Advertisement

ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಎಂದಿಗೂ  ನಾನು ಋಣಿ : ತಪಸಿ ಪನ್ನು

12:43 PM Nov 25, 2019 | Hari Prasad |

ಪಣಜಿ: ನಾನು ಯಾವಾಗಲೂ ಬದುಕನ್ನು ಆಶಾವಾದದಿಂದ ಸ್ವೀಕರಿಸಿದವಳು. ಅರ್ಧ ಲೋಟ ತುಂಬಿದೆ ಎಂಬ ದೃಷ್ಟಿಕೋನದಿಂದಲೇ ಬೆಳೆದವಳು, ಎಂದಿಗೂ ನನಗೆ ಅರ್ಧ ಲೋಟ ಖಾಲಿ ಇದೆ ಎಂದೆನಿಸಿಯೇ ಇಲ್ಲ. ಹಾಗೆಂದು ಕೆಲವು ಅಹಿತಕರ ಅನುಭವಗಳಾಗಿಲ್ಲ ಎಂದು ಹೇಳುತ್ತಿಲ್ಲ. ಅವೆಲ್ಲವನ್ನೂ ಮೀರಿ ಬದುಕನ್ನು ಸದಾ ಧನಾತ್ಮಕ ದೃಷ್ಟಿಯಿಂದಲೇ ನೋಡುತ್ತಿದ್ದೇನೆ ಎಂದವರು ಬಾಲಿವುಡ್‌ ನಟಿ ತಪಸಿ ಪನ್ನು. ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ [ಇಫಿ] ದಲ್ಲಿ ‘ಮಹಿಳೆಯರು ಮುಂಚೂಣಿಯಲ್ಲಿ‘ಎಂಬ ಸಂವಾದದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

Advertisement

ನಾನು ಯಾವಾಗಲೂ ಧನಾತ್ಮಕ ನೆಲೆಯಲ್ಲೇ ಇರಲು ಇಷ್ಟಪಡುತ್ತೇನೆ. ಈ ದೃಷ್ಟಿಕೋನವೇ ನಮ್ಮನ್ನು ಮತ್ತು ನಮ್ಮ ಬದುಕನ್ನು ಬೆಳೆಸುತ್ತದೆ. ಆ ನಂಬಿಕೆ ನನ್ನದು. ನಾನು ಮಧ್ಯಮ ವರ್ಗದಿಂದ ಬಂದವಳು. ಹಾಗಾಗಿ ಅದು ನನಗೆ ಬದುಕನ್ನು ವೈಭವೀಕೃತ ಕನ್ನಡಕದಿಂದ ನೋಡಲು ಕಲಿಸಿಲ್ಲ, ಬದಲಾಗಿ ನನ್ನ ಕಣ್ಣುಗಳಿಂದ ಬದುಕನ್ನು ನೋಡುವ ಸಾಧ್ಯತೆಯನ್ನು ಉಳಿಸಿದೆ.


ಎಂದೂ ನನಗೆ ಅತಿಯಾದ ಪ್ರೀತಿ/ಮುದ್ದು ಆಗಲೀ, ಸಂರಕ್ಷಣೆಯಾಗಲೀ ಸಿಕ್ಕಿಲ್ಲ. ಅದರ ಕಾರಣದಿಂದ ನನ್ನ ಪಾತ್ರಗಳನ್ನು ಹೆಚ್ಚು ಮನಕ್ಕೆ ತಟ್ಟುವ ರೀತಿಯಲ್ಲಿ ಅಭಿನಯಿಸಲು ಸಹಾಯವಾಗಿದೆ. ನನ್ನ ಪಾತ್ರಗಳೊಂದಿಗೆ ಹಲವರು ತಮ್ಮ ಬದುಕಿನ ಕೆಲವು ಕ್ಷಣಗಳಿಗೆ ಹೋಲಿಸುವುದಕ್ಕೆ ಸಾಧ್ಯವಾಗಿರುವುದೆಂದರೆ, ನಾನೂ ಸಹ ಆ ಕ್ಷಣಗಳನ್ನು ನೈಜ ಬದುಕಿನೊಂದಿಗೆ ಕಳೆದಿದ್ದೇನೆ.

ಎಲ್ಲ ಕಥೆಗಳಲ್ಲೂ ನಾವೇ ಅದರ ನಾಯಕನಾಗಬೇಕೆಂದು ಬಯಸುತ್ತೇವೆ. ಸಿನಿಮಾಗಳಲ್ಲಿ ಕಥಾ ನಾಯಕ ಆ ಪಾತ್ರವನ್ನು ನಿರ್ವಹಿಸುವಾಗ, ಅರೆ, ಅವನೇ ಅದನ್ನು ನಿರ್ವಹಿಸುವುದಾದರೆ ನಮ್ಮಿಂದ ಯಾಕೆ ಸಾಧ್ಯವಿಲ್ಲ ಎಂದೆನಿಸಿ ಕಾರ್ಯೋನ್ಮುಖವಾಗುತ್ತೇವೆ.

ಆ ಮೂಲಕ ನಮ್ಮನ್ನು ನಾವು ಕಾಣಲು ಆರಂಭಿಸುತ್ತೇವೆ, ನಮ್ಮೊಳಗಿನ ಸಾಧ್ಯತೆಗಳನ್ನು ಅರಿಯಲು ಪ್ರಯತ್ನಿಸುತ್ತೇವೆ. ಅದು ಮುಖ್ಯ. ಆದ ಕಾರಣ, ನೈಜ ಬದುಕಿನತ್ತ ಮುಖ ಮಾಡಿರುವ ಕಥಾನಾಯಕನ ಸಿನಿಮಾಗಳು ಯಶಸ್ವಿಯಾಗುತ್ತವೆ, ಪ್ರೇಕ್ಷಕರಿಗೆ ಹಿಡಿಸುತ್ತವೆ. ಮಹಿಳೆಯ ಕುರಿತಾದ ಚಿತ್ರಗಳ ಬಗ್ಗೆ ಹೇಳುವುದಾದರೆ, ಅವಳೇ ಅವಳ ಪಾತ್ರಕ್ಕೆ ಜೀವ ತುಂಬಬಲ್ಲಳು.

Advertisement

ದಕ್ಷಿಣ ಚಿತ್ರರಂಗಕ್ಕೆ ಧನ್ಯವಾದ
ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ನಾನು ಸದಾ ಋಣಿ. ಎಂದಿಗೂ ನಾನು ಅದನ್ನು ಬಾಲಿವುಡ್‌ಗೆ ಏರಲು ಸಹಾಯವಾದ ಮೆಟ್ಟಿಲು ಎಂಬ ದೃಷ್ಟಿಯಲ್ಲಿ ನೋಡುವುದಿಲ್ಲ. ಯಾಕೆಂದರೆ ಅದೇ ನನಗೆ ಚಿತ್ರರಂಗದ ಮೂಲ ಸಂಗತಿಗಳನ್ನು ಕಲಿಸಿದೆ. ಕೆಮರಾವನ್ನು ಎದುರಿಸುವುದರಿಂದ ಹಿಡಿದು ನಟನೆಯನ್ನೂ ಅಲ್ಲಿಯೇ ಕಲಿತಿರುವುದು. ಭಾಷೆಯನ್ನೂ ಸಹ. ಈ ಎಲ್ಲ ಕಾರಣಗಳಿಂದ ನಾನು ಅದನ್ನು ಬಿಟ್ಟು ಬಿಡಲು ತಯಾರಿಲ್ಲ, ಅಲ್ಲಿಯೂ ಕೆಲಸ ಮಾಡುತ್ತೇನೆ.

ತಪಸಿ ಪನ್ನು ತಮಿಳಿನ ಆಡುಕ್ಕಳಂ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದರು. ಅದರಲ್ಲಿ ಧನುಷ್‌ ನಾಯಕ ನಟರಾಗಿ ಅಭಿನಯಿಸಿದ್ದರು. ಪ್ರಸ್ತುತ  ಅವರು ಇನ್ನೊಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next