ಮಹಾನಗರ: ಕಾಶೀ ಮಠ ಸಂಸ್ಥಾನದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಸನ್ಯಾಸ ದೀಕ್ಷಾ ಅಮೃತ ಮಹೋತ್ಸವಕ್ಕೆ 1,200 ಮಂದಿ ಜಿಎಸ್‌ಬಿ ಸಮುದಾಯದ ಪ್ರಯಾಣಿಕರನ್ನು ಹೊತ್ತು ಮೇ 31ರಂದು ಮಂಗಳೂರಿನಿಂದ ಹರಿದ್ವಾರಕ್ಕೆ ಹೋಗಿದ್ದ ವಿಶೇಷ ರೈಲಿನಲ್ಲಿ ಮಂಗಳೂರು ಶೈಲಿಯ ಅಡುಗೆ ವಿಶೇಷ ಗಮನ ಸೆಳೆಯಿತು.
ಹರಿದ್ವಾರದಿಂದ ಶನಿವಾರ (ಜೂ. 8ರ ರಾತ್ರಿ) ಮಂಗಳೂರಿಗೆ ತಂಡವು ವಾಪಸ್ಸಾಗಿದ್ದು, ತಂಡದಲ್ಲಿದ್ದ ಯತೀಶ್ ಕುಡ್ವ ಅವರು ರೈಲಿನಲ್ಲಿ ಸವಿದ ಸವಿರುಚಿಯ ಕುರಿತು ವಿವರಿಸಿದರು.
ರೈಲಿನಲ್ಲಿ ಪ್ರಯಾಣಿಸಿದ 1,200 ಮಂದಿಗೂ ರೈಲು ಪ್ರಯಾಣದಲ್ಲೇ ಸಮ ಯಕ್ಕೆ ಸರಿಯಾಗಿ ಶುಚಿ ರುಚಿಯಾದ ಆಹಾರ ಸವಿಯುವ ಅವಕಾಶ ಒದಗಿತ್ತು. ಏಕೆಂದರೆ 4 ಹವಾನಿಯಂತ್ರಿತ, 12 ಎಸಿ ರಹಿತ ಬೋಗಿಗಳ ಪೈಕಿ 15 ಬೋಗಿಗಳಲ್ಲಿ ಜನರಿದ್ದರೆ, ಒಂದು ಬೋಗಿಯಿಡೀ ವೈವಿಧ್ಯ ಖಾದ್ಯ ತಯಾ ರಿಸುವ ಅಡುಗೆ ಮನೆಯಾಗಿತ್ತು.
ಬೆಳಗ್ಗೆ 6 ಗಂಟೆಗೆ ಚಹಾ, ಕಾಫಿ, 8.30ಕ್ಕೆ ಬೆಳಗ್ಗಿನ ಉಪಾಹಾರ, 11ಕ್ಕೆ ಜ್ಯೂಸ್, ಲಘು ಉಪಾಹಾರ, ಮಧ್ಯಾಹ್ನ 1ಕ್ಕೆ ಊಟ, ಸಂಜೆ 4ಕ್ಕೆ ಚಾಹಾ, ಕಾಫಿ ಮತ್ತು ಲಘು ಉಪಾಹಾರ, ರಾತ್ರಿ 7.30ಕ್ಕೆ ಊಟದ ವ್ಯವಸ್ಥೆ ರೈಲಿನಲ್ಲೇ ಇತ್ತು. ಮಂಗಳೂರು ಶೈಲಿಯ ಖಾದ್ಯದಲ್ಲಿ ಪೋಡಿ, ದಾಲ್ ತೋವೆ, ಕಿಚಿಡಿ, ಹಾಲು ಪಾಯಸ, ಸಾಂಬಾರು, ಚಹಾ, ಕಾಫಿ (ಶುಗರ್‌ಲೆಸ್, ವಿದ್ ಶುಗರ್) ಕೂಡ ತಯಾರಕರು ಮಾಡಿಕೊಡುತ್ತಿದ್ದರು.
ಹರಿಖಂಡಿಗೆ ನಾಗೇಶ್ ನಾಯಕ್ ಮತ್ತು ಶಿವು ಅವರೊಂದಿಗೆ 12 ಜನರ ತಂಡ ಅಡುಗೆ ತಯಾರಿಯಲ್ಲಿ ತೊಡಗಿತ್ತು. 15 ಮಂದಿ ಸ್ವಯಂ ಸೇವಕರು ರೈಲಿನ ಕಿಚನ್ ಒಳಗಿನ ಕೆಲಸದಲ್ಲಿ ಸಹಕರಿಸಿದ್ದರು. ಅಡುಗೆ ತಯಾರಿಗೆ ಬೇಕಾದ ಗ್ಯಾಸ್ ಸಿಲಿಂಡರ್, ಸ್ಟೌವ್ ಮಂಗಳೂರಿನಿಂದಲೇ ತೆಗೆದುಕೊಂಡು ಹೋಗಲಾಗಿತ್ತು. ಈ ವಿಶೇಷ ಪ್ರಯಾಣ 5ನೇ ಬಾರಿಯಾಗಿದ್ದು, ಪ್ರತಿ ವರ್ಷ ರೈಲಿ ನಲ್ಲೇ ಅಡುಗೆ ಮಾಡಿ ಊಟ ಮಾಡುವುದು ವಿಶೇಷ.
3 ವೈದ್ಯರು, ಗ್ಯಾಸ್ ರಿಪೇರಿಯವರು, ನಿರ್ವಹಣೆದಾರರು, ರೈಲ್ವೇ ಸೂಪರ್‌ವೈಸರ್, ರೈಲ್ವೇ ವಿಭಾಗದ ಸಿಬಂದಿ ಕೂಡ ರೈಲಿನಲ್ಲಿ ಪಯಣಿಸಿದ್ದಾರೆ. ಮಂಗಳೂರು ಜಿಎಸ್‌ಬಿ ಸಮುದಾಯ ಇಡೀ ಪ್ರಯಾಣವನ್ನು ನಿರ್ವಹಿಸಿದೆ. ಸುಕೃತೇಂದ್ರ ಸೇವಾ ಪ್ರತಿಷ್ಠಾನದ ರಾಧಾಕೃಷ್ಣ ಭಗತ್ ಪುತ್ತೂರು, ಗೋಕುಲ್ ಪ್ರಭು ಗುರುಪುರ, ನಾಗೇಶ್ ಶೆಣೈ ಮಂಗಳೂರು, ಜಗನ್ನಾಥ್ ಶೆಣೈ ಮಂಗಳೂರು ಮತ್ತಿತರರು ವಿವಿಧ ಹೊಣೆಗಳನ್ನು ನಿರ್ವಹಿಸಿದ್ದಾರೆ.
ಶನಿವಾರ ಮಂಗಳೂರಿಗೆ ಆಗಮನ
ಜಿಎಸ್‌ಬಿ ಸಮುದಾಯದ 1,200 ಮಂದಿ ಪ್ರಯಾಣಿಕರು ಈ ವಿಶೇಷ ರೈಲಿನಲ್ಲಿ ಮೇ 31ರಂದು ರಾತ್ರಿ 12.30ಕ್ಕೆ ಮಂಗಳೂರಿನಿಂದ ಹೊರಟಿದ್ದರು. ಜೂ. 3ರಂದು ಮಧ್ಯಾಹ್ನ ಹರಿದ್ವಾರಕ್ಕೆ ತಲುಪಿ ಕಾರ್ಯಕ್ರಮ ಮುಗಿಸಿ ಜೂ. 6ರಂದು ರಾತ್ರಿ 8 ಗಂಟೆಗೆ ರೈಲು ಹರಿದ್ವಾರದಿಂದ ಹೊರಟು ಶನಿವಾರ ಮಂಗಳೂರು ತಲುಪಿದ್ದಾರೆ. ದ.ಕ.ದ ಇತರ ಭಾಗಗಳಿಂದ, ಬೆಂಗಳೂರು, ಕುಂದಾಪುರ, ಗೋವಾ ದಿಂದಲೂ ಜಿಎಸ್‌ಬಿ ಸಮುದಾಯದವರು ಈ ರೈಲಿನಲ್ಲಿ ಪ್ರಯಾಣಿಸಿದ್ದರು.