Advertisement

ಸಂಶೋಧನೆ ಜನಮುಖಿಯಾಗಿರಲಿ: ಯೋಗೇಶ್ವರ ಸಲಹೆ

05:31 PM Jul 30, 2018 | Team Udayavani |

ಕಾರವಾರ: ಸಂಶೋಧನೆಗಳು ಜನಮುಖಿಯಾಗಿರಬೇಕು. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವೈಜ್ಞಾನಿಕವಾಗಿ ನಿರೂಪಿಸಬೇಕೆಂದು ಕಾರವಾರ ನಗರಸಭೆ ಪೌರಾಯುಕ್ತ ಎಸ್‌. ಯೋಗೇಶ್ವರ್‌ ಅಭಿಪ್ರಾಯಪಟ್ಟರು. ನಗರದ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಸರಕಾರಿ ಮಹಿಳಾ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ರವಿವಾರ ನಡೆದ ಸಂವಾದ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ, ಬಳಿಕ ಸಂಶೋಧನೆ ಹಾಗೂ ಹೊಸ ದಿಕ್ಕು ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು. 

Advertisement

ಸಂಶೋಧನೆಗೆ ಇಂತಹದೇ ನಿರ್ದಿಷ್ಟ ವಿಷಯ ಬೇಕಾಗಿಲ್ಲ. ಜನಸಾಮಾನ್ಯರ ಒಟ್ಟಾರೆ ಜೀವನ ಕ್ರಮ, ಕಾಡಿನಲ್ಲಿ ಅಥವಾ ಗಿರಿಕಂದರಗಳಲ್ಲಿ ವಾಸಿಸುವ ಕೆಲ ಜನಾಂಗದವರ ಜೀವನ ಪದ್ಧತಿ, ಮಾರುಕಟ್ಟೆ ವ್ಯವಹಾರ, ಸಾಮಾಜಿಕ ಆರ್ಥಿಕ ಸ್ಥಿತಿಗತಿ, ವ್ಯಕ್ತಿಗತ ಸಾಧನೆ, ಸಾಹಿತ್ಯಿಕ ಹೀಗೆ ಹಲವಾರು ಕ್ಷೇತ್ರಗಳ ವಿಷಯಗಳನ್ನು ಹಿಡಿದು ಸಂಶೋಧನೆ ನಡೆಸಬಹುದು. ಸಂಶೋಧನೆಗೆ ಮುಖ್ಯವಾಗಿ ಪ್ರಶ್ನೋತ್ತರ, ಸಂದರ್ಶನ ಹಾಗೂ ಪರೋಕ್ಷ ಅಥವಾ ಅಪರೋಕ್ಷವಾಗಿ ಮಾಹಿತಿ ಕಲೆ ಹಾಕುವುದು ಮುಖ್ಯವಾಗುತ್ತದೆ. ಕಲೆಹಾಕಿದ ದತ್ತಾಂಶಗಳನ್ನು ವಿಶ್ಲೇಷಣೆ ಮೂಲಕ ಒರೆಗೆ ಹಚ್ಚಬೇಕಾಗುತ್ತದೆ. ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಸರಿಯಾದ ವಿಶ್ಲೇಷಣೆ ಮಾಡಿದಾಗ ನಿಜವಾದ ಫಲಿತಾಂಶ ಪಡೆಯಲು ಸಾಧ್ಯ. ಒಬ್ಬ ಸಂಶೋಧಕನ ಸಾಮಾಜಿಕ ಜವಾಬ್ದಾರಿ ಹೆಚ್ಚಾಗಿದ್ದು, ಈ ದಿಸೆಯಲ್ಲಿ ಜಾಗರೂಕರಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದರು.

ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ ಮಾತನಾಡಿ, ಸಂಶೋಧನೆ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದರು. ತಾಲೂಕು ಕಸಾಪ ಅಧ್ಯಕ್ಷ ನಾಗರಾಜ ಹರಪನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ಮಾಸ್ಕೇರಿ ಸಾಹಿತ್ಯದ ಕುರಿತು ಸಂಶೋಧನೆ ನಡೆಸಿ ಡಾಕ್ಟರೇಟ್‌ ಪದವಿ ಪಡೆದ ಅಶ್ವಿ‌ನಿ ನಾಯಕ ಅವರನ್ನು ಸನ್ಮಾನಿಸಲಾಯಿತು. ಸರಕಾರಿ ಮಹಿಳಾ ಕಾಲೇಜಿನ ಪ್ರಾಚಾರ್ಯ ವಿನಾಯಕ ಗಂಗೊಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಿರೀಶ್‌ ನಾಯ್ಕ ಸ್ವಾಗತಿಸಿದರು. ದೀಪಕಕುಮಾರ್‌ ಶೈಣೈ ವಂದಿಸಿದರು. ಸದಸ್ಯೆ ಫೈರೋಜಾ ಬೇಗಂ ನಿರೂಪಿಸಿದರು. ಹಿರಿಯ ಸದಸ್ಯರಾದ ಖಲೀಲುಲ್ಲಾ, ಕೆ.ಟಿ. ತಾಂಡೇಲ, ಮಚ್ಚೇಂದ್ರ ಮಹಾಲೆ, ನಜೀರ್‌ ಶೇಖ್‌, ಕಡತೋಕ ಮಂಜುನಾಥ ನಾಯ್ಕ, ಉದಯಬರ್ಗಿ, ಖೈರುನ್ನೀಸಾ, ಅನುಕಳಸ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next