ಬೆಂಗಳೂರು: ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುತ್ತಿದ್ದ ಮತ್ತೂಂದು ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಕೇರಳ ಮೂಲದ ಆರು ಮಂದಿಯನ್ನು ಬಂಧಿಸಲಾಗಿದೆ.
ಮಧ್ಯಪ್ರಾಚ್ಯ ದೇಶಗಳಿಂದ ಭಾರತಕ್ಕೆ ಬರುತ್ತಿದ್ದ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ಭಾರತೀಯ ದೂರಸಂಪರ್ಕ ಇಲಾಖೆಗೆ ಕೋಟ್ಯಂತರ ರೂ. ನಷ್ಟ ಉಂಟು ಮಾಡುತ್ತಿದ್ದ ಆರೋಪದಲ್ಲಿ ಇವರನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಮನು (32), ರವಿಚಂದ್ರ(29), ಸುಬೇರ್(31), ಇಸ್ಮಾಯಿಲ್ ಅಬ್ದುಲ್(33), ಸಾಹಿರ್ ಹಾಗೂ ಜೋಹರ್ ಶರೀಫ್(28) ಬಂಧಿತರು. ಆರೋಪಿಗಳಿಂದ 5 ಲ್ಯಾಪ್‌ಟಾಪ್, 205 ಸಿಮ್ ಕಾರ್ಡ್‌ಗಳು, 16 ಸಿಮ್‌ಬಾಕ್ಸ್, 9 ಪ್ರೈಮರಿ ರೇಟ್ ಇಂಟರ್‌ಪೇಸ್ ಡಿವೈಸ್ 6 ಇಂಟರ್‌ನೆಟ್ ವೈ-ಫೈ ರೂಟರ್ಸ್ ಹಾಗೂ 9 ಮೊಬೈಲ್, 2 ಎಸ್‌ಐಪಿ ಟ್ರಕ್ ಕಾಲ್ ಡಿವೈಎಸ್ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಹೇಳಿದರು.
ಪುತ್ತೂರಿನ ವ್ಯಕ್ತಿಗೆ ಜೀವ ಬೆದರಿಕೆ
ಮತ್ತೊಂದೆಡೆ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಅನಾಮಧೇಯ ವ್ಯಕ್ತಿ ಆರೋಪಿಗಳು ಸ್ಥಾಪಿಸಿರುವ ಮಹದೇವಪುರದ ಎಸ್‌ಐಪಿ ಟ್ರಂಕ್ ಕಾಲ್ ಡಿವೈಸ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಟ್ಟಿಣಿಗೆಮಟ್ನೂರು ಗ್ರಾಮದ ಚಂದ್ರಹಾಸ್ ಎಂಬವರಿಗೆ ಕರೆ ಮಾಡಿ, ಶರತ್ ಮಡಿವಾಳನ ಹೆಣ ಬಿದ್ದಹಾಗೆ ನಾಳೆ ಸಂಜೆಯೊಳಗೆ ನಿನ್ನ ಹೆಣ ಕೂಡ ಬಿಳುತ್ತದೆ ಎಂದು ಬೆದರಿಕೆ ಕರೆ ಮಾಡಿದ್ದ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಆಯುಕ್ತರು ಹೇಳಿದರು.