Advertisement

ವಿವಾದಗಳ ಕಾರ್ಮೋಡ

12:08 AM Jun 11, 2019 | Lakshmi GovindaRaj |

ಅದೇನೋ ಗೊತ್ತಿಲ್ಲ, ಕಾರ್ನಾಡರ ಬದುಕಿನ ಕೊನೆಯ ದಶಕ ಅದೊಂದು ವಿವಾದ ಪರ್ವ. ಸಾಹಿತ್ಯ ಮತ್ತು ಸಾಹಿತ್ಯೇತರ ವಿಚಾರವಾಗಿ, ಅವರು ನೀಡುತ್ತಿದ್ದ ಹೇಳಿಕೆಗಳು ವ್ಯಾಪಕ ಟೀಕೆಗಳಿಗೆ ಗುರಿಯಾಗುತ್ತಿದ್ದವು. ಆದರೆ, ಎಷ್ಟೇ ಆಕ್ರೋಶ ಎದುರಾದರೂ, ಕಾರ್ನಾಡರು ತಮ್ಮ ಸಿದ್ಧಾಂತಗಳ ಜತೆ ಅಚಲರಾಗಿಯೇ ಇರುತ್ತಿದ್ದುದ್ದು ವಿಶೇಷ…

Advertisement

2012
ನೈಪಾಲ್‌ಗೆ ಕುಟುಕಿದ ಸಂದರ್ಭ: “ನೊಬೆಲ್‌ ಪುರಸ್ಕೃತ ವಿ.ಎಸ್‌. ನೈಪಾಲ್‌ಗೆ ಭಾರತದ ಇತಿಹಾಸಕ್ಕೆ ಮುಸ್ಲಿಮರು ನೀಡಿರುವ ಕೊಡುಗೆ ಬಗ್ಗೆ ಎಳ್ಳಷ್ಟೂ ಜ್ಞಾನವಿಲ್ಲ. ಅವರು ಭಾರತ ಕುರಿತು ಬರೆದಿರುವ ಮೂರು ಕೃತಿಗಳಲ್ಲಿ, ಇಲ್ಲಿನ ಸಂಗೀತ ಬಗ್ಗೆಯೂ ಹೇಳಿಲ್ಲ’ ಎಂದು ಕಾರ್ನಾಡರು ಅನಗತ್ಯ ಟೀಕೆ ಮಾಡಿದ್ದರು. ಇದು ಸಾಹಿತ್ಯೋತ್ಸವ ಸಂಘಟಕರ ಅಸಮಾಧಾನಕ್ಕೂ ಕಾರಣವಾಗಿತ್ತು.

2012
ಟ್ಯಾಗೋರ್‌ 2ನೇ ದರ್ಜೆ ನಾಟಕಕಾರ: “ರವೀಂದ್ರನಾಥ ಟ್ಯಾಗೋರ್‌ ಅವರು ನಾಟಕಗಳು ಸಾಮಾನ್ಯ ಮಟ್ಟದಲ್ಲಿದ್ದು, ಅವರು ಎರಡನೇ ದರ್ಜೆಯ ನಾಟಕಕಾರ. ಅವರು ಶ್ರೀಮಂತ ಮನೆತನಂದಿಂದ ಬಂದಿದ್ದ ಕಾರಣ, ಅವರು ಬಡತನವನ್ನು ಅರ್ಥಮಾಡಿಕೊಂಡಿರಲಿಲ್ಲ. ಅವರ ನಾಟಕಗಳಲ್ಲಿ ಎಲ್ಲೂ ಬಡವರ ಆಕ್ರೋಶ ಕಾಣಿಸುವುದಿಲ್ಲ’ ಎಂಬ ಅವರ ಹೇಳಿಕೆ, ದೇಶಾದ್ಯಂತ ಸಾಹಿತ್ಯ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು.

2014
“ನಾಗಮಂಡಲ’ ಹಾಡಿನ ಕೃತಿಚೌರ್ಯ: “ಸಾಹಿತಿ ಡಾ. ಗಿರೀಶ್‌ ಕಾರ್ನಾಡರು ಅನುಮತಿ ಇಲ್ಲದೇ ನನ್ನ ರಚನೆಯ ಗೀತೆಯನ್ನು ಅವರ ನಾಗಮಂಡಲ ನಾಟಕ ಕೃತಿಯಲ್ಲಿ ಬಳಸಿಕೊಂಡಿದ್ದಾರೆ’ ಎಂದು ಲೇಖಕ ಗೋಪಾಲ್‌ ವಾಜಪೇಯಿ, ಪತ್ರಿಕಾಗೋಷ್ಠಿ ನಡೆಸಿ, ಆರೋಪಿಸಿದ್ದರು. “ಮಾಯಾದೊ ಮನದ ಭಾರ…’ ಗೀತೆಯ ಕುರಿತಾದ ವಿವಾದ, ಕೋರ್ಟ್‌ ಮೆಟ್ಟಿಲನ್ನೂ ಏರಿತ್ತು.

2015
ಏರ್‌ಪೋರ್ಟ್‌ಗೆ ಟಿಪ್ಪುವಿನ ಹೆಸರಿಡಿ…: ಟಿಪ್ಪು ಜಯಂತಿ ಆಚರಣೆಗೆ ರಾಜ್ಯ ಸರ್ಕಾರ ತುದಿಗಾಲಲ್ಲಿ ನಿಂತ ಸಂದರ್ಭ. “ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡುವ ಬದಲು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಟಿಪ್ಪು ಸುಲ್ತಾನನ ಹೆಸರಿಡಬೇಕಿತ್ತು’ ಎಂಬ ಕಾರ್ನಾಡರ ಹೇಳಿಕೆ, ಒಕ್ಕಲಿಗ ಸಮುದಾಯವನ್ನು ಕೆರಳಿಸಿತ್ತು. “ಕಾರ್ನಾಡರು ನಟಿಸಿದ ಚಿತ್ರಗಳನ್ನು ಬಿತ್ತರಿಸಲೇಬಾರದು’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದ ಭಾ.ಮಾ. ಹರೀಶ್‌ ಅವರೂ ವಿರೋಧ ವ್ಯಕ್ತಪಡಿಸಿದರು. ಕೊನೆಗೆ ಕಾರ್ನಾಡರು ಬಹಿರಂಗವಾಗಿ ಕ್ಷಮೆ ಕೇಳಬೇಕಾಯಿತು.

Advertisement

2015
ಗೋಮಾಂಸ ಸೇವನೆಗೆ ಪ್ರೇರೇಪಣೆ: ಕೇಂದ್ರದಲ್ಲಿನ ಬಿಜೆಪಿ ಸರ್ಕಾರವು ಅಲ್ಪ ಸಂಖ್ಯಾತರ ಆಹಾರದ ಹಕ್ಕನ್ನು ಕಸಿಯುತ್ತಿದೆ ಎಂದು ಆರೋಪಿಸಿ, ವಿಚಾರವಾದಿಗಳ ಬಳದಗೊಂದಿಗೆ ಕಾರ್ನಾಡರು ಟೌನ್‌ಹಾಲ್‌ ಮುಂಭಾಗ, ಪ್ರತಿಭಟನೆ ನಡೆಸಿದ್ದರು. “ಪ್ರತಿಯೊಬ್ಬರಿಗೂ ಯಾವುದೇ ಆಹಾರ ತಿನ್ನುವ ಹಕ್ಕಿದೆ’ ಎಂದು ಹೇಳಿ, ಧರಣಿನಿರತರಿಗೆ ಸ್ಥಳದಲ್ಲಿಯೇ ಗೋಮಾಂಸ ಖಾದ್ಯ ತಿನ್ನಲು ಪ್ರೇರೇಪಿಸಿದ್ದರು. ಆದರೆ, ಕಾರ್ನಾಡರು ಮಾತ್ರ ತಿಂದಿರಲಿಲ್ಲ.

2018
ನಾನು ಕೂಡ ಅರ್ಬನ್‌ ನಕ್ಸಲ್‌: ಗೌರಿ ಲಂಕೇಶ್‌ ಅವರ ಸಂಸ್ಮರಣೆ ದಿನದ ಸಂದರ್ಭ. ಆಗಲೇ ಅನಾರೋಗ್ಯದಿಂದ ಬಳಲುತ್ತಿದ್ದ ಕಾರ್ನಾಡರು, “ನಾನು ಕೂಡ ಅರ್ಬನ್‌ ನಕ್ಸಲ್‌’ ಎಂಬ ಫ‌ಲಕವನ್ನು, ತಮ್ಮ ಕೊರಳಿಗೆ ತೂಗುಹಾಕಿಕೊಂಡು, ಸಾರ್ವಜನಿಕರ ಚರ್ಚೆಗೆ ಗ್ರಾಸರಾದರು. ಅರ್ಬನ್‌ ನಕ್ಸಲ್‌ ಆರೋಪಿತ ವ್ಯಕ್ತಿಗಳ ಬಂಧನ ಕ್ರಮವನ್ನು ಈ ಮೂಲಕ ಖಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next