Advertisement

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರೊಂದಿಗೆ ಮಾತುಕತೆ

12:08 PM Apr 14, 2022 | Team Udayavani |

ಕುಂದಾಪುರ: ಕನ್ನಡವನ್ನು ಪ್ರತ್ಯೇಕಿಸಿ ಭಾವುಕರಾಗಿ ನಿಂತರೆ ಆಗದು. ಅನ್ಯಭಾಷೆಗಳ ಜತೆಗೆ ಕನ್ನಡವನ್ನು ಕರೆದೊಯ್ಯಬೇಕು. ವಿಶ್ವಕನ್ನಡವಾಗಿಸಬೇಕು. ಅನ್ಯಭಾಷೆಯವರಿಗೆ ಬದುಕಗೊಡದೇ ನಾವು ಮಾತ್ರ ಬದುಕಬೇಕೆಂಬ ಹಠಮಾರಿ ಧೋರಣೆ ಸಲ್ಲದು. ಎಲ್ಲರೂ ಒಂದಾಗಿ ಬಾಳಬೇಕು. ಹೀಗೆ ಖಚಿತವಾಗಿ ಕ್ವಚಿತ್‌ ಆಗಿ ಹೇಳಿದರು ಪ್ರೊ| ಅಮ್ಮೆಂಬಳ ವಾಸುದೇವ ನಾವಡರು.

Advertisement

ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಕನ್ನಡಕ್ಕೆ ಅಪಾಯವಿದೆಯೇ?

ರಾ.ಶಿ.ನೀ. ಅರ್ಥಪೂರ್ಣವಾಗಿದೆ. ಪ್ರಾಥಮಿಕದಿಂದ ಉನ್ನತ ಶಿಕ್ಷಣವರೆಗಿನ ಧ್ಯೇಯ, ಧೋರಣೆ ಯುಕ್ತವಾಗಿದೆ. ಸರಕಾರದ ಆಲೋಚನೆಗೆ ಪೂರ್ಣ ಬೆಂಬಲ ಇದೆ. ಕನ್ನಡಕ್ಕೆ ಇದರಿಂದ ಆತಂಕ ಇಲ್ಲ . ಕನ್ನಡ ಇತರ ಭಾಷೆಗಳ ಜತೆಜತೆಗೇ ಸಾಗಬೇಕು.

ಹನಿಗವನ, ಕವನ, ಕಥೆಯಷ್ಟೇ ಸಾಹಿತ್ಯ ಎಂದಾಗುತ್ತಿದೆ. ವಿಮರ್ಶೆ, ಸಂಶೋಧನೆ, ಗಂಭೀರ ಸಾಹಿತ್ಯ, ಕಾದಂಬರಿ ಕಡಿಮೆಯಾಗುತ್ತಿದೆಯಲ್ಲವೇ?

ಸರಿಯಾಗಿ ಗುರುತಿಸಿದ್ದೀರಿ. ಕವಿತೆ ಜನಪ್ರಿಯ ಮಾಧ್ಯಮ. ಹನಿಗವನ, ಕಥೆ ಮೊದಲಾದ ಲಘುಧಾಟಿಯನ್ನು ಜನ ಬಯಸುತ್ತಾರೆ. ಹಾಗಂತ ಸಾಮಾಜಿಕ ಹಾಗೂ ವೈಜ್ಞಾನಿಕ ಸಂಶೋಧನೆಗಳನ್ನು ಕನ್ನಡದಲ್ಲಿ ನೀಡದೇ ಹೋದರೆ, ಆಸಕ್ತರು ಹುಟ್ಟದಿದ್ದರೆ ಮುಂದೆ ಹುಟ್ಟುವ ಪೀಳಿಗೆಗೆ ನಾವು ಮಾಹಿತಿ ನೀಡದೇ ವಂಚಿಸಿದಂತಾಗುತ್ತದೆ. ಅದಕ್ಕಾಗಿ ಸಂಶೋಧನೆಗೂ ಆಸಕ್ತಿ ಹುಟ್ಟಬೇಕು. ಕೇವಲ ಜನಪ್ರಿಯ ಮಾರ್ಗದಲ್ಲಿ ಸುಲಭವಾಗಿ ಪಿಎಚ್‌ಡಿಗಾಗಿ ಮಾಡುವ ಸಂಶೋಧನೆ ನಿಷ್ಫಲ. ವೈಧಾನಿಕತೆ ಕಳಪೆಯಾಗಿದೆ. ಗುಣಮಟ್ಟ ಕುಸಿದಿದೆ. ಉದ್ಯೋಗಕ್ಕೆ ರಹದಾರಿ ಎಂದಷ್ಟೇ ಆಗಿದೆ.

Advertisement

ಓದುವ ಆಸಕ್ತಿ ಹೇಗೆ ಬೆಳೆಸಬಹುದು?

ಗ್ರಾ.ಪಂ.ಗಳಲ್ಲಿ, ಬಸ್‌ ನಿಲ್ದಾಣಗಳಲ್ಲಿ ಗ್ರಂಥಾಲಯ ಎಂದು ಇತ್ತೀಚೆಗೆ ಆರಂಭವಾದಂತೆ ಹೊಸ ಹೊಸ ಪ್ರಯೋಗಗಳು, ಜನರಿಗೆ ಸುಲಭದಲ್ಲಿ ಪುಸ್ತಕಗಳು ದೊರೆಯುವಂತಾಗಬೇಕು. ಕಸಾಪ, ಪುಸ್ತಕ ಪ್ರಾಧಿಕಾರಗಳ ಪುಸ್ತಕಗಳು ಗ್ರಾಮಾಂತರ ಜನರಿಗೂ ದೊರೆವಂತಾಗಬೇಕು. ಈಗ ಕಸಾಪ ಹಾಗೂ ಪುಸ್ತಕ ಪ್ರಾಧಿಕಾರದ ಪುಸ್ತಕಗಳು ಬೆಂಗಳೂರಿನ ಹೊರತಾಗಿ ಅಲಭ್ಯ ಎಂದಾಗಿದೆ.

ಜನರನ್ನು ಸಮ್ಮೇಳನದ ಕಡೆಗೆ ಸೆಳೆಯುವುದು ಹೇಗೆ?

ಇದು ಈಗ ಎಲ್ಲರನ್ನೂ ಕಾಡುವ ದೊಡ್ಡ ಪ್ರಶ್ನೆ. ಸಭಾಂಗಣದ ಸಮೀಪವೇ ಇದ್ದರೂ ನೇರಪ್ರಸಾರದಲ್ಲೇ ಕಂಡು ಮುಗಿಸುತ್ತಾರೆ! ಸಮ್ಮೇಳನಗಳು ಜಾತ್ರೆಯ ಸ್ವರೂಪದಲ್ಲಿ, ಹಬ್ಬದ ರೂಪದಲ್ಲಿ ನಡೆದಾಗ ಪುಸ್ತಕ ಕೊಳ್ಳುವಿಕೆ, ಸಾಂಸ್ಕೃತಿಕ ಹಾಗೂ ಸಾಹಿತ್ಯದ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಗೆ ಅವಕಾಶ ಇದ್ದಾಗ ಬರುತ್ತಾರೆ. ಆದರೆ ಸಮ್ಮೇಳನ ವ್ಯರ್ಥ ಅಲ್ಲ. ಹಣ ಪೋಲು ಮಾಡಲಲ್ಲ. ಕನ್ನಡದ ಪ್ರೀತಿಯ ಟಿಸಿಲಾಗಿ ರೂಪುಗೊಳ್ಳಬಹುದು.

ಹೊಸ ತಲೆಮಾರು ಸಾಹಿತ್ಯದಿಂದ ಮಾರು ದೂರ ಉಳಿದಿದೆಯೇ?

ಇದಕ್ಕೆ ಎರಡು ಮುಖಗಳಿವೆ. ಈಗಿನ ಆಂಗ್ಲಮಾಧ್ಯಮ ಪಠ್ಯಕ್ರಮದಲ್ಲಿ ಪಠ್ಯೇತರ ಓದಿಗೆ ಬಿಡುವೇ ಇಲ್ಲ. ಪಾಲಕರೂ, ಶಿಕ್ಷಕರೂ ಸಾಹಿತ್ಯದ ಅಭಿರುಚಿ ಬೆಳೆಸುತ್ತಿಲ್ಲ. ಇನ್ನೊಂದೆಡೆ ವಿಜ್ಞಾನ ತಂತ್ರಜ್ಞಾನ ಆಧಾರಿತ ವೃತ್ತಿನಿರತರು ಕನ್ನಡದ ಕಡೆಗೆ ಒಲವು ತೋರಿಸಿ ಕನ್ನಡಕ್ಕೆ ಹೊಸ ಆಕೃತಿಯನ್ನು ನೀಡುತ್ತಿದ್ದಾರೆ.

ಯುವಜನತೆಯಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವುದು ಹೇಗೆ?

ಶಾಲೆ, ಕಾಲೇಜುಗಳನ್ನು ಕನ್ನಡದ ಸಾಂಸ್ಕೃತಿ, ಸಾಹಿತ್ಯದ ಕೇಂದ್ರಗಳಾಗಿ ರೂಪಿಸಬೇಕು. ವಿದ್ಯಾರ್ಥಿ ಅಧ್ಯಾಪಕರು ಒಂದಾಗಬೇಕು. ಪೋಷಕರು ಬೆಂಬಲಿಸಬೇಕು. ಅದಕ್ಕೆ ಪೂರಕ ಶೈಕ್ಷಣಿಕ ವಾತಾವರಣವೂ ಬೇಕು.

ಸಾಹಿತ್ಯ ಪರಿಷತ್‌ನ ಚಟುವಟಿಕೆ ಇನ್ನೂ ವಿಸ್ತೃತ ರೂಪ ಪಡೆಯಬಾರದೇ?

ಅವಶ್ಯ. ಜನರಲ್ಲಿ ಓದುವ ಹುಚ್ಚು ಹತ್ತಿಸಬೇಕು. ಸಭೆ, ಸಮ್ಮೇಳನಗಳಿಗೆ ಸೀಮಿತವಾಗಬಾರದು. ನಗರ, ಗ್ರಾಮಾಂತರದ ಮಕ್ಕಳು, ಪಾಲಕರಿಗೆ ಪುಸ್ತಕ ನೀಡಿ ಓದುವಂತೆ ಮಾಡಬೇಕು. ಕನ್ನಡ ಶಾಲೆಗಳನ್ನು ಮುಚ್ಚಲು ಬಿಡಬಾರದು. ಆಯ್ದ ಅನುದಾನಿತ, ಸರಕಾರಿ ಶಾಲೆಗಳನ್ನು ಮೂಲಭೂತ ಸೌಕರ್ಯ ನೀಡಿ ಮಾದರಿ ಶಾಲೆಗಳನ್ನಾಗಿಸಬೇಕು. ಕಸಾಪ ಇದಕ್ಕೆ ಒತ್ತಾಸೆಯಾಗಬೇಕು.

ಸಾಹಿತ್ಯ, ಸಂಸ್ಕೃತಿಗೆ ಸರಕಾರದ ಪ್ರೋತ್ಸಾಹ ಸಾಕೆನಿಸುತ್ತದೆಯೇ?

ಯೋಜನೆಗಳೆಲ್ಲ ಇವೆ. ಪರಿಷತ್ತು, ಪ್ರಾಧಿಕಾರಗಳಿವೆ. ಕೆಲಸವನ್ನೂ ಮಾಡುತ್ತಿವೆ. ಆದರೆ ಜನರನ್ನು ತಲುಪುತ್ತಿಲ್ಲ. ಈಗ ಭಿನ್ನವಾದ ಧಾರೆ ಹರಿಯುತ್ತಿದೆ. ನಾವೆಲ್ಲ ಪಾಠ ಮಾಡಿದ್ದು, ಸ್ವಾತಂತ್ರ್ಯದ ಚಳವಳಿ ಸಂದರ್ಭ ನಡೆದದ್ದರ ಇನ್ನೊಂದು ಮುಖವಿದೆ ಎಂದು ಗೊತ್ತಾಗುತ್ತಿದೆ. ಈಗಿನ ಸರಕಾರದ ನೀತಿಯಿಂದ ಸತ್ಯದ ಇನ್ನೊಂದು ಮುಖ ಬೆಳಕಿಗೆ ಬರುತ್ತಿದೆ.

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next