Advertisement

ವ್ಯಾಲೆಟ್‌ನಲ್ಲಿ ಅನುಕೂಲವೂ, ಹುಳುಕುವೂ ಉಂಟು…

01:09 PM Nov 27, 2017 | |

ಕಾಗದದ ನಗದು ಅಪಾಯಕಾರಿ ಎಂಬುದು ವೈಯುಕ್ತಿಕವಾಗಿಯಲ್ಲದೆ ದೇಶದ ಆರ್ಥಿಕ ಆರೋಗ್ಯಕ್ಕೂ ಎಂಬುದು ರುಜುವಾತಾದ ಹಿನ್ನೆಲೆಯಲ್ಲಿ ಇ ಬ್ಯಾಕಿಂಗ್‌, ಡೆಬಿಟ್‌ ಕ್ರೆಡಿಟ್‌ ಕಾರ್ಡ್‌ಗಳು ಅವತರಿಸಿದ್ದಾಯಿತು. ಕೇಂದ್ರ ಸರ್ಕಾರದ ನೋಟು ಅಮಾನ್ಯಿಕರಣದ ಪ್ರಕ್ರಿಯೆ ಈ ನಗದುರಹಿತ ಹಣಕಾಸು ವ್ಯವಹಾರಕ್ಕೆ ಹೆಚ್ಚಿನ ಉತ್ತೇಜನ ನೀಡಿದ್ದು ಕೂಡ ಹೌದು. ಇ ಬ್ಯಾಂಕಿಂಗ್‌, ಎಟಿಎಂ ಕಾರ್ಡ್‌ಗಳ ನಂತರದ ವ್ಯಾಲೆಟ್‌ಗಳು ಹೆಚ್ಚು ಜನಪ್ರಿಯವಾಗುತ್ತಿವೆ. 

Advertisement

2006 wallet365.com ಎಂಬ ಟೈಮ್ಸ್‌ ಗ್ರೂಪ್‌ನ ಇ ವ್ಯಾಲೆಟ್‌ ಆರಂಭವಾಗಿತ್ತು. ಇದಕ್ಕೆ ಯೆಸ್‌ ಬ್ಯಾಂಕ್‌ನ ಸಹಯೋಗವೂ ಇತ್ತು. ನವೆಂಬರ್‌ 2016ರವರೆಗೆ ಅಂದರೆ ಸುಮಾರು 10 ವರ್ಷಗಳ ಕಾಲ ಇ ವ್ಯಾಲೆಟ್‌ ಒಂದು ಮಟ್ಟಿನ ಯಶಸ್ಸು ಮಾತ್ರ ಕಂಡಿತ್ತು. 2015-16ರಲ್ಲಿ 154 ಕೋಟಿ ರೂ. ವ್ಯವಹಾರ ನಡೆದಿತ್ತು. ಈಗ ಮಾರುಕಟ್ಟೆ ವೃದ್ಧಿಸುತ್ತಿದ್ದು 2021-22ಕ್ಕೆ ಇ ವ್ಯಾಲೆಟ್‌ ಉದ್ಯಮ 30 ಸಾವಿರ ಕೋಟಿ ರೂ.ಗಳಷ್ಟು ದೊಡ್ಡದಾಗಲಿದೆ ಎಂದು ಅಂದಾಜಿಸಲಾಗಿದೆ.

ಬಡ್ಡಿ ಕೊಡಂಗಿಲ್ಲ!
ಉದ್ಯಮದ ಕತೆ ಬದಿಗಿರಲಿ, ಗ್ರಾಹಕರಾಗಿ ಈ ವ್ಯವಸ್ಥೆಯ ಶುಭಅಶುಭಗಳನ್ನು ಅರಿತಿರಬೇಕಾಗುತ್ತದೆ. ವ್ಯಾಲೆಟ್‌ಗಳಲ್ಲಿ ಮೂರು ವರ್ಗೀಕರಣವನ್ನು ಮಾಡಲಾಗಿದೆ. ಮುಚ್ಚಿದ ವ್ಯಾಲೆಟ್‌ ಅರ್ಥಾತ್‌ ಆಂಗ್ಲ ಭಾಷೆಯಲ್ಲಿ ಕ್ಲೋಸ್ಡ್ ವ್ಯಾಲೆಟ್‌ ಎಂದು ಕರೆಯಲ್ಪಡುವ ವ್ಯಾಲೆಟ್‌ ಮೂಲಕ ಒಂದು ನಿರ್ದಿಷ್ಟ ಕಂಪನಿಯ ವಹಿವಾಟಿಗೆ ಮಾತ್ರ ಇ ನಗದನ್ನು ಬಳಸಬಹುದು. ಫ‌ಸ್ಟ್‌ಕ್ರೆ„ ಡಾಟ್‌ ಕಾಮ್‌, ಫ್ಲಿಪ್‌ಕಾರ್ಟ್‌ ಮೊದಲಾದ ಹಲವು ಆನ್‌ಲೈನ್‌ ಕಂಪನಿಗಳು ಇಂತಹ ವ್ಯಾಲೆಟ್‌ಗಳನ್ನು ನಡೆಸುತ್ತವೆ. ಕ್ಯಾಷ್‌ಬ್ಯಾಕ್‌ಗಳನ್ನು ವ್ಯಾಲೆಟ್‌ ಪಾಯಿಂಟ್‌ಗಳಾಗಿ ನೀಡಲು ಮತ್ತು ಹಲವು ಬಾರಿ ಗ್ರಾಹಕ ಹಿಂತಿರುಗಿಸಿದ ವಸ್ತುವಿನ ಮೌಲ್ಯವನ್ನು ವ್ಯಾಲೆಟ್‌ಗೆ ವರ್ಗಾಯಿಸುವ ಮೂಲಕ ಮತ್ತೆ ತಮ್ಮ ವೆಬ್‌ ಮೂಲಕವೇ ಖರೀದಿಸುವ ಪರೋಕ್ಷ ನಿಬಂಧನೆ ಹೇರಲು ಮುಚ್ಚಿದ ವ್ಯಾಲೆಟ್‌ ಸಹಕಾರಿ. 

ಇಂತಹ ವ್ಯಾಲೆಟ್‌ಗಳಲ್ಲಿನ ಹಣಕ್ಕೆ ಕಂಪನಿ ಯಾವುದೇ ಬಡ್ಡಿ ಕೊಡುವುದಿಲ್ಲ. ಇದಕ್ಕೆ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾದ ಅನುಮತಿ ಕೂಡ ಬೇಕಾಗಿಲ್ಲ. ವೆಬ್‌ ಕಂಪನಿಗಳ ವಿಶ್ವಾಸಾರ್ಹತೆಯ ಮೇಲೆ ಇವುಗಳ ವ್ಯಾಲೆಟ್‌ಗಳಲ್ಲಿನ ಮೊತ್ತ ಸುರಕ್ಷಿತವಾಗಿರುತ್ತದೆ. ಪ್ರತಿಷ್ಟಿತ ಕಂಪನಿಗಳ ವ್ಯಾಲೆಟ್‌ಗಳನ್ನು ಬಳಸಬಹುದೇ ವಿನಃ ಶೇ. 100ರಷ್ಟು ಕ್ಯಾಶ್‌ಬ್ಯಾಕ್‌ ಎಂಬ ಘೋಷಣೆಯ ವೆಬ್‌ಗಳನ್ನು ಅನುಮಾನದಿಂದಲೇ ಮೊದಲು ನೋಡಬೇಕಾಗುತ್ತದೆ. ಅರೆ, ತೆರೆದ ವ್ಯಾಲೆಟ್‌ ಅಲಿಯಾಸ್‌ ಸೆಮಿ ಕ್ಲೋಸ್ಡ್ ವ್ಯಾಲೆಟ್‌ಗಳೇ ಈಗ ಹೆಚ್ಚು ಚಾಲ್ತಿಯಲ್ಲಿರುವುದು. ಇಂದು ವ್ಯಾಲೆಟ್‌ ಉದ್ಯಮದಲ್ಲಿ 80ರಿಂದ 90 ಕಂಪನಿಗಳಿವೆ. ಇವರನ್ನು ಆಟಗಾರರು ಎಂದುಕೊಳ್ಳುವುದಾದರೆ ಅಂಕಣದಲ್ಲಿ 55 ಜನ ಬ್ಯಾಂಕಿಂಗೇತರ ಕ್ಷೇತ್ರದಿಂದ ಬಂದು ತಮ್ಮ ಅದೃಷ್ಟ ಪರೀಕ್ಷಿಸುತ್ತಿರುವವರು. ಪೇಟಿಎಂ, ಮೊಬಿಕ್ವಿಕ್‌, ಆಕ್ಸಿಜನ್‌, ಫ್ರೀಚಾರ್ಜ್‌, ಐಟಿಝಡ್‌ ಕ್ಯಾಷ್‌, ಟಾಕ್‌ಚಾರ್ಜ್‌ ಮೊದಲಾದವುಗಳನ್ನು ಹೆಸರಿಸಬಹುದು. ಇತ್ತೀಚೆಗೆ ಅಮೆಜಾನ್‌ ಕೂಡ ಈ ವ್ಯಾಲೆಟ್‌ ಕ್ಷೇತ್ರಕ್ಕೆ ಕಾಲಿರಿಸಿದೆ. 

ಈ ಮಾದರಿಯ ವ್ಯಾಲೆಟ್‌ಗಳಲ್ಲಿ ಒಂದು ಹಣಕಾಸು ನಿರ್ವಹಣೆಯ ಏಜೆನ್ಸಿ ಹಣ ವರ್ಗಾವಣೆಯ ಜವಾಬ್ದಾರಿಗಳನ್ನು ನಿರ್ವಹಿಸುತ್ತದೆ. ಆರ್‌ಬಿಐ ಸೂಚನೆಯ ಅನ್ವಯ  ಈ ಕಂಪನಿ ಬ್ಯಾಂಕ್‌ಗಳಲ್ಲಿ ಒಂದು ಎಸೊವ್‌ ಖಾತೆಯನ್ನು ಹೊಂದಿರುತ್ತದೆ. ಅದರಲ್ಲಿ ಹಣ ಹೋಗಿ ಬೀಳುತ್ತದೆ. ಈ ಮೊತ್ತಕ್ಕೆ ವರ್ಷದ ಸರಾಸರಿಯಲ್ಲಿ ಆ ಕಂಪನಿ ಹಾಗೂ ಬ್ಯಾಂಕ್‌ ನಡುವಿನ ಒಪ್ಪಂದದ ಅನ್ವಯ ಬಡ್ಡಿಯೂ ಸಿಗುತ್ತದೆ. ಶೇ. 6, 7ರ ಬಡ್ಡಿದರಕ್ಕೂ ಒಪ್ಪಂದ ಆಗಿರುವುದುಂಟು.

Advertisement

ಸುಮ್ಮನೆ ಕೊಡಲ್ಲ ಆಫ‌ರ್‌!
ಈ ವ್ಯಾಲೆಟ್‌ಗಳಲ್ಲಿ ಗ್ರಾಹಕ ಹಣ ತುಂಬುತ್ತಾನೆ. ಅವನ ಆನ್‌ಲೈನ್‌ ಖರೀದಿ, ಮೊಬೈಲ್‌-ಡಿಟಿಹೆಚ್‌ ರೀಚಾರ್ಜ್‌, ವಿದ್ಯುತ್‌ ಬಿಲ್‌ ಪಾವತಿ ಮೊದಲಾದ ಹತ್ತು ಹಲವು ಅಗತ್ಯಗಳಿಗೆ ಈ ಹಣ ಬಳಸಬಹುದು. ಆದರೆ ಕಂಪನಿ ಗ್ರಾಹಕನಿಗೆ ಯಾವುದೇ ಬಡ್ಡಿ ಹಾಕುವುದಿಲ್ಲ. ವ್ಯಾಲೆಟ್‌ ಮೂಲಕದ ಪಾವತಿಗೆ ಶೇ. 10ರ ರಿಯಾಯಿತಿ ಆಫ‌ರ್‌ಗಳು, ಆ್ಯಡ್‌ ಮನಿಗೆ ಶೇ. 15ರ ಹೆಚ್ಚುವರಿ ಕೊಡುಗೆಗಳ ಮೂಲಕವಷ್ಟೇ ಗ್ರಾಹಕ ಪರೋಕ್ಷ ಬಡ್ಡಿ ಪಡೆಯಬಹುದು. ಬಹುಶಃ ವ್ಯಾಲೆಟ್‌ಗಳು ಕಾಲಕಾಲಕ್ಕೆ ತಮ್ಮ ವ್ಯಾಲೆಟ್‌ ಖಾತೆಯಲ್ಲಿ ಹಣ ತುಂಬಿಸುವಂತೆ ಮಾಡಲು ಕೊಡುವ ಆಫ‌ರ್‌ಗಳ ಹಿಂದಿನ ಹಕೀಕತ್ತು ನಿಮಗೂ ಗೊತ್ತಾಗಿರಬಹುದು!

ವ್ಯಾಲೆಟ್‌ಗಳ ಆಯ್ಕೆಯಲ್ಲೂ ಎಚ್ಚರಿಕೆ ತೀರಾ ಅಗತ್ಯ. ವ್ಯಾಲೆಟ್‌ಗಳನ್ನು ಆನ್‌ಲೈನ್‌ ವ್ಯವಹಾರಗಳಲ್ಲಿ ಬಳಸಿಕೊಳ್ಳಬಹುದು ಎಂಬುದು ನಿಜವಾದರೂ ಆನ್‌ಲೈನ್‌ ಪೋರ್ಟಲ್‌ಗ‌ಳ ಪಾವತಿ ಭಾಗದಲ್ಲಿ ಇಂತಹ ವ್ಯಾಲೆಟ್‌ ಸೇರ್ಪಡೆಗೊಂಡಿದ್ದರೆ ಮಾತ್ರ ಈ ಪಾವತಿ ಆಯ್ಕೆಯನ್ನು ಮಾಡಿಕೊಂಡು ಖರೀದಿಗೆ ಮುಂದಾಗಬಹುದು. ವ್ಯಾಲೆಟ್‌ ಕೊಡುವ ಆಫ‌ರ್‌ಗಳನ್ನು ನಂಬಿ ಅದರಲ್ಲಿ ಹಣ ತುಂಬಿಸುವ ಬದಲು ಅದರ ವಿಶ್ವಾಸಾರ್ಹತೆ ಹಾಗೂ ಸಾರ್ವತ್ರಿಕತೆಯನ್ನು ಆಧರಿಸಿ ಹೆಜ್ಜೆ ಇರಿಸುವುದು ಕ್ಷೇಮ.

ಮುಕ್ತ ವ್ಯಾಲೆಟ್‌ಗಳು ಇತ್ತೀಚಿನ ಕ್ರಾಂತಿ. ಇದರಲ್ಲಿ ನೇರವಾಗಿ ಬ್ಯಾಂಕ್‌ ಒಂದು ಪಾತ್ರವಾಗಿರುತ್ತದೆ. ಗ್ರಾಹಕನ ಹಣವನ್ನು ನಿರ್ವಹಿಸಲು ಮುಕ್ತ ವ್ಯಾಲೆಟ್‌ನಲ್ಲಿ ಒಂದು ಕಂಪನಿ ಹಾಗೂ ಬ್ಯಾಂಕ್‌ ಜಂಟಿಯಾಗಿ ಕಾರ್ಯನಿರ್ವಹಿಸುತ್ತವೆ. ಇಲ್ಲಿ ಹಣವನ್ನು ವ್ಯಾಲೆಟ್‌ನಿಂದ ಬ್ಯಾಂಕ್‌ ಖಾತೆಗೂ ವರ್ಗಾಯಿಸಬಹುದು. ಆದರೆ ಇಂತದೊಂದು ಖಾತೆ ನಿರ್ವಹಣೆಗೆ ಬ್ಯಾಂಕ್‌ನಲ್ಲಿರುವ ಕೆವೈಸಿ ಜೊತೆ ಸಮನ್ವಯತೆ ಆಗಿರಬೇಕು. ಮೊಬೈಲ್‌ ಸಂಖ್ಯೆ ಬ್ಯಾಂಕ್‌ ಖಾತೆಗೆ ಲಿಂಕ್‌ ಆಗಿರಬೇಕು.  ಇಲ್ಲೂ ವ್ಯಾಲೆಟ್‌ನ ಹಣಕ್ಕೆ ಬಡ್ಡಿ ಕೊಡಲು ಯಾರೂ ಮುಂದಾಗುತ್ತಿಲ್ಲ. 

2016ರ ನವೆಂಬರ್‌ನಲ್ಲಿ ಎಲ್ಲ ವ್ಯಾಲೆಟ್‌ಗಳನ್ನು ಸೇರಿಸಿ ಅಜಮಾಸು 100 ಮಿಲಿಯನ್‌ ಗ್ರಾಹಕರಿದ್ದರು. ಅದೇ 2017ರ ಮಾರ್ಚ್‌ನಲ್ಲಿ ಬರೀ ಪೇಟಿಎಂ ಒಂದೇ 200 ಮಿಲಿಯನ್‌ ಗ್ರಾಹಕರನ್ನು ಹೊಂದುವಂತಾಯಿತು.  ಥ್ಯಾಂಕ್ಸ್‌ ಟು ಮೋದಿ! ಟ್ರೂ ಕಾಲರ್‌, ವಾಟ್ಸ್‌ಆ್ಯಪ್‌ ಥರಹದ ಕಂಪನಿಗಳು ಕೂಡ ಇ ವ್ಯಾಲೆಟ್‌ಗಳನ್ನು ಮಾಡುವ ಉತ್ಸುಕತೆ ತೋರಿದೆ. ಹೀಗೆ ಯೋಚನೆ ಮಾಡಿ, ಸಾವಿರ ರೂ. ವ್ಯಾಲೆಟ್‌ಗೆ ಸೇರಿಸಿದರೆ 75 ರೂ. ಕ್ಯಾಶ್‌ಬ್ಯಾಕ್‌ ಎಂಬ ಆಫ‌ರ್‌ ನೋಡಿ ಗ್ರಾಹಕನೊಬ್ಬ ಅಲ್ಲಿ ಹಣ ಸೇರಿಸುತ್ತಾನೆ. 800 ಅಥವಾ 900 ರೂ ಅನ್ನು ಈ ಜಾಣ ತಕ್ಷಣ ಖಾಲಿ ಮಾಡುತ್ತಾನೆ ಎಂದಿಟ್ಟುಕೊಂಡರೂ ಕನಿಷ್ಠ 100 ರೂ. ಅಲ್ಲಿ ಉಳಿಯಿತು. ವ್ಯಾಲೆಟ್‌ ಕಂಪನಿ ತನ್ನ ಕ್ಯಾಶ್‌ಬ್ಯಾಕ್‌ ಅನ್ನು ಸುಮಾರು ಒಂದು ತಿಂಗಳ ನಂತರ ವರ್ಗಾಯಿಸುತ್ತದೆ. ಈ ರೀತಿ ಸೇರ್ಪಡೆಯಾಗುವ ಹಣ ಹಾಗೂ ಖಾತೆಯಲ್ಲಿ ಉಳಿದ ಹಣವನ್ನು ಸಾಮಾನ್ಯವಾಗಿ ಗ್ರಾಹಕ ಬಳಸಿಕೊಳ್ಳುವುದು ಯಾವತ್ತೋ ಒಮ್ಮೆ. ಅಲ್ಲಿಯವರೆಗೆ ಈ ಹಣ ವ್ಯಾಲೆಟ್‌ಗೆ ಒಂದು ರೀತಿಯಲ್ಲಿ “ಉಚಿತ’ವಾಗಿ ಬಡ್ಡಿ ಗಳಿಸಿಕೊಡುತ್ತಿರುತ್ತದೆ!

ಷರತ್ತುಗಳು ಅನ್ವಯ!
ಕ್ಯಾಶ್‌ಬ್ಯಾಕ್‌ ಎಂಬ ವ್ಯಾಲೆಟ್‌ಗಳ ಆಕರ್ಷಕ ಸ್ಲೋಗನ್‌ನ ಕೊನೆಯಲ್ಲಿ “ಗನ್‌’ ಇದೆ ಎಂಬುದು ನೆನಪಿನಲ್ಲಿ ಇರಿಸಿಕೊಳ್ಳಬೇಕು. ಮೊಬಿಕ್ವಿಕ್‌ ಎಂಬ ಕಂಪನಿ ಹಣ ಸೇರ್ಪಡೆಗೆ ಸೂಪರ್‌ ಕ್ಯಾಶ್‌ ಎಂಬ ಆಫ‌ರ್‌ ಮುಂದಿಡುವ ಅದು ಸೂಪರ್‌ ಕ್ಯಾಶ್‌ ಮೊತ್ತವನ್ನು ಪ್ರತಿ ಪಾವತಿಯ ಶೇ. 10ರಂತೆ ಬಳಸಿಕೊಳ್ಳಬಹುದು ಎಂಬ ನಿಯಮ ಹೇರುತ್ತದೆ. ಒಬ್ಬ ಗ್ರಾಹಕನ ಖಾತೆಯಲ್ಲಿ 100 ರೂ. ಸೂಪರ್‌ ಕ್ಯಾಶ್‌ ಇದೆ ಎಂದರೆ ಆತನ ಮುಂದಿನ ಸಾವಿರ ರೂ. ಖರೀದಿಯಲ್ಲಿ ಈ 100 ರೂ. ಸೂಪರ್‌ ಕ್ಯಾಶ್‌ಅನ್ನು ಕರಗಿಸಬಹುದು. ಇದರ ಜೊತೆಗೆ ಇನ್ನೊಂದು ಷರತ್ತನ್ನೂ ಕಂಪನಿ ಹೇರಿರುತ್ತದೆ. ಪ್ರತಿ ವಹಿವಾಟಿಗೆ ಪರಮಾವಧಿ 10 ರೂ. ಸೂಪರ್‌ ಕ್ಯಾಶ್‌ ಮಾತ್ರ ಬಳಸಬಹುದು! 

ಇತ್ತೀಚೆಗೆ ಟಾಕ್‌ಚಾರ್ಜ್‌ ಎಂಬ ವ್ಯಾಲೆಟ್‌ ಬೇರೆಯ ರೀತಿ ಷರತ್ತು ಹೇರುತ್ತಿದೆ. ಆ್ಯಡ್‌ ಮನಿಗೆ ಸಿಗುವ ಕ್ಯಾಶ್‌ಬ್ಯಾಕ್‌ ನೀವು ತುಂಬಿದ ಹಣವನ್ನು ಖಾತೆಯಲ್ಲಿ ಒಂದು ತಿಂಗಳು, ಮೂರು ತಿಂಗಳು ಹಾಗೆಯೇ ಮೀಸಲಿರಿಸಿದರೆ ಮಾತ್ರ ಲಭ್ಯ ಎಂದು ಅದು ನಿಯಮಗಳಲ್ಲಿ ಷರಾ ಬರೆಯುತ್ತದೆ. ಇಂತಹ ನೂರು ಷರತ್ತುಗಳು ಇರಬಹುದಾದ ಹಿನ್ನೆಲೆಯಲ್ಲಿ ಅವುಗಳನ್ನು ಎರಡೆರಡು ಬಾರಿ ಓದಿ ಅರ್ಥ ಮಾಡಿಕೊಳ್ಳದಿದ್ದರೆ ಪಿಗ್ಗಿ ಬೀಳುವ ಸಾಧ್ಯತೆ ಜಾಸ್ತಿ!

ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

Advertisement

Udayavani is now on Telegram. Click here to join our channel and stay updated with the latest news.

Next