ಬೆಂಗಳೂರು: ರಾಷ್ಟ್ರೀಯ ವೈದ್ಯಕೀಯ ಪರಿಷತ್(ಎನ್‌ಎಂಸಿ) ಮಸೂದೆ ವಿರೋಧಿಸಿ ಮೆಡಿಕಲ್ ಸರ್ವಿಸ್ ಸೆಂಟರ್, ಆಲ್ ಇಂಡಿಯ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್(ಎಐಡಿಎಸ್‌ಒ), ಅಖೀಲ ಭಾರತ ಶಿಕ್ಷಣ ಉಳಿಸಿ ಸಮಿತಿ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್(ಐಎಂಎ) ವತಿಯಿಂದ ಭಾನುವಾರ ನಗರದ ಐಎಂಎ ಸಭಾಂಗಣದಲ್ಲಿ ಪ್ರತಿರೋಧ ಸಮಾವೇಶ ನಡೆಯಿತು.
ಕಿಮ್ಸ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಎಸ್. ಶ್ರೀನಿವಾಸ್ ಮಾತನಾಡಿ, ಎನ್‌ಎಂಸಿ ಚುನಾಯಿತ ಹಾಗೂ ಸ್ವಾಯತ್ತ ಸಂಸ್ಥೆಯಾಗಿದ್ದು, 109 ಸದಸ್ಯರನ್ನು ಒಳಗೊಂಡಿದೆ. ಈ ಮಸೂದೆ ಎಂಸಿಐ ಅಸ್ಥಿತ್ವವನ್ನೇ ಇಲ್ಲದಂತೆ ಮಾಡುತ್ತದೆ. ರಾಜ್ಯಗಳ ಪ್ರಾತಿನಿಧ್ಯಕ್ಕೂ ಧಕ್ಕೆ ತರಲಿದೆ.ವಿಶ್ವವಿದ್ಯಾಲಯ ಹಾಗೂ ರಾಜ್ಯ ಸರ್ಕಾರಗಳ ಅಭಿಪ್ರಾಯ ಪಡೆಯಲು ಅವಕಾಶ ನೀಡದಿರುವುದು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಲಿದೆ ಎಂದರು.
ಆಖೀಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಕಾರ್ಯದರ್ಶಿ ಕೆ. ಉಮಾ ಮಾತನಾಡಿ, ಈ ಮಸೂದೆಯಡಿ ಶುಲ್ಕ ನಿಗದಿ ಮಾಡುವ ಅನಿಯಂತ್ರಿತ ಅಧಿಕಾರವನ್ನು ಖಾಸಗಿ ಸಂಸ್ಥೆಗಳಿಗೆ ನೀಡಲಾಗಿದೆ. ಈ ಸೀಟುಗಳ ಮೇಲೆ ಸರ್ಕಾರಕ್ಕೆ ನಿಯಂತ್ರಣ ಇರುವುದಿಲ್ಲ. ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಸೀಟುಗಳ ಬಗ್ಗೆ ಮಸೂದೆಯಲ್ಲಿ ಉಲ್ಲೇಖವಿಲ್ಲ.
ಇದರಿಂದ ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಇನ್ನಷ್ಟು ತುಟ್ಟಿಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ಮೆಡಿಕಲ್ ಸರ್ವಿಸ್ ಸೆಂಟರ್ ಅಧ್ಯಕ್ಷೆ ಡಾ. ಕೆ.ಸುಧಾ ಮಾತನಾಡಿ, ಕೇಂದ್ರ ಸರ್ಕಾರ ಈ ಮಸೂದೆಯನ್ನು ಕೈಬಿಡಬೇಕು.
ಐಎಂಸಿ ಅಧಿಕಾರವನ್ನು ಕಿತ್ತುಕೊಂಡು, ವೈದ್ಯಕೀಯ ಕಾಲೇಜಿನ ಗುಣಮಟ್ಟ ಹಾಗೂ ಅರ್ಹತೆಯನ್ನು ಮಂಡಳಿಯೇ ನಿರ್ಧರಿಸುವಂತೆ ಮಾಡಲಿದೆ. ಎಲ್ಲಾ ವೈದ್ಯ ಪದ್ಧತಿಗಳ ಶಿಕ್ಷಣ ತಜ್ಞರು, ವೈದ್ಯರು, ವಿಜ್ಞಾನಿಗಳು, ಸಂಶೋಧಕರು ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುವ ಅಗತ್ಯವಿದೆ ಎಂದರು. ವೈದ್ಯ ಡಾ. ವೆಂಕಟಾಚಲಪತಿ, ಎಐಡಿಎಸ್‌ಒ ರಾಜ್ಯಾಧ್ಯಕ್ಷ ಡಾ. ಪ್ರಮೋದ್ ಮೊದಲಾದವರು ಉಪಸ್ಥಿತರಿದ್ದರು.
ಸಮಾವೇಶದ ನಿರ್ಣಯ: ಕೇಂದ್ರ ಸರ್ಕಾರವು ಪ್ರಸ್ತಾಪಿಸಿರುವ ಎನ್‌ಎಂಸಿ ಮಸೂದೆಯನ್ನು ಕೈಬಿಟ್ಟು ಎಂಸಿಐಯನ್ನು ಮುಂದುವರಿಸಬೇಕು. ಅದರ ಸ್ವಾಯತ್ತತೆಯನ್ನು ಕಾಪಾಡಬೇಕು ಹಾಗೂ ಇದನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಕ್ರಮಗಳನ್ನು ಕೈಗೊಳ್ಳಬೇಕು. ವೈದ್ಯಕೀಯ ಶಿಕ್ಷಣದ ಮಾರಾಟ ನಿಲ್ಲಿಸಲು ವಿದ್ಯಾರ್ಥಿ ಸ್ನೇಹಿ ಕಾಯ್ದೆ ಜಾರಿಗೊಳಿಸಬೇಕು. ರಾಜ್ಯ ಸರ್ಕಾರಗಳ ಹಕ್ಕು ಮೊಟಕುಗೊಳಿಸುವ ಈ ಮಸೂದೆ ಜಾರಿಗೊಳಿಸದಂತೆ ಕೇಂದ್ರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡುವ ನಿರ್ಣಯ ಸಮಾವೇಶದಲ್ಲಿ ತೆಗೆದುಕೊಳ್ಳಲಾಗಿದೆ.