ಹಾವೇರಿ: ಕೃಷಿ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ, ವಿದ್ಯುತ್ ಇಲಾಖೆ ಖಾಸಗೀಕರಣ ಸೇರಿ ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ರೈತ ವಿರೋಧಿ ಕಾಯ್ದೆಗಳ ಕುರಿತು ರೈತರಿಗೆ ಜಾಗೃತಿ ಮೂಡಿಸಲು ಮಾ.21ರಂದು ನಗರದಲ್ಲಿ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸಮಾವೇಶದ ಕುರಿತು ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದ ಅವರು, ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಐಕ್ಯ ಹೋರಾಟ, ಸಂಯುಕ್ತ ಹೋರಾಟಗಳ ಸಾಮೂಹಿಕ ನಾಯಕತ್ವದಲ್ಲಿ ಇಲ್ಲಿನ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಮಾ.21ರ ಬೆಳಗ್ಗೆ 11ಕ್ಕೆ ಸಮಾವೇಶ ನಡೆಯಲಿದ್ದು, ಜಿಲ್ಲೆಯಲ್ಲೂ ಎಲ್ಲ ರೈತ ಸಂಘಟನೆಗಳು ಒಂದಾಗಿ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದರು.
ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಖಂಡಿಸಿ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಉತ್ತರ ಭಾರತದ ರೈತರು ಅಷ್ಟೇ ಬೆಂಬಲ ಕೊಡುತ್ತಿದ್ದು, ದಕ್ಷಿಣ ಭಾಗದ ರೈತರ ಬೆಂಬಲ ಇದೆ ಎಂಬ ಸುಳ್ಳು ಮಾಹಿತಿ ಹರಿಬಿಡಲಾಗುತ್ತಿದೆ. ಹೀಗಾಗಿ ದಕ್ಷಿಣ ಭಾರತದಲ್ಲೂ ರೈತರ ಹೋರಾಟ, ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಮಾ.21ರಂದು 10 ಸಾವಿರಕ್ಕೂ ಹೆಚ್ಚು ರೈತರು ಸೇರಿ ಸರ್ಕಾರದ ವಿರುದ್ಧ ಹೋರಾಟ ನಡೆಸಲಿದ್ದೇವೆ. ಈ ಸಮಾವೇಶದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ಅಧ್ಯಕ್ಷ ರಾಕೇಶ ಟಿಕಾಯತ್, ಕಾರ್ಯದರ್ಶಿ ಯದುವೀರ್ ಸಿಂಗ್, ಡಾ| ದರ್ಶನ್‌ಪಾಲ್ ಹಾಗೂ ರಾಜ್ಯದ ಎಲ್ಲ ರೈತ ಸಂಘಟನೆಯ ಮುಖಂಡರು ಪಾಲ್ಗೊಳ್ಳುವರು ಎಂದರು.
ಕೃಷಿ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿಗಳು ರೈತರಿಗೆ ಮಾರಕವಾಗಿದ್ದು, ಅವುಗಳನ್ನು ಹಿಂಪಡೆಯುವಂತೆ ರೈತರು ಹೋರಾಟ ನಡೆಸುತ್ತಿದ್ದರೂ ಸರ್ಕಾರ ಹಠಮಾರಿತನ ಪ್ರದರ್ಶಿಸುತ್ತಿದೆ. ಸರ್ಕಾರಗಳ ದುರಾಡಳಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೆಕ್ಕೆಜೋಳದ ಬೆಲೆ ಕುಸಿದಿದ್ದರೂ ಖರೀದಿ ಕೇಂದ್ರ ತೆರೆದಿಲ್ಲ, ಪರಿಣಾಮ ಜಿಲ್ಲೆಯ ರೈತರಿಗಷ್ಟೇ 600ಕೋಟಿ ಗೂ., ಹೆಚ್ಚು ಹಾನಿಯಾಗಿದೆ. ರಸಗೊಬ್ಬರದ ಬೆಲೆಯೂ ಗಗನಕ್ಕೇರಿದೆ. ಪ್ರಧಾನಿ ಮೋದಿ ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂಬ ಸುಳ್ಳು ಹೇಳಿಕೆ ನೀಡುತ್ತಾ ತಿರುಗುತ್ತಿದ್ದಾರೆ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್, ಸಿಲೆಂಡರ್ ಹಾಗೂ ರಸಗೊಬ್ಬರ ಬೆಲೆ ನಿಯಂತ್ರಿಸಲು ವಿಫಲವಾಗಿದೆ. ವಿದ್ಯುತ್, ವಿಮಾ ಕಂಪನಿ, ಬ್ಯಾಂಕ್ ಖಾಸಗೀಕರಣ ಮಾಡುತ್ತಾ ಬಡ ಮಕ್ಕಳಿಗೆ ಉದ್ಯೋಗ ಒದಗಿಸದೇ ದೇಶದ ಜನತೆಗೆ ದ್ರೋಹ ಮಾಡಿದೆ. ಕೃಷಿ ಕಾರ್ಮಿಕರಿಗೆ ಯಾವುದೇ ಭದ್ರತೆ ಇಲ್ಲದಂತಾಗಿದ್ದು, ದೇಶದ ಪ್ರಗತಿ ಕುಂಠಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಜಿಲ್ಲೆಯ ಎಲ್ಲ ರೈತ ಸಂಘಟನೆಯವರು ಸೇರಿ ಸಮಾವೇಶ ಹಮ್ಮಿಕೊಂಡಿದ್ದೇವೆ. ಸಮಾವೇಶಕ್ಕೆ ಪರವಾನಗಿ ಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ. ಮುನ್ಸಿಪಲ್ ಹೈಸ್ಕೂಲ್ ಜಾಗೆ ಕೊಟ್ಟಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚು ಜನ ಸೇರಿ ಸಮಾವೇಶ ಮಾಡುವಂತಿಲ್ಲ ಎಂದು ಸರ್ಕಾರ ಹೇಳಿದೆ. ಪರವಾನಗಿ ಕೊಡದಿದ್ದರೂ ಮಾಸ್ಕ್ ಧರಿಸಿ ಸಮಾವೇಶ ಮಾಡೇ ಮಾಡುತ್ತೇವೆ. ದೆಹಲಿ ಮಾದರಿಯಲ್ಲಿ ಇಲ್ಲೂ ನಿರಂತರ ಹೋರಾಟ ಮಾಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದರು.
ಜಿಲ್ಲಾ ಮುಖಂಡರಾದ ಶಿವಬಸಪ್ಪ ಭೋವಿ, ಸಿದ್ದನಗೌಡ ಪಾಟೀಲ, ಗಂಗಣ್ಣ ಎಲಿ, ಮಾಲತೇಶ ಪೂಜಾರ, ಶಂಕ್ರಣ್ಣ ಶಿರಗಂಬಿ, ಹನುಮಂತಪ್ಪ ಹುಚ್ಚಣ್ಣನವರ, ದೀಪಕ್ ಗಂಟೇರ, ರಾಜು ಮುತ್ತಗಿ ಇತರರಿದ್ದರು.