ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ತನಗೆ ವಿಧಿಸಲಾದ ಮರಣದಂಡನೆ ಶಿಕ್ಷೆಯನ್ನು ಮರುಪರಿಶೀಲಿಸುವಂತೆ ಕೋರಿ ಪ್ರಕರಣದ ದೋಷಿ ಅಕ್ಷಯ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಬುಧವಾರ ವಿಚಾರಣೆ ನಡೆಸುತ್ತಿದೆ.
ಅಕ್ಷಯ್ ಸಿಂಗ್ ಪರ ವಕೀಲರ ವಾದವೇನು?
ನಿರ್ಭಯಾ ಅತ್ಯಾಚಾರ, ಹತ್ಯೆ ಪ್ರಕರಣದಲ್ಲಿ ಪುರಾವೆ ನೀಡಿರುವ ಸ್ಟಾರ್ (ಗಣ್ಯ) ಸಾಕ್ಷಿದಾರರ ಹೇಳಿಕೆಯನ್ನು ನಂಬಲು ಸಾಧ್ಯವಿಲ್ಲ. ಅಕ್ಷಯ್ ಅಮಾಯಕ ಮತ್ತು ಬಡ ಕುಟುಂಬದ ವ್ಯಕ್ತಿಯಾಗಿದ್ದಾನೆ. ಅಲ್ಲದೇ ನಿರ್ಭಯಾ ಗೆಳೆಯನ ವಿರುದ್ಧ ಪಟಿಯಾಲಾ ಕೋರ್ಟ್ ನಲ್ಲಿ ದೂರು ದಾಖಲಿಸಿದ್ದೇವೆ. ಈ ಬಗ್ಗೆ ಡಿಸೆಂಬರ್ 20ರಂದು ವಿಚಾರಣೆ ನಡೆಸಲಿದೆ. ನಿರ್ಭಯಾ ಗೆಳೆಯನಿಗೆ ಲಂಚ ಕೊಟ್ಟು ಖರೀದಿ ಮಾಡಿ ಟಿವಿ ಚಾನೆಲ್ ಗಳ ಮುಂದೆ ಹೇಳಿಕೆ ನೀಡಿದ್ದಾನೆ. ಆತನನ್ನೇ ಪೊಲೀಸರು ಸಾಕ್ಷಿ ಎಂದು ಪರಿಗಣಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ನಿರ್ಭಯಾ ಪ್ರಕರಣದಲ್ಲಿ ಆರೋಪಿಗಳನ್ನು ಶಿಕ್ಷಿಸಲು ಮಾಧ್ಯಮಗಳು, ಸಾರ್ವಜನಿಕರು ಹಾಗೂ ರಾಜಕೀಯ ಒತ್ತಡ ಇದೆ ಎಂದು ವಕೀಲ ಸಿಂಗ್ ಹೇಳಿದರು. ಈ ಪ್ರಕರಣದಲ್ಲಿ ದೆಹಲಿ ಸರ್ಕಾರ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ತುಂಬಾ ಆಸಕ್ತಿ ವಹಿಸುತ್ತಿದೆ. ಆದರೆ ಗಲ್ಲುಶಿಕ್ಷೆಗೆ ಗುರಿಯಾಗಿರುವ ಹಲವು ಆರೋಪಿಗಳು ಇನ್ನೂ ಜೀವಂತವಾಗಿದ್ದಾರೆ. ಆದರೆ ರಾಜಕೀಯ ಅಜೆಂಡಾ ಇದ್ದಾಗ ಎಲ್ಲವೂ ನಡೆಯುತ್ತದೆ ಎಂದು ವಾದ ಮಂಡಿಸಿದರು.
ದೆಹಲಿ ಸರ್ಕಾರ ಮಾಡಬೇಕಾದ ಕೆಲಸ ಬಹಳಷ್ಟಿದೆ. ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿದೆ. ಹೀಗೆ ಆಯುಷ್ಯ ಕ್ಷೀಣಿಸುತ್ತಿರುವಾಗ ಗಲ್ಲುಶಿಕ್ಷೆ ಯಾಕೆ? ಗಲ್ಲುಶಿಕ್ಷೆಯೇ ಎಲ್ಲದಕ್ಕೂ ಪರಿಹಾರವಲ್ಲ. ಉಪನಿಷತ್ ಪ್ರಕಾರ ಮನುಷ್ಯ ಸಾವಿರಾರು ವರ್ಷಗಳ ಕಾಲ ಬದುಕುತ್ತಿದ್ದರು. ಗಲ್ಲುಶಿಕ್ಷೆಯಿಂದ ಏನು ಸಾಧಿಸಬಹುದು. ಅವರ ಕುಟುಂಬಕ್ಕೆ ಯಾರು ಜವಾಬ್ದಾರಿ? ಅಪರಾಧಿಯನ್ನು ಕೊಲ್ಲಬಹುದೇ ಹೊರತು, ಅಪರಾಧವನ್ನಲ್ಲ. ಬದುಕಿ, ಬದುಕಲು ಬಿಡಿ ಎಂಬುದು ಹಿಂದೂ ಧರ್ಮದ ಧ್ಯೇಯ ಎಂದು ಅಕ್ಷಯ್ ಕುಮಾರ್ ಪರ ವಕೀಲರು ವಾದ ಮಂಡಿಸಿದ್ದಾರೆ.