರಿ-2 ಚಮಚ, ಮಜ್ಜಿಗೆ-2 ಕಪ್‌, ಉಪ್ಪು- ರುಚಿಗೆ. ಒಗ್ಗರಣೆಗೆ: ತೆಂಗಿನೆಣ್ಣೆ-2 ಚಮಚ, ಸಾಸಿವೆ, ಉದ್ದಿನಬೇಳೆ, ಒಣಮೆಣಸು.

ಮಾಡುವ ವಿಧಾನ: ಒಗ್ಗರಣೆಯ ಸಾಮಗ್ರಿ ಬಿಟ್ಟು ಉಳಿದೆಲ್ಲವನ್ನೂ ಮಿಕ್ಸಿಜಾರಿಗೆ ಹಾಕಿ ನುಣ್ಣಗೆ ರುಬ್ಬಿ. ಮಿಶ್ರಣವನ್ನು ಇನ್ನೊಂದು ಪಾತ್ರೆಗೆ ಸೋಸಿ, ಸ್ವಲ್ಪ ನೀರು ಸೇರಿಸಿ ತೆಳ್ಳಗೆ ಮಾಡಿಕೊಳ್ಳಿ. ನಂತರ ಅದಕ್ಕೆ ಸಾಸಿವೆ ಒಗ್ಗರಣೆಗೆ ಕೊಡಿ.
(ಈ ತಂಬುಳಿಗಳನ್ನು ಅನ್ನದ ಜೊತೆಗೆ ಸೇವಿಸಬಹುದು ಅಥವಾ ಹಾಗೆಯೇ ಕುಡಿಯಬಹುದು)

-ಗೀತಾ ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next