Advertisement
ನಗರದ ಖಾಸಗಿ ಹೋಟೆಲ್‌ನಲ್ಲಿ ಏರ್ಪಡಿಸಿದ್ದ ನಗರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಪ್ರಧಾನಿ ಮೋದಿ ಅವರು ಕಳೆದ ಮೂರು ವರ್ಷಗಳಲ್ಲಿ ತಮ್ಮ ಜನಪರ ಆಡಳಿತದಿಂದಾಗಿ ದೇಶದ ಜನರ ಮನೆ, ಮನಗಳನ್ನು ತಟ್ಟಿದ್ದಾರೆ. ಇದರಿಂದಾಗಿ ಜನರಿಗೆ ಬಿಜೆಪಿ ಬಗ್ಗೆ ಸದ್ಭಾವನೆ ಉಂಟಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕಾದರೆ, ಪಕ್ಷದ ಕಾರ್ಯಕರ್ತರು ಜನರ ಬಳಿಗೆ ಹೋಗಬೇಕು ಎಂದರು.
Related Articles
Advertisement
ಅಮಿತ್ ಶಾ ಪ್ರವಾಸ: ಮುಂಬರುವ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು 95 ದಿನಗಳ ಪ್ರವಾಸ ಹಾಕಿಕೊಂಡಿದ್ದಾರೆ. ಕರ್ನಾಟಕ, ಕೇರಳ, ಲಕ್ಷದ್ವೀಪ, ಪುದುಚೇರಿ, ಒಡಿಶಾ, ಬಂಗಾಳ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು ಅವರ ಗುರಿಯಾಗಿದೆ. ಕೇರಳದಲ್ಲಿ ಕಮಲ ಅರಳುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಅಧಿಕಾರಕ್ಕೇ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಎಸ್‌ವೈ ಸರ್ಕಾರ: ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರುಗಳು ರಾಮನಗರ, ಹಾಸನ, ಮಂಡ್ಯ, ಮೈಸೂರು ಭಾಗದಲ್ಲಿ ಪಕ್ಷ ಹೆಚ್ಚಿನ ಸ್ಥಾನ ಗೆಲ್ಲುವಂತೆ ಶ್ರಮಿಸಬೇಕು ಎಂದು ಹೇಳಿದರು.
ನೆಲಡೊಂಕು: ಕುಣಿಯಲಾರದವರಿಗೆ ನೆಲ ಡೊಂಕು ಎಂಬಂತೆ ಮೋದಿ ಅವರ ಆಡಳಿತದಿಂದ ಹತಾಶರಾಗಿರುವ ವಿರೋಧಪಕ್ಷಗಳವರು ಮತಯಂತ್ರಗಳನ್ನು ದೂರುತ್ತಿದ್ದಾರೆ. ಇವಿಎಂ ಅಂದರೆ ಎವ್ವೆರಿ ವೋಟ್ ಟು ಮೋದಿ ಎಂದು ಟೀಕಿಸುತ್ತಿದ್ದಾರೆ. ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ಗೆದ್ದಿದ್ದು ಕೂಡ ಇವಿಎಂ ನಿಂದಲೇ ಎಂದ ಅವರು, ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆ ಗೆದ್ದಿದ್ದರಿಂದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತಯಂತ್ರಗಳನ್ನು ದೂರುತ್ತಿಲ್ಲ. ಸೋತಿದ್ದರೆ ಅವರು ಕೂಡ ಮತಯಂತ್ರಗಳನ್ನು ದೂಷಿಸುತ್ತಿದ್ದರು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ದೊಡ್ಡ ನಾಯಕರಾಗಿ ಬಿಟ್ಟಿದ್ದಾರೆ. ಪ್ರಧಾನಿ ಕರೆದ ಸಭೆಗಳಿಗೆ ಬರಲು ಅವರಿಗೆ ಸಮಯವಿಲ್ಲ. ಆದರೆ, ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿಗೆ ಜಾಗ ಕೊಡಲು ಕೇಂದ್ರಸರ್ಕಾರವೇ ಬೇಕಾಯಿತು ಎಂದು ಹೇಳಿದರು.
ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಎಸ್.ಎ.ರಾಮದಾಸ್, ವಿಧಾನಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ನಗರ ಬಿಜೆಪಿ ಅಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್, ವಿಭಾಗಪ್ರಭಾರಿ ಎಲ್.ನಾಗೇಂದ್ರ, ವಿಭಾಗ ಸಂಘಟನಾ ಕಾರ್ಯದರ್ಶಿ ಸುರೇಶ್ ಬಾಬು, ನಗರ ಪ್ರಧಾನ ಕಾರ್ಯ ದರ್ಶಿಗಳಾದ ನಂದೀಶ್ ಪ್ರೀತಂ, ಎಚ್.ವಿ.ರಾಜೀವ್, ಉಪ ಮೇಯರ್ ರತ್ನ ಲಕ್ಷ್ಮಣ್, ಮುಖಂಡರಾದ ಎಂ.ರಾಜೇಂದ್ರ ಇತರರು ಉಪಸ್ಥಿತರಿದ್ದರು.
ಕನಸಲ್ಲೂ ಎಣಿಸಿರಲಿಲ್ಲಬಿಜೆಪಿಯ ಹಿರಿಯ ನಾಯಕರುಗಳಾದ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಆಡ್ವಾಣಿ ಪ್ರಚಾರ ಸಭೆಗಳ ಬಗ್ಗೆ ಆಟೋದಲ್ಲಿ ಪ್ರಸಾರ ಮಾಡುತ್ತಿದ್ದ ನಾನು ಮುಂದೊಂದು ದಿನ ಆ ಪಕ್ಷದ ಅಧ್ಯಕ್ಷನಾಗುತ್ತೇನೆ. ಕೇಂದ್ರದಲ್ಲಿ ಸಚಿವನಾಗುತ್ತೇನೆ ಎಂದು ಕನಸಿನಲ್ಲಿಯೂ ಎಣಿಸಿರಲಿಲ್ಲ ಎಂದು ವೆಂಕಯ್ಯ ನಾಯ್ಡು ಹೇಳಿದರು. ಆಂಧ್ರದ ನೆಲ್ಲೂರಿನಲ್ಲಿ ನಾನು ಪಕ್ಷದ ಪರ ಕೆಲಸ ಮಾಡುತ್ತಿದ್ದರೆ, ವಿರೋಧಿಗಳು ಅದು ಉತ್ತರ ಭಾರತದವರ, ಬ್ರಾಹ್ಮಣರ, ಸಸ್ಯಾಹಾರಿಗಳ ಪಕ್ಷ ಎಂದು ಟೀಕಿಸುತ್ತಿದ್ದರು. ಆದರೆ, ನಾನು ಪಕ್ಷದ ಕೆಲಸ ಬಿಡಲಿಲ್ಲ. ಇಂದು ಬಿಜೆಪಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ವ್ಯಾಪಿಸಿದೆ. ಚಹಾ ಮಾರುತ್ತಿದ್ದ ಮೋದಿಯಂತವರು ಮುಖ್ಯಮಂತ್ರಿ, ಪ್ರಧಾನಿಯಾಗಲು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಹೀಗಾಗಿ ಕಾರ್ಯಕರ್ತರು ಪಕ್ಷ ನಮ್ಮ ತಾಯಿಯೆಂದು ಭಾವಿಸಬೇಕು ಎಂದರು. ಕಾಂಗ್ರೆಸ್ ಪಕ್ಷ ಕಲರ್ ಫುಲ್ ಪಾರ್ಟಿ ಅವರಿಗೆ ಯಾವ ಹಗರಣದ ಮಸಿ ಮೆತ್ತಿಕೊಂಡರೂ ಕಾಣುವುದಿಲ್ಲ. ಆದರೆ, ಸ್ವತ್ಛವಾಗಿರುವ ಬಿಜೆಪಿಯ ಮುಖಂಡರ ಬಟ್ಟೆಯ ಮೇಳೆ ಒಂದು ಇಂಕಿನ ಚುಕ್ಕೆ ಬಿದ್ದರೂ ಜನ ಗಮನಿಸುತ್ತಾರೆ. ಹೀಗಾಗಿ ಪಕ್ಷದಲ್ಲಿ ಒಗ್ಗಟ್ಟು, ಪ್ರತಿಷ್ಠೆ ಕಾಯ್ದುಕೊಳ್ಳಬೇಕಾದ್ದು ಮುಖ್ಯ ಎಂದು ಕಿವಿಮಾತು ಹೇಳಿದರು.