“ಹುಟ್ಟಿದ ಊರನ್ನು ಬಿಟ್ಟು ಬಂದ ಮೇಲೆ ಇನ್ನೇನು ಬಿಡುವುದ ಬಾಕಿ ಇದೆ….ʼ ನಟ ದಿಗಂತ್ ಅಭಿನಯದ ಪರಪಂಚ ಚಿತ್ರದ ಗೀತೆ ಇದೆ, ಬಹುಶಃ ಈ ಹಾಡನ್ನು ಕೇಳದವರಿಲ್ಲ. ಅಷ್ಟರ ಮಟ್ಟಿಗೆ ಹಿಟ್ ಎನಿಸಿಕೊಂಡಿರುವ ಗೀತೆ ಇದು. ಹೌದು ನಿರ್ದೇಶಕ, ಸಾಹಿತಿ ಯೋಗರಾಜ್ ಭಟ್ ಬರೆದ ಗೀತೆ ಇದು. ವೀರ್‌ಸಮರ್ಥ್ ಸಂಗೀತ ನಿರ್ದೇಶನ ಇರುವ ಈ ಚಿತ್ರವನ್ನು ಕ್ರಿಶ್‌ಜೋಶಿ ನಿರ್ದೇಶನ ಮಾಡಿದ್ದಾರೆ. ಎಲ್ಲಾ ಸರಿ, ಈಗ ಯಾಕೆ ಈ ಹಾಡಿನ ಕುರಿತ ಟಿಪ್ಪಣಿ ಎಂಬ ಪ್ರಶ್ನೆ ಬರಬಹುದು
. ಸದ್ಯಕ್ಕೆ ಈಗಿರುವ ಪರಿಸ್ಥಿತಿಗೆ ಈ ಹಾಡು ಹೊಂದಿಕೊಂಡಿದೆ ಎಂಬುದು ಎಲ್ಲರ ಅಭಿಪ್ರಾಯ. ಅಷ್ಟೇ ಅಲ್ಲ ಸ್ವತಃ ಯೋಗರಾಜ್ ಭಟ್ ಅವರೇ ಈ ಹಾಡು ಈಗ ಹೆಚ್ಚು ಪ್ರಸ್ತುತ ಎಂದು ಟ್ವೀಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಮೊದ ಮೊದಲು ಈ ಹಾಡು ಬರೆದಾಗ, ಎಲ್ಲೂ ರೀಚ್ ಆಗಿರಲಿಲ್ಲ. ಆ ಬಳಿಕ ಒಳ್ಳೆಯ ಹಾಡು ಯಾಕೆ ರೀಚ್ ಆಗಲಿಲ್ಲ ಎಂದು ತಲೆಕೆಡಿಸಿಕೊಂಡ ಯೋಗರಾಜ್‌ಭಟ್, ಹುಚ್ಚ ವೆಂಕಟ್ ಅವರ ಬಳಿ ಈ ಹಾಡು ಹಾಡಿಸಿದರೆ ಹೇಗೆ? ಎಂಬ ಐಡಿಯಾ ಬಂದಿದ್ದೇ ತಡ, ಆ ಹಾಡನ್ನು ಪುನಃ ಹುಚ್ಚ ವೆಂಕಟ್ ಅವರ ಕಡೆಯಿಂದ ಹಾಡಿಸಿಬಿಟ್ಟರು.
ಯಾವಾಗ ಹುಚ್ಚ ವೆಂಕಟ್ ಧ್ವನಿಯಲ್ಲಿ ಹುಟ್ಟಿದ ಊರನು ಬಿಟ್ಟು ಬಂದ ಮೇಲೆ.. ಹಾಡು ಹೊರಬಂತೋ, ಎಲ್ಲೆಡೆ ಜೋರು ಸುದ್ದಿ ಯಾಯ್ತು. ವಿಶೇಷ ವೆಂದರೆ, ಈ ಹಾಡು ಕೇಳಿದ ಅದೆಷ್ಟೋ ಕನ್ನಡಿಗರು ವಿದೇಶಗಳಿಂದ ಇತ್ತ ಬರಬೇಕು ಎಂಬ ಇಂಗಿತ ವ್ಯಕ್ತಪಡಿಸಿ ದರು. ಒಂದಷ್ಟು ಸಾಫ್ಟ್ ವೇರ್ ಮಂದಿ ಕೂಡ ಬೆಂಗಳೂರು ಬಿಟ್ಟು, ತಮ್ಮ ಊರಿನತ್ತ ದಾರಿ ಹಿಡಿದರು. ಈ ಹಾಡಲ್ಲಿ ಅಷ್ಟೊಂದು ಅದ್ಭುತ ತಾತ್ಪರ್ಯವಿದೆ. ಅರ್ಥಪೂರ್ಣ ಸಾಹಿತ್ಯವಿದೆ. ಇಡೀ ನಮ್ಮ ಊರಿನ ನಮ್ಮವರ, ನಮ್ಮ ಗೆಳೆಯರ ಪ್ರೀತಿ ಸಂಬಂಧದ ಮೌಲ್ಯಗಳು ತುಂಬಿಕೊಂಡಿವೆ.
ಹಾಡು ಕೇಳಿದ ಬಹುತೇಕರು ತಲೆತೂಗಿಸಿದ್ದಲ್ಲದೆ, ಹಾಡಿನ ಬಗ್ಗೆಯೇ ಹೇಳಿದ್ದು ಮಾತ್ರ ವಿಶೇಷ. ಈಗ ಕೊರೊನಾ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಈಗ ಜನರು ಬೆಂಗಳೂರು ಬಿಟ್ಟು ತಮ್ಮೂರಿನ ದಾರಿ ಹಿಡಿಯುತ್ತಿದ್ದಾರೆ. ಹಾಗಾಗಿ ಈ ಹಾಡು ಇಂದಿಗೆ ಪ್ರಸ್ತುತವಾಗಿದೆ ಎಂಬುದು ಯೋಗರಾಜ್ ಭಟ್ ಅವರ ಮಾತು. ಅದೇನೆ ಇರಲಿ, ಯಾವುದೇ ಸಿನಿಮಾ ಇರಲಿ, ಅದರಲ್ಲಿ ಕೆಲ ಹಾಡುಗಳು ಪರಿವರ್ತನೆಗೆ ಕಾರಣವಾಗುತ್ತವೆ. ಅಂತಹ ಪರಿವರ್ತನೆಗೆ ಈ ಹಾಡು ಕೂಡ ಈಗ ಕಾರಣವಾಗಿದೆ ಎಂಬುದಷ್ಟೇ ಈಗಿನ ಸತ್ಯ.
* ವಿಜಯ್