ನವದೆಹಲಿ: 2016 ರಲ್ಲಿ ರಾಂಚಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ರಾಹುಲ್ ರಾಜ್ ತಪ್ಪಿತಸ್ಥನೆಂದು ಸಾಬೀತಾದ ಹಿನ್ನಲೆಯಲ್ಲಿ ವಿಶೇಷ ಸಿಬಿಐ ನ್ಯಾಯಾಲಯ ಗಲ್ಲು ಶಿಕ್ಷೆಯನ್ನು ವಿಧಿಸಿ ತೀರ್ಪು ಹೊರಡಿಸಿದೆ.
ರಾಹುಲ್ ರಾಜ್ ಬಿಹಾರದ ನಳಂದ ಜಿಲ್ಲೆಯವನು. ಶುಕ್ರವಾರ ಸಿಬಿಐ ವಿಶೇಷ ನ್ಯಾಯಾಲಯ ಪ್ರಮುಖ ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿತ್ತು. ಶನಿವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ.
ಡಿಸೆಂಬರ್ 16, 2016 ರಂದು ರಾಂಚಿಯ ಬೂಟಿ ಬಸ್ತಿ ಪ್ರದೇಶದಲ್ಲಿ ಯುವತಿಯೋರ್ವಳ ಸುಟ್ಟು ಕರಕಲಾದ ಶವ ಪತ್ತೆಯಾಗಿತ್ತು. ಶವಪರೀಕ್ಷೆಯಲ್ಲಿ ಅತ್ಯಾಚಾರ ಮತ್ತು ಕತ್ತು ಹಿಸುಕಿ ಕೊಲೆಗೈದಿರುವುದು ಸಾಬಿತಾಗಿತ್ತು. ಮಾತ್ರವಲ್ಲದೆ ಪ್ರಕರಣವು ರಾಂಚಿಯಲ್ಲಿ ವಿದ್ಯಾರ್ಥಿ ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು.
ನವೆಂಬರ್ ನಲ್ಲಿ ವಿಚಾರಣೆ ಆರಂಭಿಸಿದ್ದ ಕೋರ್ಟ್ ಡಿಸೆಂಬರ್ ಮಧ್ಯಭಾಗದ ವೇಳೆಗೆ ತೀರ್ಪು ನೀಡಿ ತ್ವರಿತಗತಿಯಲ್ಲಿ ನ್ಯಾಯದಾನ ಮಾಡಿದೆ. ದಿಲ್ಲಿಯ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣವಾದ ನಾಲ್ಕು ವರ್ಷವಾದ ನಂತರ ಅಂದರೆ 2016ರ ಡಿಸೆಂಬರ್ 16ರಂದು ರಾಂಚಿಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ ಮೇಲೆ ಇದೇ ರೀತಿಯ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಹಾಗಾಗಿ ಇದು ರಾಂಚಿಯ ನಿರ್ಭಯಾ ಅತ್ಯಾಚಾರ ಪ್ರಕರಣ ಎಂದೇ ಹೇಳಲಾಗಿತ್ತು.
ಘಟನೆ ಬಳಿಕ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ರಾಹುಲ್ ರಾಜ್ ನನ್ನು ಸಿಬಿಐ ತನಿಖಾ ತಂಡ ಈ ವರ್ಷದ ಜೂನ್‌ನಲ್ಲಿ ಲಖ್ನೋ ಜೈಲಿನಿಂದ ಘಟನಾ ಸ್ಥಳಕ್ಕೆ ಕರೆತಂದು ವಿಚಾರಣೆ ನಡೆಸಿತ್ತು. ಅತ್ಯಾಚಾರ ಪ್ರಕರಣದಲ್ಲಿ ಈತ ತಲೆಮರೆಸಿಕೊಂಡಿದ್ದರೂ ಬೇರೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ. ತನಿಖೆ ನಡೆಸಿ ಸಿಕ್ಕ ಪುರಾವೆಗಳನ್ನು ಆಧರಿಸಿ ರಾಜ್‌ನನ್ನು ಕರೆತಂದು ವಿಚಾರಣೆಗೊಳಪಡಿಸಿದಾಗ ಆತ ಅಪರಾಧ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದ.