Advertisement
ಮೇಯರ್ ಭಾಸ್ಕರ್ ಮಾತನಾಡಿ, ಈ ಬಗ್ಗೆ ನಗರಾಭಿವೃದ್ಧಿ ಸಚಿವರ ಜತೆಗೆ ಮಾತುಕತೆ ನಡೆಸುವ ಸಂಬಂಧ ವಿಪಕ್ಷ ದವರ ಉಪಸ್ಥಿತಿಯಲ್ಲಿ ಮನಪಾದಿಂದ ನಿಯೋಗ ತೆರಳುವುದಾಗಿ ತಿಳಿಸಿದರು. ಬಿಜೆಪಿ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಪಾಲಿಕೆಯಲ್ಲಿ ಈಗಾಗಲೇ ಅಧಿಕಾರಿಗಳ ಕೊರತೆ ಇದೆ. ಇದರಿಂದಾಗಿ ತೆರಿಗೆ ಸಂಗ್ರಹ ಶೇ.33ರಷ್ಟು ಮಾತ್ರವೇ ಆಗಿದೆ. ನಗರದ ಮಾರುಕಟ್ಟೆ ಪಾರ್ಕಿಂಗ್‌ನಿಂದ 7.25 ಲಕ್ಷ ರೂ. ಆದಾಯ ಸಂಗ್ರಹ ಆಗಬೇಕಾಗಿತ್ತು. ಸುರತ್ಕಲ್ ಮಾರುಕಟ್ಟೆಯಿಂದ 10 ಲಕ್ಷ ರೂ. ಬಾಕಿ ಇದೆ. ಆದರೆ ಅಧಿಕಾರಿಗಳ ಕೊರತೆಯಿಂದ ತೆರಿಗೆ ಸಂಗ್ರಹವಾಗದೆ ಪಾಲಿಕೆ ಆರ್ಥಿಕ ತೊಂದರೆಯನ್ನು ಅನುಭವಿಸುತ್ತಿದೆ. ಜತೆಗೆ ನಗರದಲ್ಲಿ ಸಾಕಷ್ಟು ಅನಧಿಕೃತ ಜಾಹೀರಾತುಗಳನ್ನು ಹಾಕಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಂದಾಯ ಇಲಾಖೆಯ ಓರ್ವ ಅಧಿಕಾರಿಯನ್ನು ಅನಧಿಕೃತ ಜಾಹೀರಾತು ತೆರವಿಗಾಗಿ ವರ್ಗಾವಣೆ ಮಾಡಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿವೆ. ಇದಕ್ಕೆ ಮೇಯರ್ ಅವರು ಉತ್ತರಿಸಬೇಕು ಎಂದು ಆಗ್ರಹಿಸಿದರು.
ಮೇಯರ್ ಮಾತನಾಡಿ, ಕಂದಾಯ ಅಧಿಕಾರಿ ವರ್ಗಾವಣೆ ಈ ಹಿಂದೆಯೂ ನಡೆದಿತ್ತು. ಜತೆಗೆ ನಾವು ವರ್ಗಾವಣೆ ಮಾಡಿದ್ದಲ್ಲ. ಸರಕಾರದ ಆದೇಶವಿದು ಎಂದರು. ಬಿಜೆಪಿ ಸದಸ್ಯ ವಿಜಯ್ ಕುಮಾರ್ ಮಾತನಾಡಿ, ಕಂದಾಯ ಅಧಿಕಾರಿ ವರ್ಗಾ ವಣೆ ಸಾರ್ವಜನಿಕ ಹಿತ ದೃಷ್ಟಿಯಿಂದ ಎಂದು ಪತ್ರದಲ್ಲಿ ಉಲ್ಲೇಖೀಸಲಾಗಿದೆ. ಈ ಬಗ್ಗೆ ಯಾವುದಾದರು ದೂರು ಬಂದಿತ್ತಾ? ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ನ ಎ.ಸಿ. ವಿನಯ್‌ರಾಜ್ ಮಾತನಾಡಿ, ಸಂಬಂಧಪಟ್ಟ ಅಧಿಕಾರಿಯಿಂದ ಈ ಹಿಂದೆ ಕರ್ತವ್ಯ ಲೋಪ ಆದ ಬಗ್ಗೆ ವರದಿಯಿದೆ. ವರ್ಗಾವಣೆ ಎನ್ನುವುದು ಸರಕಾರದ ವಿಚಾರ ಎಂದರು. ಬಿಜೆಪಿ ಸದಸ್ಯ ಮಧುಕಿರಣ್ ಮಾತನಾಡಿ, ಕಂದಾಯ ಅಧಿಕಾರಿಯ ವರ್ಗಾವಣೆ ಆದ ಬಳಿಕ ಯಾವ ಕಾರಣಕ್ಕಾಗಿ ಪ್ಲೆಕ್ಸ್ ತೆರವು ನಿಂತಿದೆ? ತೆರವು ಮಾಡಿದರೆ ಆ ಅಧಿಕಾರಿಯವರು ಕೂಡ ವರ್ಗಾವಣೆ ಆಗುವ ಭಯವೇ? ಎಂದು ಪ್ರಶ್ನಿಸಿದರು. ಮೇಯರ್ ಪ್ರತಿಕ್ರಿಯಿಸಿ, ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಬ್ಯಾನರ್, ಪ್ಲೆಕ್ಸ್ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಆಯುಕ್ತರು. ಒಂದು ವೇಳೆ ವರ್ಗಾವಣೆ ಆಗುವುದಿದ್ದರೆ ಅವರೇ ವರ್ಗಾವಣೆ ಆಗಬೇಕಿತ್ತು ಎಂದರು. ಈ ವೇಳೆ ಕೆಲವು ಹೊತ್ತು ಆಡಳಿತ, ವಿಪಕ್ಷ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು.
Related Articles
Advertisement
ಪ್ರತಿಧ್ವನಿಸಿದ 112ಸಿಯಡಿ ಮನೆ ನಂಬರ್ ನಿರಾಕರಣೆಬಿಜೆಪಿ ಸದಸ್ಯರಾದ ಪ್ರೇಮಾನಂದ ಶೆಟ್ಟಿ ಹಾಗೂ ಸುಧೀರ್ ಶೆಟ್ಟಿ ಮಾತನಾಡಿ, 112ಸಿ ಅಡಿಯಲ್ಲಿ 1,000 ಚದರ ಅಡಿಯ ಮನೆಗಳಿಗೆ ಮನೆ ನಂಬರನ್ನು ಸ್ಥಳ ಪರಿಶೀಲನೆ ಮಾಡಿ ನೀಡುವುದಾಗಿ ಕಳೆದ ಪಾಲಿಕೆ ಸಭೆಯಲ್ಲಿ ಮೇಯರ್ ಅವರು ತಿಳಿಸಿದ್ದರು. ಆದರೆ ಯಾರಿಗೂ ಕೂಡ ಮನೆ ನಂಬರ್ ನೀಡಿಲ್ಲ. ಮೇಯರ್ ರೂಲಿಂಗ್ ಕೂಡ ಪಾಲಿಕೆಯಲ್ಲಿ ಪಾಲನೆಯಾಗುತ್ತಿಲ್ಲವೇ? ಎಂದು ಪ್ರಶ್ನಿಸಿದರು. ಮೇಯರ್ ಭಾಸ್ಕರ್ ಮಾತನಾಡಿ, ವಾಸ್ತವ್ಯದ ಉದ್ದೇಶಕ್ಕಾಗಿ ಮನೆ ನಂಬರ್ ನೀಡಲಾಗುತ್ತಿದೆ ಎಂದರು. ಎಷ್ಟು ಅರ್ಜಿ ವಿಲೇವಾರಿ ಮಾಡಲಾಗಿದೆ? ಎಂಬುದನ್ನು ಅಧಿಕಾರಿಗಳು ತಿಳಿಸಲಿ ಎಂದಾಗ, ಮಾತನಾಡಿದ ಕಂದಾಯ ಅಧಿಕಾರಿ 112ಸಿಯಡಿ 13 ಅರ್ಜಿಗಳು ಬಂದಿದ್ದು, 7 ಅರ್ಜಿಗಳ ಸ್ಥಳ ಪರಿಶೀಲನೆ ಮಾಡಲಾಗಿದೆ ಎಂದರು. ಕಾಂಗ್ರೆಸ್‌ನ ದೀಪಕ್ ಪೂಜಾರಿ ಮಾತನಾಡಿ, 112ಸಿ ದುರುಪಯೋಗಿಸಿ ಕೆಲವರು ವಾಣಿಜ್ಯ ಕಟ್ಟಡಕ್ಕೆ ಮನೆ ನಂಬರ್ ಪಡೆದುಕೊಂಡಿದ್ದಾರೆ. ಇದರ ವಿರುದ್ಧ ಕ್ರಮ ಆಗಬೇಕಿದೆ ಎಂದರು. ಆಯುಕ್ತ ಮಹಮ್ಮದ್ ನಝೀರ್ ಮಾತನಾಡಿ, ಮೇಯರ್ ಅವರು ತಿಳಿಸಿದ ಪ್ರಕಾರ 1000 ಚದರ ಅಡಿಯಲ್ಲಿ ವಾಸ್ತವ್ಯದ ಮನೆ ನಿರ್ಮಾಣಕ್ಕೆ ಮನೆ ನಂಬರ್ ನೀಡಲು ಸ್ಥಳ ಪರಿಶೀಲನೆ ಮಾಡಿ ಮನೆ ನಂಬರ್ ನೀಡಲಾಗುತ್ತದೆ ಎಂದರು. ಕಾಂಗ್ರೆಸ್ ಸದಸ್ಯರಾದ ಅಪ್ಪಿ, ಅಶೋಕ್ ಡಿ.ಕೆ., ಮಹಾಬಲ ಮಾರ್ಲ, ಪುರುಷೋತ್ತಮ ಚಿತ್ರಾಪುರ, ಅಖೀಲಾ ಆಳ್ವ, ಆಶಾ ಡಿಸಿಲ್ವ, ಎ.ಸಿ. ವಿನಯ್‌ರಾಜ್, ರತಿಕಲಾ, ದೀಪಕ್ ಪೂಜಾರಿ, ಬಶೀರ್, ಜೆಡಿಎಸ್‌ನ ಅಝೀಝ್, ಬಿಜೆಪಿಯ ಸುರೇಂದ್ರ ಅವರು ಮಾತನಾಡಿದರು. ಬಿಜೆಪಿಯ ಪ್ರೇಮಾನಂದ ಶೆಟ್ಟಿ ಮಾತನಾಡಿ, ಕಾಂಗ್ರೆಸ್ ಸದಸ್ಯರೇ ಆಡಳಿತ ವ್ಯವಸ್ಥೆಯ ಮೇಲೆ ಆರೋಪಿಸುತ್ತಿದ್ದಾರೆ. ಪ್ರತೀ ಮನೆಗೆ ನೀರಿನ ಬಿಲ್ ದುಪ್ಪಟ್ಟಾಗಿ ಬರುವುದು, ಟ್ರೇಡ್ ಲೈಸೆನ್ಸ್ ನೀಡುವಲ್ಲಿ ಲೋಪ, ಜನನ ಪ್ರಮಾಣಪತ್ರ ದೊರೆಯುವಲ್ಲಿ ತೊಡಗು ಹೀಗೆ ನಾನಾ ರೀತಿಯ ಸಮಸ್ಯೆ ಕಾಡುತ್ತಿದೆ. ಮೇಯರ್ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದರು. ಆಯುಕ್ತರು ಮಾತನಾಡಿ, ಯಾವ ಯಾವ ವಾರ್ಡ್‌ನಲ್ಲಿ ದಾರಿದೀಪದ ಸಮಸ್ಯೆ ಇದೆ ಎಂಬುದನ್ನು ಲಿಖಿತವಾಗಿ ಸದಸ್ಯರು ನೀಡಿದರೆ ಸಂಬಂಧಪಟ್ಟ ಗುತ್ತಿಗೆದಾರರ ಟೆಂಡರ್ ರದ್ದುಪಡಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಉಪ ಮೇಯರ್ ಮುಹಮ್ಮದ್ ಕೆ., ಸ್ಥಾಯೀ ಸಮಿತಿ ಅಧ್ಯಕ್ಷರಾದ ಪ್ರವೀಣ್ ಚಂದ್ರ ಆಳ್ವ, ನವೀನ್ ಡಿ’ಸೋಜಾ, ರಾಧಾ ಕೃಷ್ಣ, ಲತಾ ಸಾಲ್ಯಾನ್ ಉಪಸ್ಥಿತರಿದ್ದರು. ಹಾಲಿ- ಮಾಜಿ ಮೇಯರ್‌ಗಳ ಮಾತಿನ ಚಕಮಕಿ
ಮಾಜಿ ಮೇಯರ್ ಕವಿತಾ ಸನಿಲ್ ಮಾತನಾಡಿ, ಪಚ್ಚನಾಡಿ ಆಶ್ರಯ ಕಾಲನಿಯಲ್ಲಿ ರಿಕ್ಷಾ ಚಾಲಕರೊಬ್ಬರ ಮನೆ ಕೆಡವಿ ಹಾಕಲಾಗಿದೆ. ಆದರೆ ನಗರದಲ್ಲಿ ಅನಧಿಕೃತ ಕಟ್ಟಡಗಳು, ಮಸಾಜ್ ಪಾರ್ಲರ್‌ಗಳಿದ್ದರೂಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು. ಮೇಯರ್ ಪ್ರತಿಕ್ರಿಯಿಸಿ, ನಿಮ್ಮ ಅವಧಿಯಲ್ಲಿ ತೆಗೆಸಬಹುದಿತ್ತಲ್ಲವೇ? ಎಂದರು. ಆಗ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ ಎಂದು ಕವಿತಾ ತಿಳಿಸಿದರು. ನಿಮ್ಮ ಕಾಲದಲ್ಲಿ ಏನೆಲ್ಲ ಆಗಿದೆ ಎಂಬುದು ಗೊತ್ತಿದೆ ಎಂದು ಮೇಯರ್ ಪ್ರತ್ಯುತ್ತರ ನೀಡಿದರು. ಮೀಸಲಿಟ್ಟ ಜಾಗದಲ್ಲಿದ್ದ ಮನೆ ಕೆಡವಿದ್ದು ಯಾಕೆ? ಎಂಬ ಮಹಾಬಲ ಮಾರ್ಲ ಪ್ರಶ್ನೆಗೆ ಕಂದಾಯ ಅಧಿಕಾರಿ ಮಾತನಾಡಿ, ಇಲ್ಲಿ ಅಕ್ರಮವಾಗಿದೆ ಎಂಬ ದೂರು ಬಂದಿತ್ತು. ಕವಿತಾ ಸನಿಲ್ ಅವರೂ ಪತ್ರ ಬರೆದಿದ್ದರು ಎಂದರು. ನೀವೇ ದೂರು ಕೊಟ್ಟು ತೆಗೆದಿದ್ದು ಯಾಕೆ ಎಂದು ಕೇಳುವುದೇ? ಎಂದು ಮೇಯರ್ ಪ್ರಶ್ನಿಸಿದರು. ಆಗ ಕವಿತಾ ಸನಿಲ್, ಅಲ್ಲಿ ಕೆಲವರು ಎರಡೆರಡು ಮನೆ ಕಟ್ಟಿ ಮಾರಾಟ ಮಾಡುತ್ತಿದ್ದಾರೆ ಎಂಬ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಪರಿಶೀಲಿಸಿ ಎಂದು ನಾನು ಪತ್ರ ಬರೆದಿದ್ದೆ. ಆದರೆ, ಬಡವರ ಮನೆ ತೆಗೆಯುವಂತೆ ನಾನು ಯಾವತ್ತೂ ತಿಳಿಸಿಲ್ಲ ಎಂದರು. ಮೇಯರ್ ವಿರುದ್ಧವೇ ತಿರುಗಿಬಿದ್ದ ಸದಸ್ಯರು
ಕಾಂಗ್ರೆಸ್ ಸದಸ್ಯ ಅಬ್ದುಲ್ ರವೂಫ್ ಮಾತನಾಡಿ, ನಗರದಲ್ಲಿ ದಾರಿದೀಪ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಸಮರ್ಪಕವಾಗಿ ನಿರ್ವಹಿಸದ ಗುತ್ತಿಗೆದಾರರಿಗೆ ಮರು ಟೆಂಡರ್ ನೀಡಲಾಗಿದೆ ಎಂದರು. ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ ಸದಸ್ಯರು ತಮ್ಮ ತಮ್ಮ ವಾರ್ಡ್‌ಗಳಲ್ಲೂ ದಾರಿದೀಪ ಸಮರ್ಪಕವಾಗಿ ಉರಿಯುತ್ತಿಲ್ಲ ಎಂದರು. ಆಯುಕ್ತರು ಉತ್ತರಿಸುವಂತೆ ಮೇಯರ್ ತಿಳಿಸಿದರೂ ಕೂಡ ಕಾಂಗ್ರೆಸ್ ಸದಸ್ಯರು ಬೀದಿ ದೀಪ ಕಾರ್ಯ ನಿರ್ವಹಿಸುತ್ತಿಲ್ಲ ಎಂದೇ ಧ್ವನಿ ಎತ್ತಿದರು.