ಕನಕಪುರ: ಆಶ್ರಯ ಯೋಜನೆಯಲ್ಲಿ ಕಗ್ಗಲ್ಲಹಳ್ಳಿ ಗ್ರಾಪಂ ಸರ್ವೇ ನಂ.50ರಲ್ಲಿ 40 ಗ್ರಾಮಸ್ಥರಿಗೆ ಮಂಜೂರಾಗಿದ್ದ ಸರ್ಕಾರಿ ಗೋಮಾಳದ ವಿಚಾರದಲ್ಲಿ ಗ್ರಾಮಸ್ಥರ ನಡೆದ ವಿವಾದ ಉಂಟಾಗಿ, ತಹಶೀಲ್ದಾರ್ ಎದುರಲ್ಲೇ ಮಾತಿನ ಚಕಮಕಿ ನಡೆದು ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಯಿತು.
ತಾಲೂಕಿನ ಹಾರೋಹಳ್ಳಿ ಹೋಬಳಿಯ ಕಗ್ಗಲಹಳ್ಳಿ ಗ್ರಾಪಂ ವ್ಯಾಪ್ತಿಯ ಪರುವಯ್ಯನಪಾಳ್ಯದ ಸರ್ವೇ ನಂ.50ರ ಸರ್ಕಾರಿ ಗೋಮಾಳದಲ್ಲಿ ಸುಮಾರು 40 ಜನರಿಗೆ ಆಶ್ರಯ ಯೋಜನೆಯಡಿಯಲ್ಲಿ ಅಂದಿನ ಕಾರ್ಯನಿರ್ವಹಕ ಅಧಿಕಾರಿಗಳು ನಿವೇಶನ ಮಂಜೂರು ಮಾಡಿ, ಹಕ್ಕು ಪತ್ರ ನೀಡಿದ್ದಾರೆ ಎನ್ನಲಾಗಿದೆ.
ಆದರೆ ಕೆಲ ಖಾಸಗಿ ವ್ಯಕ್ತಿಗಳು ಈ ಸರ್ಕಾರಿ ಗೋಮಾಳ ನಮಗೆ ಮಂಜೂರಾಗಿದೆ ಎಂದು ತಕರಾರು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ವರ್ಷಾ ಒಡೆಯರ್ ಸ್ಥಳ ಪರೀಶಿಲನೆ ನಡೆಸಲು ಭೇಟಿ ನೀಡಿದ್ದ ಸಂದರ್ಭದಲ್ಲಿ ಗ್ರಾಮಸ್ಥರ ನಡುವೆ ಜಗಳ ಆರಂಭವಾಗಿ ವಿಕೋಪಕ್ಕೆ ತಿರುಗಿತು. ಈ ವೇಳೆ ತಹಶೀಲ್ದಾರ್ ಮಧ್ಯೆ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.
ಬಳಿಕ ಎರಡು ಗುಂಪು ಗಳ ಬಳಿಯಿರುವ ದಾಖಲೆ ಪರೀಶಿಲಿಸಿ, ಜಿಲ್ಲಾಧಿಕಾರಿ ಗಳಿಂದ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ ಮಂಜೂರಿಗೆ ಅನುಮೋದನೆ ಸಿಕ್ಕಿಲ್ಲ. ಜತೆಗೆ ನಿಮಗೆ ನೀಡಿ ರುವ ಹಕ್ಕು ಪತ್ರದಲ್ಲಿ ಅಂದಿನ ತಹಶೀಲ್ದಾರ್ ಸಹಿಯಿಲ್ಲ. ಹೀಗಾಗಿ ಎಲ್ಲ ದಾಖಲೆಗಳು ಕೂಲಂಕಷವಾಗಿ ಪರೀಶಿಲನೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳುವವರೆಗೂ ಚಟುವಟಿಕೆ ನಡೆಸಬಾರದು ಎಂದು ಸೂಚಿಸಿದ್ದಾರೆ.
ಕೆಲ ಖಾಸಗಿ ವ್ಯಕ್ತಿಗಳು ನಕಲಿ ದಾಖಲೆ ಸೃಷ್ಟಿಸಿ, ಸರ್ಕಾರಿ ಜಾಗ ಕಬಳಿಸಲು ಯತ್ನಿಸುತ್ತಿದ್ದಾರೆ. ಅದಕ್ಕೆ ಅವಕಾಶ ನೀಡದೇ ನೈಜ ಫಲಾ ನುಭವಿಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.