Advertisement

ಮತಾಂತರ ನಿಷೇಧ ಮಸೂದೆ: ಏನು-ಎತ್ತ?

02:02 PM Dec 22, 2021 | Team Udayavani |

ಹೊಸದುರ್ಗ ಕ್ಷೇತ್ರದ ಶಾಸಕ ಗೂಳಿಹಟ್ಟಿ ಶೇಖರ್‌ ಅವರು ಬಲವಂತದ ಮತಾಂತರ ವಿಚಾರವನ್ನು ಮುಂಗಾರು ಅಧಿವೇಶನದಲ್ಲಿ ಪ್ರಸ್ತಾವಿಸಿದ ವೇಳೆಯಿಂದ  ಬಲವಂತದ ಮತಾಂತರ ನಿಷೇಧಕ್ಕಾಗಿ ಚರ್ಚೆಗಳು ಆರಂಭವಾಗಿವೆ. ಸದ್ಯ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬಲವಂತದ ಮತಾಂತರ ನಿಷೇಧಿಸುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣ ಮಸೂದೆ 2021 ಮಂಡಿಸಲಾಗಿದೆ.

Advertisement

1 ಮತಾಂತರ ನಿಷೇಧ ಎಂದರೇನು?

ಧಾರ್ಮಿಕ ಸ್ವಾತಂತ್ರ್ಯ ಹಕ್ಕಿನ ಸಂರಕ್ಷಣೆಗಾಗಿ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಕಾನೂನು ಬಾಹಿರವಾಗಿ ಮತಾಂತರ ಮಾಡುವುದನ್ನು ತಡೆಯುವುಕ್ಕಾಗಿ ಮಾಡಿರುವುದೇ ಮತಾಂತರ ನಿಷೇಧ ಮಸೂದೆ.

2 ಯಾವ ಬಗೆಯ ಮತಾಂತರಕ್ಕೆ ನಿಷೇಧವಿದೆ?

ಆಮಿಷ. ಪ್ರಲೋಭನೆ, ಉದ್ಯೋಗ ಉಚಿತ ಶಿಕ್ಷಣ, ನಗದು, ಮದುವೆಯಾಗುವುದಾಗಿ ವಾಗ್ಧಾನ, ಉತ್ತಮ ಜೀವನ ಶೈಲಿಯ ಭರವಸೆ, ದೈವಿಕ ಅಸಂತೋಷ, ಒತ್ತಾಯ, ವಂಚನೆ ಮೂಲಕ ಮತಾಂತರ ಮಾಡುವುದಕ್ಕೆ ನಿಷೇಧವಿದೆ. ಒಂದು ಧರ್ಮದ ಆಚರಣೆಗಳ ಅವಹೇಳನ ಮಾಡುವುದನ್ನೂ ಆಮಿಷ ಎಂದೇ ಪರಿಗಣಿಸಲಾಗಿದೆ.

Advertisement

3 ಒಂದು ವೇಳೆ ಘರ್‌ವಾಪ್ಸಿಯಾದರೆ ಈ ಕಾಯ್ದೆ ಅನ್ವಯವಾಗುತ್ತದೆಯೇ?

ಇಲ್ಲ. ವ್ಯಕ್ತಿಯೊಬ್ಬ ಒಂದು ಧರ್ಮದಿಂದ ಮತ್ತೂಂದು ಧರ್ಮಕ್ಕೆ ಮತಾಂತರವಾದಾಗ ಮಾತ್ರ ಈ ಕಾಯ್ದೆ ಅನ್ವಯವಾಗುತ್ತದೆ. ಆದರೆ ಆತ ಯಾವುದೇ ಕಾರಣದಿಂದ ಮತಾಂತರಗೊಂಡು ವಾಪಸ್‌ ಮಾತೃಧರ್ಮಕ್ಕೆ ಆಗಮಿಸುವುದಾದರೆ ಈ ಕಾಯ್ದೆ ಅನ್ವಯವಾಗುವುದಿಲ್ಲ.

4 ವ್ಯಕ್ತಿಯೊಬ್ಬ ಮತಾಂತರಗೊಳ್ಳುತ್ತಿದ್ದರೆಯಾರು ದೂರು ಕೊಡಬಹುದು?

ಯಾರೇ ಮತಾಂತರಗೊಂಡ ವ್ಯಕ್ತಿ, ಆತನ ಪಾಲಕರು, ಸೋದರ, ಸೋದರಿ, ಆತನಿಗೆ ಸೋದರ ಸಂಬಂಧಿ, ಮದುವೆ ಅಥವಾ ದತ್ತು ಸಂಬಂಧಿ, ಸಹವರ್ತಿ, ಸಹೋದ್ಯೋಗಿ ಮತಾಂತರ ಸಂಬಂಧ ದೂರು ಕೊಡಬಹುದು.

5 ಬಲವಂತದ ಮತಾಂತರಕ್ಕೆ ಏನು ಶಿಕ್ಷೆ?

ಬಲವಂತದ ಮತಾಂತರ ಮಾಡಿದರೆ ಅಂಥ ವ್ಯಕ್ತಿಗೆ ಮೂರು ವರ್ಷದಿಂದ ಐದು ವರ್ಷಗಳ ವರೆಗೆ ವಿಸ್ತರಿಸಬಹುದಾದ ಕಾರಾವಾಸ, 25 ಸಾವಿರ ರೂ.ಗಳ ವರೆಗೆ ದಂಡ ವಿಧಿಸಲಾಗುತ್ತದೆ. ಹಾಗೆಯೇ ಅಪ್ರಾಪ್ತ ಅಥವಾ ಅಸ್ವಸ್ಥಚಿತ್ತ ವ್ಯಕ್ತಿ, ಮಹಿಳಾ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ವ್ಯಕ್ತಿಗಳನ್ನು ಮತಾಂತರ ಮಾಡಿದರೆ ಮೂರರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ, 50 ಸಾವಿರ ರೂ.ಗಳವರೆಗೆ ದಂಡ ವಿಧಿಸಲಾಗುವುದು.

6 ಸಾಮೂಹಿಕ ಮತಾಂತರಕ್ಕೆ ಏನು ಶಿಕ್ಷೆ?

ಹೌದು, ಸಾಮೂಹಿಕವಾಗಿ ಮತಾಂತರ ಮಾಡಿದರೆ ಅಂಥವರಿಗೆ ಮೂರು ವರ್ಷದಿಂದ 10 ವರ್ಷಗಳವರೆಗೆ ಕಾರಾಗೃಹ ವಾಸ, ಒಂದು ಲಕ್ಷ ರೂ.ಗಳವರೆಗೆ ಶಿಕ್ಷೆ ವಿಧಿಸಲಾಗುತ್ತದೆ.

7 ಬಲವಂತದಿಂದ ಮತಾಂತರ ಪ್ರಕರಣದಲ್ಲಿ ಸಂತ್ರಸ್ತರಿಗೆ ಪರಿಹಾರ ಉಂಟೇ?

ಕಾಯ್ದೆಯಲ್ಲಿ ಈ ಬಗ್ಗೆಯೂ ಪ್ರಸ್ತಾವಿಸಲಾಗಿದೆ. ಒಂದು ವೇಳೆ ಆಮಿಷಕ್ಕೆ ಬಲಿಯಾಗಿ ಮತಾಂತರವಾದರೆ ಇಂಥ ಸಂತ್ರಸ್ತರಿಗೆ ಮತಾಂತರ ಮಾಡಿದ ವ್ಯಕ್ತಿ 5 ಲಕ್ಷ ರೂ.ಗಳವರೆಗೆ ಪರಿಹಾರ ನೀಡುವಂತೆ ಕೋರ್ಟ್‌ ಆದೇಶ ನೀಡಬಹುದು.

8 ಪುನರಾವರ್ತಿ ಅಪರಾಧಿಗೆ ಬೇರೆ ರೀತಿಯ ಶಿಕ್ಷೆಯುಂಟೇ?

ಖಂಡಿತವಾಗಿಯೂ ಇದೆ. ಈ ಕಾಯ್ದೆಯ ಪ್ರಕಾರ, ಹಿಂದೊಮ್ಮೆ ಬಲವಂತದ ಮತಾಂತರ ಮಾಡಿ, ಅಪರಾಧಿ ಎಂದು ಸಾಬೀತಾದ ವ್ಯಕ್ತಿ, ಜೈಲು ಶಿಕ್ಷೆ ಮುಗಿಸಿ ಹೊರಬಂದು ಮತ್ತೆ ಅದೇ ತಪ್ಪನ್ನು ಮಾಡಿದರೆ ಆತನಿಗೆ ಐದು ವರ್ಷಕ್ಕಿಂತ ಹೆಚ್ಚಿನ ಕಾರಾಗೃಹ ವಾಸ ಮತ್ತು 2 ಲಕ್ಷ ರೂ.ಗಳ ವರೆಗೆ ದಂಡ ವಿಧಿಸಬಹುದು. ಅಲ್ಲದೆ ಈ ಬಲವಂತದ ಮತಾಂತರಕ್ಕೆ ಸಂಬಂಧಿಸಿದ ಅಪರಾಧವು ಜಾಮೀನುರಹಿತವಾಗಿರುತ್ತದೆ.

9 ಅಂತರ್‌ಧರ್ಮೀಯ ವಿವಾಹಕ್ಕೆ ಈ ಕಾಯ್ದೆಯಲ್ಲಿ  ಏನು ಕ್ರಮ?

ಸ್ವಇಚ್ಛೆಯಿಂದ ಮತಾಂತರವಾಗಿ ವಿವಾಹ ಮಾಡಿಕೊಂಡರೆ ತಪ್ಪಾಗುವುದಿಲ್ಲ. ಆದರೆ ವಿವಾಹದ ಕಾರಣಕ್ಕಾಗಿಯೇ ಮತಾಂತರ ಮಾಡುವುದನ್ನು ಇಲ್ಲಿ ಅಪರಾಧ ಎಂದು ನಿರ್ಧರಿಸಲಾಗುತ್ತದೆ. ಜತೆಗೆ ಈ ಮದುವೆಯನ್ನು ಅಸಿಂಧು ಎಂದು ಘೋಷಿಸಬಹುದು.

10ಮನಃಪೂರ್ವಕ ಮತಾಂತರವಾಗುವುದಾದರೆ ಏನು ಮಾಡಬೇಕು?

ಸ್ವಇಚ್ಛೆಯಿಂದ ಮತಾಂತರವಾಗುವುದಾದರೆ ಮೊದಲು ಘೋಷಿಸಿಕೊಳ್ಳಬೇಕು. ಅಂದರೆ ಕನಿಷ್ಠ 30 ದಿನಗಳ ಮುಂಚಿತವಾಗಿ ತನ್ನ ನಿವಾಸದ ಜಿಲ್ಲೆಯ ಅಥವಾ ಜನ್ಮಸ್ಥಳದ ದಂಡಾಧಿಕಾರಿ ಅಥವಾ ಜಿಲ್ಲಾ ಅಪರ ದಂಡಾಧಿಕಾರಿಗೆ ಮಾಹಿತಿ ನೀಡಬೇಕು. ಧಾರ್ಮಿಕ ಮತಾಂತರ ಮಾಡುವ ವ್ಯಕ್ತಿಯೂ ತನ್ನ ಜಿಲ್ಲೆಯ ಸದರಿ ಅಧಿಕಾರಿಗಳಿಗೆ 30 ದಿನಗಳ ಮುಂಗಡ ನೋಟಿಸ್‌ ನೀಡಬೇಕು. ಈ ಮನವಿಗಳು ಬಂದ ಬಳಿಕ ಅಧಿಕಾರಿಯು ಸೂಚನಾ ಫ‌ಲಕದಲ್ಲಿ ಆಕ್ಷೇಪಣೆಗಳನ್ನು ಆಹ್ವಾನಿಸಿ ನೋಟಿಸ್‌ ಅಂಟಿಸಬೇಕು. ಒಂದು ವೇಳೆ ಇದಕ್ಕೆ ಆಕ್ಷೇಪಣೆ ಬಂದಲ್ಲಿ ಮತಾಂತರದ ನೈಜ ಆಶಯ, ಉದ್ದೇಶ ಮತ್ತು ಕಾರಣದ ಬಗ್ಗೆ ಕಂದಾಯ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಮೂಲಕ ವಿಚಾರಣೆ ನಡೆಸಬೇಕು. ಒಂದು ವೇಳೆ ಸ್ವಇಚ್ಛೆಯಿಂದ ಮತಾಂತರವಾಗುತ್ತಿಲ್ಲ, ಆಮಿಷ ಅಥವಾ ಒತ್ತಡಗಳಿಗೆ ಮತಾಂತರ ಮಾಡಲಾಗುತ್ತಿದೆ ಎಂಬುದು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಕ್ರಿಮಿನಲ್‌ ದೂರು ದಾಖಲಿಸಬಹುದು.

ಬೇರೆ ರಾಜ್ಯಗಳಲ್ಲಿನ ಮತಾಂತರ ನಿಷೇಧ ಕಾಯ್ದೆ ವಿವರ
ಬಲವಂತದ ಮತಾಂತರ ಪ್ರಕರಣಗಳು ಕಂಡು ಬಂದ ಮೇಲೆ ಕರ್ನಾಟಕದಲ್ಲೂ ಮತಾಂತರ ನಿಷೇಧಕ್ಕಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯೊಂದನ್ನು ಮಂಡಿಸಲಾಗಿದೆ. ಇಂಥ ಮಸೂದೆಯನ್ನು ಕರ್ನಾಟಕದಲ್ಲಷ್ಟೇ ಅಲ್ಲ, ಬೇರೆ ಬೇರೆ ರಾಜ್ಯಗಳಲ್ಲೂ ತರಲಾಗಿದೆ. ಈ ರಾಜ್ಯಗಳಲ್ಲಿ ಪ್ರಭಾವ ಬೀರಿ, ಬಲವಂತ ಮಾಡಿ, ಆಮಿಷವೊಡ್ಡಿ, ವಿವಾಹವಾಗುವುದಾಗಿ ಹೇಳಿ ಮತಾಂತರ ಮಾಡಿಕೊಳ್ಳುವಂತಿಲ್ಲ. ಒಂದು ವೇಳೆ ಈ ರೀತಿ ಮಾಡಿದರೆ ಜೈಲು ಮತ್ತು ದಂಡ ಗ್ಯಾರಂಟಿ.

ಉತ್ತರ ಪ್ರದೇಶ(2020)

-ಬಲವಂತರದ ಮತಾಂತರಕ್ಕೆ ಒಂದರಿಂದ ಐದು ವರ್ಷಗಳ ವರೆಗೆ ಶಿಕ್ಷೆ

-ಅಪ್ರಾಪ್ತರು, ಮಹಿಳೆ, ಎಸ್‌ಸಿ-ಎಸ್ಟಿಯವರನ್ನು ಮತಾಂತರ ಮಾಡಿದರೆ ಶಿಕ್ಷೆ ಪ್ರಮಾಣ ಹೆಚ್ಚಳ

-ಸಾಮೂಹಿಕವಾಗಿ ಮತಾಂತರ ಮಾಡಿದರೆ 3ರಿಂದ 10 ವರ್ಷ ಜೈಲು, ದಂಡವೂ ಉಂಟು

ಹಿಮಾಚಲ ಪ್ರದೇಶ(2019)

ವಿವಾಹದ ಉದ್ದೇಶಕ್ಕೆ ಮತಾಂತರ ಮಾಡುವುದೂ ತಪ್ಪು.

-ಮತಾಂತರವಾಗಬೇಕಾದರೆ ಒಂದು ತಿಂಗಳು ಮೊದಲು ಮಾಹಿತಿ ನೀಡಬೇಕು

-ಉಲ್ಲಂಘಿಸಿದರೆ ಒಂದರಿಂದ 7ವರ್ಷಗಳ ವರೆಗೆ ಶಿಕ್ಷೆ.

ಗುಜರಾತ್‌(2003)

-ಸ್ವಇಚ್ಛೆಯಿಂದ ಮತಾಂತರವಾದರೆ 10 ದಿನಗಳ ಬಳಿಕ ಮಾಹಿತಿ ನೀಡಬೇಕು

-ಧಾರ್ಮಿಕ ಮುಖಂಡನ ಕಡೆಯಿಂದ ಮತಾಂತರವಾದರೆ ಮೊದಲೇ ಮಾಹಿತಿ ಕೊಡಬೇಕು

-ಬಲವಂತದ ಮತಾಂತರಕ್ಕೆ 3ರಿಂದ 4 ವರ್ಷ ಜೈಲು, 50ರಿಂದ 1 ಲಕ್ಷ ರೂ.ಗಳ ವರೆಗೆ ಜೈಲು

ಮಧ್ಯ ಪ್ರದೇಶ (1968)

-ಸ್ವಇಚ್ಛೆಯಿಂದ ಮತಾಂತರವಾದರೆ ಏಳು ದಿನಗಳ ಒಳಗೆ ಮಾಹಿತಿ ಕೊಡಬೇಕು

-ಬಲವಂತದ ಮತಾಂತರಕ್ಕೆ ಒಂದರಿಂದ ಎರಡು ವರ್ಷ ಜೈಲು, 5ರಿಂದ 10 ಸಾವಿರ ರೂ. ದಂಡ

ಉತ್ತರಾಖಂಡ(2018)

-ಒಂದು ತಿಂಗಳು ಮುನ್ನ ಸಂಬಂಧಪಟ್ಟವರಿಗೆ ಮಾಹಿತಿ

-ಬಲವಂತದ ಮತಾಂತರಕ್ಕೆ ಒಂದರಿಂದ ಏಳು ವರ್ಷ ಜೈಲು ಶಿಕ್ಷೆ

ಝಾರ್ಖಂಡ್‌ (2017)

-ಏಳು ದಿನಗಳಿಗೆ ಮುನ್ನ ಸಂಬಂಧಪಟ್ಟ ಅಧಿಕಾರಿಗೆ ಮಾಹಿತಿ

-ಧಾರ್ಮಿಕ ನಾಯಕ ಮತಾಂತರ ಮಾಡುವುದಾದರೆ 15 ದಿನ ಮುನ್ನ ಮಾಹಿತಿ ಕೊಡಬೇಕು.

-3ರಿಂದ 7 ವರ್ಷ ಜೈಲು, 50 ಸಾವಿರದಿಂದ 1 ಲಕ್ಷ ರೂ.ಗಳ ವರೆಗೆ ದಂಡ

ಛತ್ತೀಸ್‌ಗಢ‌ (2006)

-ಸ್ವಇಚ್ಛೆಯಿಂದ ಮತಾಂತರವಾದರೆ ಒಂದು ತಿಂಗಳ ಒಳಗೆ ಮಾಹಿತಿ ನೀಡಬೇಕು

-ಧಾರ್ಮಿಕ ನಾಯಕ ಮತಾಂತರ ಮಾಡುವುದಾದರೆ ಒಂದು ತಿಂಗಳು ಮೊದಲೇ ಮಾಹಿತಿ ಕೊಡಬೇಕು.

-ಬಲವಂತದ ಮತಾಂತರಕ್ಕೆ 3ರಿಂದ 4 ವರ್ಷಗಳ ವರೆಗೆ ಜೈಲು, 20 ಸಾವಿರ ರೂ.ಗಳ ವರೆಗೆ ದಂಡ

ಡಿಶಾ (1967)

-ಸ್ವಇಚ್ಛೆಯಿಂದ ಮತಾಂತರಗೊಳ್ಳುವುದಾದರೆ 15 ದಿನ ಮೊದಲೇ ನೋಟಿಸ್‌ ಕೊಡಬೇಕು

-ಬಲವಂತದ ಮತಾಂತರಕ್ಕೆ ಒಂದರಿಂದ 2 ವರ್ಷಗಳ ವರೆಗೆ ಜೈಲು, 5ರಿಂದ 10 ಸಾವಿರ ರೂ.ಗಳ ವರೆಗೆ ದಂಡ

Advertisement

Udayavani is now on Telegram. Click here to join our channel and stay updated with the latest news.

Next