Advertisement
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕರು ಕುಡಿಯುವ ನೀರಿಗಾಗಿ ಅಧಿಕಾರಿಗಳು ಸಭೆ ನಡೆಸುತ್ತಿದ್ದ ಸಂದರ್ಭದಲ್ಲಿ ಬಮ್ಮನಜೋಗಿ, ಕನ್ನೋಳ್ಳಿ, ಕೊಟನೂರ ನೂರಾರು ರೈತರು ಏಕಾಏಕಿ ಜಮಾಯಿಸಿ ಕುಡಿಯಲು ನೀರು ಕೊಡಿ ಎಂದು ಘೋಷಣೆ ಕೂಗಿದರು. ತಕ್ಷಣ ಶಾಸಕರು ರೈತರ ಬಳಿ ಆಗಮಿಸಿ ಸಮಸ್ಯೆ ಆಲಿಸಿದರು. ಬಮ್ಮನಜೋಗಿ ಕೆರೆಗೆ ನೀರು ಬರಬೇಕಾದರೆ ಬೈರವಾಡಗಿಯ ಗ್ರಾಮದ ಮೆಲೆ ಹಾದು ಹೋದ ಮುಳವಾಡ ಏತ ನೀರಾವರಿ ಕಾಲುವೆಯಿಂದ ಮಾತ್ರ ಸಾಧ್ಯ. ಬೈರವಾಡಗಿಯ ರೈತ ರಾಮು ಮರಾಠೆ ಇನ್ನಿತರು ತಮ್ಮ ಜಮೀನಿನಲ್ಲಿ ಹಾದು ಹೋದ ಕಾಲುವೆಗೆ ತಕರಾರು ಇಟ್ಟಿದ್ದಾರೆ. ಇವರ ಹೊಲದಲ್ಲಿ 500 ಅಡಿ ಕಾಲುವೆ ಕಾಮಗಾರಿ ಪೂರ್ಣಗೊಂಡರೆ ಬಮ್ಮನಜೋಗಿ ಕೆರೆಗೆ ನೀರು ಬರುತ್ತದೆ. ಆ ರೈತ ಯಾರು ಹೇಳಿದರು ಕಾಲುವೆ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ರೈತ ರಾಜಶೇಖರ ಇಜೇರಿ ಶಾಸಕರ ಮುಂದೆ ಅಳಲು ತೋಡಿಕೊಂಡರು. ತಕ್ಷಣ ಸ್ಪಂದಿಸಿದ ಶಾಸಕರು, ಸಭೆ ಮುಕ್ತಾಯ ಬಳಿಕ ರೈತರೊಂದಿಗೆ ಬೈರವಾಡಗಿ ಗ್ರಾಮಕ್ಕೆ ತೆರಳಿದರು. ತಕರಾರು ಇಟ್ಟ ರೈತ ರಾಮು ಮರಾಠೆ ಮನೆಗೆ ದಿಢೀರ್ ಭೇಟಿ ನೀಡಿದರು.ಕಾಮಗಾರಿಗೆ ಅವಕಾಶ ಕೊಡಿ. ನಿಮಗೆ ಬರಬೇಕಾದ ಪರಿಹಾರ ಧನ ನಾನೇ ಕೊಡಿಸುತ್ತೇನೆ ಎಂದು ಅವರ ತಾಯಿಗೆ ಹೇಳಿದರು.
ಭರವಸೆ ನಂತರ ರೈತರು ತಮ್ಮ ತಮ್ಮ ಗ್ರಾಮಕ್ಕೆ ತೆರಳಿದರು. ಗುರುಲಿಂಗ ದೇವರು ಹಿರೇಮಠ, ಕೊಕಟನೂರ ಗದ್ದುಗೆ ಮಠದ ಶ್ರೀಗಳು ರೈತರೊಂದಿಗೆ ಪಾಲ್ಗೊಂಡಿದ್ದರು. ಅಣ್ಣುಗೌಡ ಪಾಟೀಲ, ರಮೇಶ ಮಸಬಿನಾಳ, ಮಹಾಂತೇಶ ವಂದಾಲ, ಎಂ.ಎಸ್. ಬಿರಾದಾರ, ರಾಮನಗೌಡ ಪಾಟೀಲ,
ಆರ್.ಎನ್. ಪಾಟೀಲ, ಮಡು ಯಂಕಂಚಿ, ಸಂಗಣ್ಣ ಹಂದರಾಳ, ಎಂ.ಡಿ ಕೊಣಶಿರಸಿಗಿ ಇತರರು ಇದ್ದರು.