ದಾವಣಗೆರೆ: ಒಂದೆಡೆ ಕೊರೊನಾಂತಕ, ಮತ್ತೂಂದೆಡೆ ಕುಲಾಧಿಪತಿ, ಸಮಕುಲಾಧಿಪತಿ ಅಷ್ಟೇ ಅಲ್ಲ, ಕುಲಪತಿ ಅನುಪಸ್ಥಿತಿಯಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ (2018-19ನೇ ಸಾಲಿನ) ಏಳನೇ ಘಟಿಕೋತ್ಸವ ಉತ್ಸವವಾಗದೆ ಸರಳ ಕಾರ್ಯಕ್ರಮದ ರೀತಿಯಲ್ಲಿ ಬುಧವಾರ ವಿವಿ ಆವರಣದಲ್ಲಿ ನಡೆಯಿತು.
ವಿವಿ ಘಟಿಕೋತ್ಸವದ ಮುಖ್ಯ ಜವಾಬ್ದಾರಿ ನಿರ್ವಹಿಸಬೇಕಾದ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಸ್.ವಿ. ಹಲಸೆ ಅವರಲ್ಲಿ ಕೋವಿಡ್ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವರು ಘಟಿಕೋತ್ಸವದಿಂದ ದೂರ ಉಳಿದು ಆನ್‌ಲೈನ್ ಮೂಲಕವೇ ತಮ್ಮ ಸ್ವಾಗತ ಭಾಷಣ ಮಾಡಿದರು. ಸಾಮಾನ್ಯವಾಗಿ ಘಟಿಕೋತ್ಸವದಲ್ಲಿ ಕುಲಾಧಿಪತಿಗಳಾದ ರಾಜ್ಯಪಾಲರು, ಸಮಕುಲಾಧಿಪತಿಗಳಾದ ಉನ್ನತ ಶಿಕ್ಷಣ ಸಚಿವರು ಗೈರಾದರೂ ಕುಲಪತಿಯಾದವರು ಮುಂದೆ ನಿಂತು ಘಟಿಕೋತ್ಸವ ನಡೆಸಿಕೊಡುತ್ತಾರೆ. ಆದರೆ ಕೊರೊನಾ ಕಾರಣದಿಂದಾಗಿ ಇದೇ ಮೊದಲ ಬಾರಿಗೆ ವಿವಿ ಕುಲಪತಿ ಅನುಪಸ್ಥಿತಿಯಲ್ಲಿಯೇ ಘಟಿಕೋತ್ಸವ ನಡೆಸುವಂತಾಯಿತು.
ಗೌರವ ಡಾಕ್ಟರೇಟ್‌ಗೆ ಭಾಜನರಾದ ಕಲಬುರಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘಟನೆಯ ಮುಖ್ಯಸ್ಥೆ ದಾಕ್ಷಾಯಿಣಿ ಅಪ್ಪ ಸಹ ಕೊರೊನಾ ಭೀತಿಯಿಂದಾಗಿ ದೂರ ಪ್ರಯಾಣ ಮಾಡಲು ಹಿಂದೇಟು ಹಾಕಿ ಘಟಿಕೋತ್ಸವಕ್ಕೆ ಗೈರಾದರು. ಘಟಿಕೋತ್ಸವದ ಮುಖ್ಯ ಅತಿಥಿ ಬೆಂಗಳೂರಿನ ಇಸ್ರೋ ಸಂಸ್ಥೆ ಮಾಜಿ ಅಧ್ಯಕ್ಷ, ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಸಂಸ್ಥೆ ಪ್ರಾಧ್ಯಾಪಕ ಡಾ| ಎ.ಎಸ್. ಕಿರಣಕಮಾರ್ ಸಹ ಆನ್‌ಲೈನ್‌ನಲ್ಲಿಯೇ ತಮ್ಮ ಭಾಷಣ ಮಾಡಿದರು.
ಇದನ್ನೂ ಓದಿ :ಗುಡ್ ನ್ಯೂಸ್: ಭಾರೀ ಗಾತ್ರದ ಮೀನು ಹಿಡಿದು ಒಂದೇ ದಿನದಲ್ಲಿ ಶ್ರೀಮಂತೆಯಾದ ಬಡ ಮಹಿಳೆ!
ಅಗೋಚರ ಉಪಸ್ಥಿತಿ: ಸ್ವರ್ಣಪದಕ, ರ್‍ಯಾಂಕ್ ಹಾಗೂ ವಿವಿಧ ಪದವಿ ಪಡೆದ ವಿದ್ಯಾರ್ಥಿಗಳು ವೇದಿಕೆಯಲ್ಲಿದ್ದ ಕುಲಸಚಿವೆ ಡಾ. ಎಚ್.ಎಸ್. ಅನಿತಾ, ವಿವಿ ಹಣಕಾಸು ಅಧಿಕಾರಿ ಗೋಪಾಲ ಎಂ.ಅಡವಿ ರಾವ್ ಅವರಿಂದ ಪ್ರಮಾಣಪತ್ರ ಸ್ವೀಕರಿಸಿದರು. ವೇದಿಕೆಯಲ್ಲಿ ಕುಲಾಧಿಪತಿ, ಸಮಕುಲಾಧಿಪತಿ ಹಾಗೂ ಕುಲಪತಿ ಇಲ್ಲದಿದ್ದರೂ ಶಿಷ್ಟಾಚಾರದಂತೆ ಎಲ್ಲ ವಿದ್ಯಾರ್ಥಿಗಳು ಕುಲಾಧಿಪತಿ, ಸಮಕುಲಾಧಿಪತಿ ಹಾಗೂ ಕುಲಪತಿಯವರಿಗೆ ಎರಡೆರಡು ಬಾರಿ(ಪ್ರಮಾಣಪತ್ರ ಸೀÌಕರಿಸುವ ಮುನ್ನ ಮತ್ತು ನಂತರ) ನಮಸ್ಕರಿಸಿ ಪ್ರಮಾಣಪತ್ರ ಸ್ವೀಕರಿಸಿದ್ದು ಸಭಿಕರಿಗೆ ಅಗೋಚರ ಉಪಸ್ಥಿತಿಯ ಕಲ್ಪನೆ ಮೂಡಿಸಿತು.
ಕಳೆಗುಂದಿದ ಉತ್ಸವ: ಕೊರೊನಾ ಕಾರಣದಿಂದಾಗಿ ಈ ಬಾರಿ ವಿವಿಯ ಘಟಿಕೋತ್ಸವ ಅಕ್ಷರಶಃ ಕಳೆಗುಂದಿತ್ತು. ಎರಡು, ಮೂರು ಸಾವಿರ ವಿದ್ಯಾರ್ಥಿಗಳು, ಗಣ್ಯರು ಸೇರಿ ಆಚರಿಸುತ್ತಿದ್ದ ಘಟಿಕೋತ್ಸವದಲ್ಲಿ ಈ ಬಾರಿ ಗರಿಷ್ಠ 250 ಜನರು ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಗಣ್ಯರನ್ನು ವೇದಿಕೆಗೆ ಕರೆತರುವ ಮೆರವಣಿಗೆಗೂ ಕೊರೊನಾ ಕರಿನೆರಳು ಬಿದ್ದಿದ್ದರಿಂದ ಅದೂ ಸರಳವಾಗಿ ನಡೆಯಿತು. ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದ್ದರೂ ಸಾಮಾಜಿಕ ಅಂತರ ಎಲ್ಲೆಡೆ ಸಾಧ್ಯವಾಗಲಿಲ್ಲ. ಪ್ರಮಾಣಪತ್ರ ಕೊಡುವವರು, ಪಡೆದವರು ಎಲ್ಲರೂ ಮಾಸ್ಕ್ ಹಾಕಿಕೊಂಡೇ ಫೋàಟೋಕ್ಕೆ ಮುಗುಳ್ನಗೆ ಬೀರುವಅನಿವಾರ್ಯತೆ ಸೃಷ್ಟಿಯಾಗಿತ್ತು.