Advertisement

ಗೌರಿ ಎಡೆ ತಿಂಡಿ-ತಿನಿಸು

11:23 PM Aug 27, 2019 | mahesh |

ಭಾದ್ರಪದ ಮಾಸದ ತದಿಗೆಯಂದು ಬರುವ ಗೌರಿಹಬ್ಬ, ಮುತ್ತೈದೆಯರಿಗೆಲ್ಲಾ ಸೌಭಾಗ್ಯ ನೀಡುವ ಹಬ್ಬವೆಂದು ಪ್ರತೀತಿ ಇದೆ. ಆ ದಿನ ಕೈಲಾಸದಿಂದ ಗೌರಮ್ಮ, ತನ್ನ ತವರಾದ ಭೂಲೋಕಕ್ಕೆ ಬರುತ್ತಾಳೆ. ಆಗ, ಅವಳಿಗೆ ಪ್ರಿಯವಾದ ಅಡುಗೆ ಮಾಡಿ, ನೈವೇದ್ಯಕ್ಕಿಡುವುದು ಸಂಪ್ರದಾಯ. ಕೆಲವು ಕಡೆಗಳಲ್ಲಿ ಇದಕ್ಕೆ ಗೌರಿ ಎಡೆ ಎಂಬ ಹೆಸರಿದೆ. ಗೌರಿ ಎಡೆ ಹೆಸರಿನಲ್ಲಿ ಬಗೆ ಬಗೆಯ ತಿಂಡಿ-ತಿನಿಸುಗಳನ್ನು ಮಾಡುತ್ತಾರೆ. ಅದರಲ್ಲಿ ಕೆಲವೊಂದರ ರೆಸಿಪಿ ಇಲ್ಲಿವೆ…

Advertisement

1. ಸೌತೆಕಾಯಿ ಹಶಿ/ ಸಾಸಿವೆ
ಬೇಕಾಗುವ ಸಾಮಗ್ರಿ: ಎಳೆ ಸೌತೆ ಕಾಯಿ- 3, ಕಾಯಿತುರಿ – 1/2ಕಪ್‌, ಹಸಿ ಮೆಣಸು-2, ಗಟ್ಟಿ ಮೊಸರು- 1 ಕಪ್‌, ಸ್ವಲ್ಪ ಉದ್ದಿನ ಬೇಳೆ, ಎಳ್ಳು , ಸಾಸಿವೆ, ಒಣ ಮೆಣಸು, ಒಗ್ಗರಣೆಗೆ ಎಣ್ಣೆ, ಒಂದೆರಡು ಎಸಳು ಕರಿಬೇವು.

ಮಾಡುವ ವಿಧಾನ : ಮೊದಲು ಎಳೆ ಸೌತೆಕಾಯಿಗಳನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಕಾಯಿತುರಿಯನ್ನು ರುಬ್ಬಿ, ಅದಕ್ಕೆ ಸೇರಿಸಿ. ಬಾಣಲೆಗೆ ಎಣ್ಣೆ ಹಾಕಿಕೊಂಡು ಅದಕ್ಕೆ ಸ್ವಲ್ಪ ಉದ್ದಿನ ಬೇಳೆ, ಸ್ವಲ್ಪ ಎಳ್ಳು, ಒಣಮೆಣಸು, ಹಸಿಮೆಣಸು, ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಮಾಡಿ. ಸೌತೆ-ತೆಂಗಿನತುರಿಯ ಮಿಶ್ರಣಕ್ಕೆ ಒಗ್ಗರಣೆ, ಗಟ್ಟಿ ಮೊಸರು ಸೇರಿಸಿದರೆ ಸೌತೆಕಾಯಿ ಹಶಿ ರೆಡಿ. ಇದನ್ನು ಅನ್ನದೊಂದಿಗೆ ಕಲೆಸಿ, ಸೇವಿಸಬಹುದು.

2. ಅತ್ರಸ
ಬೇಕಾಗುವ ಸಾಮಗ್ರಿ: ಅಕ್ಕಿ – 2 ಲೋಟ, ಬೆಲ್ಲ- ಒಂದೂವರೆ ಕಪ್‌, ಹಾಲು- ಒಂದು ಲೋಟ, ಎಳ್ಳು -2 ಚಮಚ, ತೆಂಗಿನ ತುರಿ- 1ಕಪ್‌, ಏಲಕ್ಕಿ ಪುಡಿ – 1/4 ಚಮಚ, ಕರಿಯಲು ಎಣ್ಣೆ.

ಮಾಡುವ ವಿಧಾನ : ಅಕ್ಕಿಯನ್ನು ಅರ್ಧ ಗಂಟೆ ನೀರಿನಲ್ಲಿ ನೆನೆಸಿಟ್ಟು, ನಂತರ ನೀರನ್ನು ಪೂರ್ಣ ಬಸಿದು, ಒಣ ಬಟ್ಟೆ ಮೇಲೆ ಅರ್ಧಗಂಟೆ ಆರಲು ಬಿಡಿ. ಆರಿದ ಅಕ್ಕಿಯನ್ನು ಮಿಕ್ಸಿಯಲ್ಲಿ ನುಣ್ಣಗೆ ಹಿಟ್ಟು ಮಾಡಿ, ಚೆನ್ನಾಗಿ ಸಾಣಿಸಿಕೊಳ್ಳಿ. ದಪ್ಪ ಪಾತ್ರೆಯಲ್ಲಿ ಬೆಲ್ಲ ಹಾಕಿ, ಅದಕ್ಕೆ ಸ್ವಲ್ಪ ನೀರು ಮತ್ತು ಸ್ವಲ್ಪ ಗಟ್ಟಿ ಹಾಲು ಹಾಕಿ, ಬೆಲ್ಲ ತಳ ಹಿಡಿಯದಂತೆ ಮಗಚುತ್ತಾ ಇರಬೇಕು. ಬೆಲ್ಲದ ನೀರಿನಿಂದ ನೊರೆ ಬರಲು ಆರಂಭವಾದ ಕೂಡಲೇ ಏಲಕ್ಕಿ, ಎಳ್ಳು, ಕಾಯಿತುರಿ ಹಾಕಿ. ಮಿಶ್ರಣವು ಉಂಡೆ ಕಟ್ಟುವ ಹದಕ್ಕೆ ಬಂದ ಮೇಲೆ ಸ್ಟೌನಿಂದ ಇಳಿಸಿ, ಚಿಕ್ಕ ಚಿಕ್ಕ ಉಂಡೆ ಮಾಡಿ ಬಾಳೆಎಲೆ ಅಥವಾ ಪ್ಲಾಸ್ಟಿಕ್‌ ಕವರ್‌ಗೆ ಎಣ್ಣೆ ಹಚ್ಚಿ, ಕೈಯಲ್ಲಿ ತಟ್ಟಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ.

Advertisement

3. ಕೆಸುವಿನ ಸೊಪ್ಪಿನ ಕರಕಲಿ
ಬೇಕಾಗುವ ಸಾಮಗ್ರಿ: ದೊಡ್ಡ ಕೆಸುವಿನ ಎಲೆ- 10-15, ಇಂಗು, ಸಾಸಿವೆ, ಓಂ ಕಾಳು, ಎಣ್ಣೆ, ಸ್ವಲ್ಪ ಉಪ್ಪು, ಚೂರು ಬೆಲ್ಲ, ಲಿಂಬೆ ಹಣ್ಣು, ಬೆಳ್ಳುಳ್ಳಿ, ಸೂಜಿ ಮೆಣಸು.

ಮಾಡುವ ವಿಧಾನ: ಕೆಸುವಿನ ಎಲೆಗಳನ್ನು ಸಮ ಗಾತ್ರದಲ್ಲಿ ಹೆಚ್ಚಿಕೊಂಡು, ಅದಕ್ಕೆ ಸ್ವಲ್ಪ ಲಿಂಬೆರಸ ಹಿಂಡಿ , ಸೂಜಿ ಮೆಣಸು ಹಾಕಿ ಬೇಯಿಸಲು ಇಡಿ. ಸೊಪ್ಪು ಬೆಂದು, ತಣ್ಣಗಾದ ನಂತರ, ಅದನ್ನು ಮಿಕ್ಸಿಯಲ್ಲಿ ಹಾಕಿ ಒಂದು ಸುತ್ತು ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣಕ್ಕೆ ಸ್ವಲ್ಪ ನೀರು ಹಾಕಿ ದಪ್ಪಗೆ ಕುದಿಸಿ. ಖಾರಕ್ಕೆ ಬೇಕಾದರೆ ಮತ್ತೂ ಸ್ವಲ್ಪ ಮೆಣಸು ಹಾಕಿ. ನಂತರ, ಎಣ್ಣೆ, ಇಂಗು, ಸಾಸಿವೆ, ಬೆಳ್ಳುಳ್ಳಿ, ಓಂ ಹಾಕಿ ಒಗ್ಗರಣೆ ಮಾಡಿ, ಸೇರಿಸಿ. ಸ್ಟೌನಿಂದ ಇಳಿಸಿದ ಮೇಲೆ ಸ್ವಲ್ಪ ಲಿಂಬೆ ರಸ ಸೇರಿಸಿ.

4. ಲಡ್ಡಿಗೆ ಉಂಡೆ
ಬೇಕಾಗುವ ಸಾಮಗ್ರಿ: ಕಡಲೆ ಹಿಟ್ಟು – ಅರ್ಧ ಕೆ.ಜಿ., ಬೆಲ್ಲ- ಕಾಲು ಕೆ.ಜಿ., ಎಣ್ಣೆ, ಏಲಕ್ಕಿ ಪುಡಿ, ಉಪ್ಪು. ಮಾಡುವ ವಿಧಾನ: ಅಗಲವಾದ ಪಾತ್ರೆಗೆ ನೀರು ಹಾಕಿ, ಕಡಲೆಹಿಟ್ಟನ್ನು ದೋಸೆಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ಎಣ್ಣೆ ಕಾದ ನಂತರ ಬೂಂದಿ ಕಾಳು ಕರಿಯುವ ಸೌಟಿಗೆ ಕಡಲೆ ಹಿಟ್ಟನ್ನು ಹಾಕಿ, ಎಣ್ಣೆಯಲ್ಲಿ ಬಿಡುತ್ತಾ ಹೋಗಬೇಕು. ಕಾಳು ಕರಿದ ನಂತರ ಬೆಲ್ಲವನ್ನು ಸ್ಟೌ ಮೇಲೆ ಇಟ್ಟು ಪಾಕ ಮಾಡಿಕೊಳ್ಳಿ. ಎರಡನೇ ಎಳೆ ಪಾಕ ಬಂದ ಮೇಲೆ, ಅದನ್ನು ಕೆಳಗಿಳಿಸಿ ಕರಿದ ಕಾಳನ್ನು ಪಾಕದಲ್ಲಿ ಹಾಕಿ ಚೆನ್ನಾಗಿ ಮಗುಚಿ. ಅದಕ್ಕೆ, ಮೊದಲೇ ರೆಡಿ ಮಾಡಿಟ್ಟುಕೊಂಡ ಏಲಕ್ಕಿ ಮತ್ತು ಎಳ್ಳಿನ ಪುಡಿಯನಮು° ಸೇರಿಸಿ, ಲಾಡಿನ ಗಾತ್ರದಲ್ಲಿ ಉಂಡೆ ಕಟ್ಟಿದರೆ ಲಡ್ಡಿಗೆ ಉಂಡೆ ರೆಡಿ.

5. ಹಿಟ್ಟಿನ ಹೋಳಿಗೆ
ಬೇಕಾಗುವ ಸಾಮಗ್ರಿ: 2 ಕಪ್‌ ಕಡಲೆಬೇಳೆ, 1/2 ಕಪ್‌ ತೊಗರಿಬೇಳೆ, 1/2 ಕಪ್‌ ಗೋಧಿ ಹಿಟ್ಟು, 1 ಕಪ್‌ ಬೆಲ್ಲ, ಸ್ವಲ್ಪ ಅರಿಶಿನ, ಎಣ್ಣೆ, ಉಪ್ಪು.

ಮಾಡುವ ವಿಧಾನ: ಮೊದಲು ಕಡಲೆಬೇಳೆ, ತೊಗರಿಬೇಳೆಯನ್ನು ಮೆತ್ತಗಾಗುವವರೆಗೂ ಬೇಯಿಸಿ. ನಂತರ, ಅವುಗಳನ್ನು ಬೆರೆಸಿ ಸ್ವಲ್ಪವೂ ನೀರಿಲ್ಲದಂತೆ ಒಂದು ಸಾಣಿಗೆಯಲ್ಲಿ ಬಸಿದುಕೊಳ್ಳಿ. ಅದಕ್ಕೆ ಸ್ವಲ್ಪ ಉಪ್ಪು, ಬೆಲ್ಲ, ಏಲಕ್ಕಿ ಪುಡಿ ಸೇರಿಸಿ, ಸ್ಟೌ ಮೇಲೆ ಇಟ್ಟು ಗಟ್ಟಿಯಾಗುವವರೆಗೂ ಮಗುಚಿ. ಮಿಶ್ರಣ ತಣ್ಣಗಾದ ನಂತರ ಅದನ್ನು ನುಣ್ಣಗೆ ರುಬ್ಬಿಕೊಳ್ಳಿ.

ಗೋಧಿ ಹಿಟ್ಟಿಗೆ ಸ್ವಲ್ಪ ಎಣ್ಣೆ, ಚಿಟಿಕೆ ಅರಿಶಿಣ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪವೇ ನೀರು ಹಾಕಿ ಮೃದುವಾಗುವಂತೆ ಕಲೆಸಿ. ಸ್ವಲ್ಪ ಹೊತ್ತು ಹಾಗೇ ಇಡಿ. ನಂತರ ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು ಲಿಂಬೆ ಹಣ್ಣಿನ ಗಾತ್ರದ ಉಂಡೆ ಕಟ್ಟಿ. ಅದರೊಳಗೆ ಕಣಕವನ್ನು ತುಂಬಿ ಸರಿಯಾಗಿ ಪ್ಯಾಕ್‌ ಮಾಡಿ. ಇದನ್ನು ಶ್ಯಾಮೆ ಅಕ್ಕಿಹಿಟ್ಟು ಅಥವಾ ಗೋಧಿ ಹಿಟ್ಟು ಬಳಸಿ, ತೆಳ್ಳಗೆ ಲಟ್ಟಿಸಬೇಕು. ನಂತರ ಕಾದ ಕಾವಲಿಗೆ ಹಾಕಿ, ಎರಡೂ ಕಡೆ ಸರಿಯಾಗಿ ಬೇಯಿಸಿದರೆ ಸಿಹಿಯಾದ ಹಿಟ್ಟಿನ ಹೋಳಿಗೆ ಸಿದ್ಧ.

-ಸುಮಾ ಸತೀಶ್‌

Advertisement

Udayavani is now on Telegram. Click here to join our channel and stay updated with the latest news.

Next