Advertisement

ಮೈಸೂರಿನಲ್ಲಿ ಸಂವಾದ ;ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪರಿಷತ್ ಅಭ್ಯರ್ಥಿಗಳು ತಬ್ಬಿಬ್ಬು

02:01 PM Dec 03, 2021 | Team Udayavani |

ಮೈಸೂರು : ಇದೇ ಡಿಸೆಂಬರ್ 10ರಂದು ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದ ಚುನಾವಣೆ ಹಿನ್ನೆಲೆ.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಶುಕ್ರವಾರ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳೊಂದಿಗೆ ಸಂವಾದ ಆಯೋಜನೆ ಮಾಡಲಾಯಿತು.

Advertisement

ಕಾಂಗ್ರೆಸ್ ಅಭ್ಯರ್ಥಿ ಡಾ. ಡಿ. ತಿಮ್ಮಯ್ಯ, ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ, ಜೆಡಿಎಸ್ ಅಭ್ಯರ್ಥಿ ಸಿ ಎನ್ ಮಂಜೇಗೌಡ, ಕನ್ನಡ ಚಳವಳಿ ವಾಟಾಳ್‌ ಪಕ್ಷದ ವಾಟಾಳ್ ನಾಗರಾಜ್ ಸಂವಾದದಲ್ಲಿ ಭಾಗಿಯಾಗಿ ಚರ್ಚೆ ನಡೆಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್ ಟಿ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚುತ್ತಿಲ್ಲವೆಂದು ಪ್ರಮಾಣ ಮಾಡುತ್ತೀರಾ ಎಂದು ಎದುರಾದ ಪ್ರಶ್ನೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ತಬ್ಬಿಬ್ಬಾದರು.

ನಾನು ತಳ ಹಂತದಿಂದ ಬಂದಿದ್ದೇನೆ
ಬಹಳ ಕಷ್ಟಪಟ್ಟು ಹಂತ ಹಂತವಾಗಿ ಮುಂದೆ ಬಂದಿದ್ದೇನೆ.ಸಮಾಜದ ವಿವಿಧ ವಲಯಗಳಲ್ಲಿ ಕೆಲಸ ಮಾಡುವ ಮೂಲಕ ಗುರುತಿಸಿಕೊಂಡಿದ್ದೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪರ ಕಾರ್ಯಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡುತ್ತಿದ್ದೇನೆ‌. ಪ್ರಮುಖವಾಗಿ ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮ ಪಂಚಾಯತಿ ಸದಸ್ಯರಿಗೆ ಕೇಂದ್ರ ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳನ್ನ ಮನವರಿಕೆ ಮಾಡಿಕೊಡುತ್ತಿದ್ದೇನೆ. ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯತಿ ಸದಸ್ಯರಿಗೆ ಹೆಚ್ಚಿನ ಸೌಲಭ್ಯಗಳನ್ನು ದೊರಕಿಸಿಕೊಡಲು ಶ್ರಮಿಸುತ್ತೇನೆ. ನಾನು ಆಯ್ಕೆಯಾದರೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಪರವಾಗಿ ಧ್ವನಿಯಾಗುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಹೇಳಿದರು.

Advertisement

ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಿದ್ದೇನೆ‌.ಸೋತರೂ ಕಳೆದ ಆರು ವರ್ಷಗಳಿಂದಲೂ ಗ್ರಾಮ ಪಂಚಾಯತಿ ಸದಸ್ಯರ ಜೊತೆ ಒಡನಾಟ ಇಟ್ಟುಕೊಂಡಿದ್ದೇನೆ. ಕಳೆದ ಬಾರಿಯ ಸೋಲಿನ ಕಹಿಯನ್ನು ಈ ಬಾರಿ ದೂರ ಮಾಡುವ ಮೂಲಕ ನನ್ನನ್ನು ಆಯ್ಕೆ ಮಾಡಿ. ಪ್ರತಿ ಗ್ರಾಮ ಪಂಚಾಯತಿ ಸದಸ್ತರು ಚಲಾಯಿಸುವ ಒಂದು ಮತ 600 ಮತಗಳಿಗೆ ಸಮನಾಗಿದೆ. ಅಷ್ಟು ಮೌಲ್ಯವುಳ್ಳ ಮತವನ್ನು ನನಗೆ ನೀಡುವ ಮೂಲಕ ಮತ ಬಿಕರಿಗಿಲ್ಲ ಎಂಬ ಸಂದೇಶವನ್ನು ನೀಡಲು ಗ್ರಾಮ ಪಂಚಾಯತಿ ಸದಸ್ಯರು ಮುಂದಾಗಲಿ. ಹಣದ ಖರ್ಚು ವೆಚ್ಚಗಳಿಲ್ಲದೇ ಚುನಾವಣೆ ಎದುರಿಸಲು ಸಾಧ್ಯವಿಲ್ಲ. ಮತ ಬಿಕರಿಗಿಲ್ಲವೆಂಬ ಸಂದೇಶವನ್ನು ಮತದಾರರು ನೀಡಲಿ ಎಂದು ಕೌಟಿಲ್ಯ ಹೇಳಿದರು.

ನನ್ನ ಗೆಲುವು ಖಚಿತ

ಕಾಂಗ್ರೆಸ್ ಅಭ್ಯರ್ಥಿ ಡಾ ಡಿ ತಿಮ್ಮಯ್ಯ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಆಗಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಪ್ರಸ್ತಾಪ. ಸಿದ್ದರಾಮಯ್ಯ ಸರ್ಕಾರದ ಅವಧಿಯ ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ಈ ಬಾರಿಯ ಚುನಾವಣೆಯಲ್ಲಿ ನನ್ನ ಗೆಲುವು ಖಚಿತನನಗಿದು ಮೊದಲನೇ ಚುನಾವಣೆ, ಕಾಂಗ್ರೆಸ್ ಪಕ್ಷದ ಸಾಧನೆಯನ್ನು ಗುರ್ತಿಸಿ ಮತ ನೀಡಿ ಎಂದು ಮನವಿ ಮಾಡುತ್ತೇನೆ ಎಂದರು.

ಹಲವಾರು ಏಳು ಬೀಳುಗಳನ್ನು ಕಂಡಿದ್ದೇ‌ನೆ
ಸಂವಾದದಲ್ಲಿ ಮಾತನಾಡಿದ ಕನ್ನಡ ಚಳುವಳಿಯ ವಾಟಾಳ್ ನಾಗರಾಜ್, ನಾನು 1967ರಲ್ಲಿ ಮೊದಲ ಬಾರಿ ವಿಧಾನಸಭೆಗೆ ಆಯ್ಕೆಯಾದೆ. ಆಗ ನನ್ನ ವಯಸ್ಸು ಕೇವಲ 25 ವರ್ಷಗಳು. ನನ್ನ ಇದುವರೆಗಿನ ರಾಜಕೀಯ ಬದುಕಿನಲ್ಲಿ ಹಲವಾರು ಏಳು ಬೀಳುಗಳನ್ನು ಕಂಡಿದ್ದೇ‌ನೆ. ನನ್ನಂತಹವನು ಶಾಸನ ಸಭೆಯಲ್ಲಿ ಇರಬೇಕೋ ಬೇಡವೋ ಎಂಬುದನ್ನು ನಿರ್ಧರಿಸುವ ಚುನಾವಣೆ ಇದು. ಗ್ರಾಮ ಪಂಚಾಯತಿ ಸದಸ್ಯರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ನೀಡುತ್ತಿರುವ ಗೌರವ ಧನ ಏತಕ್ಕೂ ಸಾಕಾಗುತ್ತಿಲ್ಲ. ಆದರೆ ಶಾಸಕರಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸಂಸದರು ಆಕಾಶಕ್ಕೂ ಭೂಮಿಗೂ ಮಧ್ಯದಲ್ಲಿದ್ದಾರೆ. ಚುನಾವಣೆಯಲ್ಲಿ ಒಂದೇ ಓಟ್ ಕೊಡಿ ಎನ್ನುತ್ತಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳು ಕೇಳುತ್ತಿರುವ ಒಂದು ಓಟಿ‌ನ ಜೊತೆಗೆ ಎರಡನೇ ಓಟನ್ನು ವಾಟಾಳ್ ನಾಗರಾಜ್ ಗೆ ಕೊಡಿಸಿ ಎಂದರು.

ವಾಟಾಳ್ ನಾಗರಾಜ್ ವಯಸ್ಸಿನ ರಹಸ್ಯವನ್ನು ಬಹಿರಂಗ ಪಡಿಸಿದ್ದು, ಆ ಪ್ರಕಾರ ಅವರ ವಯಸ್ಸೀಗ 79.

ನಾನು ಸೈನಿಕ

ಗ್ರಾಮ ಪಂಚಾಯತಿ ಮಟ್ಟದಿಂದ ಕೆಲಸ ಮಾಡುತ್ತಾ ರಾಜಕೀಯಕ್ಕೆ ಬಂದಿದ್ದೇನೆ. ಗ್ರಾಮ ಪಂಚಾಯತಿ ಅಧ್ಯಕ್ಷನಾಗಿ, ಎಪಿಎಂಸಿ ಅಧ್ಯಕ್ಚನಾಗಿ ಸೇವೆ ಸಲ್ಲಿಸಿರುವ ಅನುಭವ ನನಗಿದೆ. ನನಗೆ ರಾಜಕೀಯ ಅನುಭವದ ಕೊರತೆಯಿಲ್ಲ. ಹಾಗಾಗಿ ಗ್ರಾಮ ಪಂಚಾಯತಿಗೆ ಹೆಚ್ಚಿನ ಅನುದಾನ ಬರಲು ಶ್ರಮಿಸುತ್ತೇನೆ‌. ನಾನು ಸೈನಿಕನಾಗಿ ಗಡಿಯಲ್ಲಿ ದೇಶವನ್ನು ಕಾಯ್ದಿದ್ದೇ‌ನೆ. ಅನ್ನ ನೀರು ಇಲ್ಲದೇ ದಿನಗಳನ್ನು ದೂಡಿದ್ದೇನೆ‌.
ನಾನು ಆಯ್ಕೆಯಾದರೆ ದೇಶದ ಗಡಿ ಕಾಯ್ದಿರುವಂತೆಯೇ, ಗ್ರಾಮಪಂಚಾಯತಿಗಳ ಹಿತ ಕಾಯುತ್ತೇನೆ ಎಂದು ಜೆಡಿಎಸ್ ಅಭ್ಯರ್ಥಿ ಸಿ ಎನ್ ಮಂಜೇಗೌಡ ಹೇಳಿದರು.

ನನ್ನ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವರು ಮಾಡಿರುವ ಆರೋಪಗಳನ್ನು ಸಾಬೀತು ಮಾಡಿದರೆ ಚುನಾವಣೆ ಕಣದಿಂದ ನಿವೃತ್ತನಾಗುತ್ತೇನೆಂದು ಮಂಜೇಗೌಡ ಘೋಷಿಸಿದರು.

ಜೆಡಿಎಸ್ ಅಭ್ಯರ್ಥಿ ಕುರಿತು ಸಚಿವ ಎಸ್ ಟಿ ಸೋಮಶೇಖರ್ ಮಾಡಿರುವ ವೈಯುಕ್ತಿಕ ಆರೋಪಗಳಿಂದ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಅಂತರ ಕಾಯ್ದುಕೊಂಡರು.ಈ ಬಗ್ಗೆ ಸಚಿವರೇ ಉತ್ತರ ಕೊಟ್ಟಿದ್ದಾರೆ,ಈ ಬಗ್ಗೆ ಅವರನ್ನೇ ಕೇಳಿ ಎಂದರು.

ಪ್ರಮಾಣ ಮಾಡುತ್ತೇನೆ

ನಾನು ಯಾವ ದೇವರ ಮುಂದೆ ಬೇಕಾದರೂ ಮತದಾರರಿಗೆ ಹಣ ಹಂಚೋದಿಲ್ಲವೆಂದು ಪ್ರಮಾಣ ಮಾಡುತ್ತೇನೆಂದು ಘೋಷಿಸಿದ ವಾಟಾಳ್ ನಾಗರಾಜ್.

Advertisement

Udayavani is now on Telegram. Click here to join our channel and stay updated with the latest news.

Next