Advertisement

ಅಧಿಕಾರದ ವಿರುದ್ಧ ಅಪಸ್ವರ

12:34 AM Mar 01, 2020 | Lakshmi GovindaRaj |

ಬೆಂಗಳೂರು: ಪಾಲಿಕೆ ಮಾಸಿಕ ಸಭೆಯಲ್ಲಿ ಮೇಯರ್‌ ಸಮಿತಿ ರಚಿಸುವ “ಅಧಿಕಾರ’ದ ಕುರಿತಾಗಿ ಆಡಳಿತ ಪಕ್ಷದ ಸದಸ್ಯರಲ್ಲೇ ಅಪಸ್ವರ ತೀವ್ರ ವಾದ- ವಿವಾದಕ್ಕೆ ಕಾರಣವಾಯಿತು. ಕಸದ ಟೆಂಡರ್‌ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಅಬ್ದುಲ್‌ವಾಜಿದ್‌, ನಾವು ಕಸದ ಟೆಂಡರ್‌ ಕರೆದಿದ್ದೆವು. ಆದರೆ, ಇನ್ನೂ ಕಾರ್ಯಾದೇಶ ಪತ್ರ ನೀಡಿಲ್ಲ ಎಂದು ಆರೋಪಿಸಿದರು.

Advertisement

ಇದಕ್ಕೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥರಾಜು, 2013ರಲ್ಲಿ ಟೆಂಡರ್‌ ಕರೆಯಲಾಗಿತ್ತು. ಆಗ ಅನುಮತಿ ಸಿಕ್ಕಿರಲಿಲ್ಲ. ನಂತರ ಕಳೆದ ವರ್ಷ ಟೆಂಡರ್‌ ಕರೆಯಲಾಗಿತ್ತು. ಅದರಲ್ಲಿ ಸಾಕಷ್ಟು ತಪ್ಪುಗಳಿವೆ ಎಂದರು.

ಈ ವೇಳೆ ಮಧ್ಯ ಪ್ರವೇಶಿಸಿದ ವಿರೋಧ ಪಕ್ಷದ ಸದಸ್ಯರು, ಕಸದ ಸಮಸ್ಯೆಗೆ ಕಮಿಟಿ ರಚನೆ ಮಾಡಲಾಗಿತ್ತು. ಅದರಲ್ಲಿ ಈಗ ಆಡಳಿತ ಪಕ್ಷದಲ್ಲಿ ಇರುವವರೂ ಇದ್ದರು ಎಂದರು. ಆಗ ಮಂಜುನಾಥರಾಜು, ಈ ಹಿಂದೆ ಸತ್ಯನಾರಾಯಣ ಅವರು ಮೇಯರ್‌, ಆಗಿದ್ದ ವೇಳೆ ಉಪ ಸಮಿತಿಗಳನ್ನು ರಚಿಸಿದ್ದರು. ಆದರೆ, ಸರ್ಕಾರ ಅದನ್ನು ತಿರಸ್ಕರಿಸಿತ್ತು ಎಂದರು.

ಮಧ್ಯ ಪ್ರವೇಶಿಸಿದ ಬಿಜೆಪಿ ಸದಸ್ಯ ಉಮೇಶ್‌ ಶೆಟ್ಟಿ ಅವರು ಮೇಯರ್‌ಗೆ ಸಮಿತಿ ರಚಿಸುವ ಅಧಿಕಾರವಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯರು, ಮೇಯರ್‌ ಸ್ಥಾನಕ್ಕೆ ಅಗೌರವ ತೋರಿಸುತ್ತಿದ್ದಾರೆ. ಮೇಯರ್‌ಗೆ ಅಧಿಕಾರ ಇಲ್ಲ ಎನ್ನುತ್ತಿದ್ದಾರೆ. ಉಮೇಶ್‌ ಶೆಟ್ಟಿ ಅವರು ಕ್ಷಮೆಯಾಚಿಸಬೇಕು ಎಂದು ಪಟ್ಟುಹಿಡಿದು, ಸದನದ ಬಾವಿಗಿಳಿದು ಧರಣಿ ನಡೆಸಿದರು.

ಮೇಯರ್‌ ಮಧ್ಯಪ್ರವೇಶಿಸಿ, ತನಗೆ ಅಗೌರವ ತೋರುವ ಮಾತನ್ನಾಡಿಲ್ಲ. ಧರಣಿ ಕೈಬಿಡಿ ಎಂದು ಮನವಿ ಮಾಡಿದರು. ಆಗಲೂ ವಿರೋಧ ಪಕ್ಷದ ಸದಸ್ಯರು ಧರಣಿ ಕೈಬಿಡದ ಹಿನ್ನೆಲೆಯಲ್ಲಿ ಮೇಯರ್‌ ಸಭೆಯನ್ನು 10 ನಿಮಿಷ ಮುಂದೂಡಿದರು. ಮತ್ತೆ ಸಭೆ ಪ್ರಾರಂಭವಾದಾಗ ಆ ಪದವನ್ನು ಕಡತದಿಂದ ಹಿಂಪಡೆಯಲಾಗಿದೆ ಎಂದು ಮೇಯರ್‌ ಹೇಳಿದರು. ಆಗಲೂ ಗದ್ದಲ ನಿಲ್ಲದ ಹಿನ್ನೆಲೆಯಲ್ಲಿ ಪ್ರಮುಖ ನಿರ್ಣಯ ತೆಗೆದುಕೊಂಡು ಸಭೆಯನ್ನು ಮೇಯರ್‌ ಮುಂದೂಡಿದರು.

Advertisement

ರಾಜೀನಾಮೆ ನೀಡಲು ಸಿದ್ಧ: ಈ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಷ್ಟು ಹಣ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ಎಷ್ಟು ಬಳಕೆಯಾಗಿದೆ ಎಂಬ ವಿಚಾರ ಪಾಲಿಕೆ ಮಾಸಿಕ ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು. ವಿಷಯ ಪ್ರಸ್ತಾವನೆ ಮಾಡಿದ ಅಬ್ದುಲ್‌ವಾಜಿದ್‌, ಸಿದ್ದರಾಮಯ್ಯ ಅವರ ಅವಧಿಯಲ್ಲಿ ಹೆಚ್ಚು ಹಣ ಬಿಡುಗಡೆಯಾಗಿದೆ ಎಂದರು.

ಈ ವೇಳೆ ಕ್ರಿಯಾಲೋಪವೆತ್ತಿದ ಮಾಜಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ, ಸಿದ್ದರಾಮಯ್ಯ ಅವರ ಅವಧಿಯಲ್ಲಿ 2016-17ರಲ್ಲಿ 7,300 ಕೋಟಿ ರೂ. ನೀಡಿದ್ದರು. ಇದರಲ್ಲಿ 45 ಕೋಟಿ ರೂ. ಬಾಕಿ ಉಳಿದಿದ್ದು, ಘನತ್ಯಾಜ್ಯ ನಿರ್ವಹಣೆ ಲೋಪವೆಸಗಿದ್ದಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ 550 ಕೋಟಿ ರೂ. ದಂಡ ವಿಧಿಸಿತ್ತು. ಈ ದಂಡ ಮೊತ್ತವನ್ನು 7,300 ಕೋಟಿಯಲ್ಲೇ ನೀಡುವಂತೆ ಸರ್ಕಾರ ಆದೇಶ ಮಾಡಿತ್ತು. 2016-17ರಲ್ಲೇ 595 ಕೋಟಿ ರೂ. ನೀಡಲಿಲ್ಲ.

2017- 18ರಲ್ಲಿ 2,491 ಕೋಟಿ ರೂ. ಪ್ಯಾಕೇಜ್‌ ಘೋಷಣೆ ಮಾಡಲಾಗಿತ್ತು. ಆದರೆ, ಅನುದಾನ ಬಿಡುಗಡೆಯಾಗಲಿಲ್ಲ. ಹೀಗಾಗಿ, ಒಟ್ಟು 3,086 ಕೋಟಿ ರೂ. ಬಾಕಿ ಇತ್ತು. ಈಗ ಸಿಎಂ ಯಡಿಯೂರಪ್ಪ ಅವರು, 2,300 ಕೋಟಿ ಪ್ಯಾಕೇಜ್‌ ಘೋಷಣೆ ಮಾಡಿದ್ದು, ಇದರಲ್ಲಿ ಈಗಾಗಲೇ 860 ಕೋಟಿ ರೂ.ಬಿಡುಗಡೆಯಾಗಿದೆ. ತಾನು ಸುಳ್ಳು ಹೇಳಿದ್ದರೆ ರಾಜೀನಾಮೆ ನೀಡಲು ಸಿದ್ಧ, ನೀವು ರಾಜೀನಾಮೆ ನೀಡಲು ಸಿದ್ಧವೇ ಎಂದು ವಿರೋಧ ಪಕ್ಷದ ನಾಯಕ ಅಬ್ದುಲ್‌ವಾಜಿದ್‌ರಿಗೆ ಸವಾಲು ಹಾಕಿದರು.

ಕಲಾಪದಲ್ಲಿ ಕೇಳಿದ್ದು…
ಗದ್ದಲ ನಿಲ್ಲಿಸಿ, ಜನ ನಮ್ಮನ್ನು ನೋಡುತ್ತಿದ್ದಾರೆ. ಕಸದ ವಿಚಾರ ಗಂಭೀರವಾಗಿದೆ ಚರ್ಚೆ ಮಾಡಬೇಕು. (ವಿರೋಧ ಪಕ್ಷದ ಸದಸ್ಯರ ಧರಣಿ ಉದ್ದೇಶಿಸಿ).
-ಎಂ.ಗೌತಮ್‌ಕುಮಾರ್‌, ಮೇಯರ್‌

ಕಳೆದ 5 ತಿಂಗಳಿಂದ ಯಾವುದೇ ಯೋಜನೆ ಅನುಷ್ಠಾನವಾಗಿಲ್ಲ. ಬೆಂಗಳೂರಿಗೆ ಮೇಯರ್‌ ಕೊಡುಗೆ ಏನು?
-ಅಬ್ದುಲ್‌ವಾಜಿದ್‌ ವಿರೋಧ ಪಕ್ಷದ ನಾಯಕ

ಕೌನ್ಸಿಲ್‌ ಯಾವುದೇ ವಿಚಾರವನ್ನು ತನಿಖೆಗೆ ಆದೇಶ ಮಾಡಿಲ್ಲ. ನೀವು ಮಾಡಿರುವ ಪಾಪಗಳನ್ನು ನಾವು ತೊಳೆಯುತ್ತಿದ್ದೇವೆ. (ವಿರೋಧ ಪಕ್ಷವನ್ನು ಉದ್ದೇಶಿಸಿ).
-ಪದ್ಮನಾಭರೆಡ್ಡಿ, ಮಾಜಿ ವಿರೋಧ ಪಕ್ಷದ ನಾಯಕ

ನೀವು ಹೇಳಿದ್ದನ್ನೆಲ್ಲ ಒಪ್ಪಿಕೊಳ್ಳಲು ಸಾಧ್ಯವಿಲ್ಲ.
-ಮಂಜುನಾಥ ರೆಡ್ಡಿ, ಮಾಜಿ ಮೇಯರ್‌

ಕಸದ ಟೆಂಡರ್‌ ಬಗ್ಗೆ ಸಂಪೂರ್ಣ ಚರ್ಚೆ ಆಗಿಲ್ಲ. ನೀವು ಹೇಳುತ್ತಿರುವುದು ಸುಳ್ಳು.
-ಮಂಜುನಾಥರಾಜು, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next