ಹರಿಹರ: ಕೋವಿಡ್ ಲಾಕ್‌ಡೌನ್ ಅವಧಿ ನಿರ್ಣಯಿಸಲು ತಾಲೂಕು ಆಡಳಿತದಿಂದ ಕರೆದಿದ್ದ ಸಭೆ, ಹಾಲಿ ಮತ್ತು ಮಾಜಿ ಶಾಸಕರ ನಡುವೆ ಮಾತಿನ ಚಕಮಕಿಗೆ ಸಾಕ್ಷಿಯಾಯಿತು.
ಎಸ್‌ಜೆವಿಪಿ ಕಾಲೇಜಿನ ಸಭಾಂಗಣದಲ್ಲಿ ಕರೆದಿದ್ದ ಸಭೆಯಲ್ಲಿ ಮಾಜಿ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಈ ಮುಂಚಿನಂತೆ ಮಧ್ಯಾಹ್ನ 2ಕ್ಕೆ ವ್ಯಾಪಾರ ವಹಿವಾಟು ಬಂದ್ ಮಾಡಿಸಿದರೆ ಸಾರ್ವಜನಿಕರು ಅವಸರದಿಂದ ಅಂಗಡಿ ಮುಂಗಟ್ಟುಗಳಿಗೆ ಮುಗಿ ಬಿದ್ದು ಖರೀದಿಸುತ್ತಾರೆ. ಇದರಿಂದ ಸಾಮಾಜಿಕ ಅಂತರ ಕಾಪಾಡಲಾಗುವುದಿಲ್ಲ. ದಾವಣಗೆರೆಯಂತೆ ಇಲ್ಲಿಯೂ ಲಾಕ್ ಡೌನ್ ಅವಧಿ ನಿಗದಿ ಮಾಡುವುದು ಸೂಕ್ತ. ಇಲ್ಲಿ ಬೇಗನೆ ಬಂದ್ ಮಾಡಿದರೆ ಜನರು ದಾವಣಗೆರೆಗೆ ಹೋಗಿ ವ್ಯಾಪಾರ, ವಹಿವಾಟು ನಡೆಸುತ್ತಾರೆ. ಜೊತೆಗೆ ಅದು ಸುರಕ್ಷಿತವೂ ಅಲ್ಲ ಎಂದು ಪ್ರತಿಪಾದಿಸಿದರು.
ನಂತರ ಮಾತನಾಡಿದ ಶಾಸಕ ಎಸ್. ರಾಮಪ್ಪ, ದಾವಣಗೆರೆ ನಗರದಲ್ಲಿ ಕೋವಿಡ್ ದಿಂದ ಪ್ರತಿನಿತ್ಯ ಸಾವು-ನೋವು ಸಂಭವಿಸುತ್ತಿದೆ. ನೀವು ಹೇಳಿದಂತೆ ಅನುಸರಿಸಿದರೆ ತಾಲೂಕು ಮುಂದಿನ ದಿನಗಳಲ್ಲಿ ಸ್ಮಶಾನವಾಗಿ ಹೆಣಗಳನ್ನು ಮುಚ್ಚಲು ಜೆಸಿಬಿ ಬಳಸಬೇಕಾಗುತ್ತದೆ. ಕ್ಷೇತ್ರದ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಲಾಭಕ್ಕಾಗಿ ಸಮಯ ನಿಗದಿ ಮಾಡದೆ ಜನರ ಉಳಿವಿಗಾಗಿ ತೀರ್ಮಾನ ಮಾಡಬೇಕಾಗಿದೆ. ಈ ಸಮಯದಲ್ಲಿ ರಾಜಕೀಯ ಮಾಡಬಾರು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ, ಕಾಂಗ್ರೆಸ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು.ಮಧ್ಯಪ್ರವೇಶಿದ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ಕಿತ್ತಾಡುವುದರಿಂದ ಪ್ರಯೋಜನವಿಲ್ಲ. ಎದುರಾಗಿರುವ ಕಂಟಕದಿಂದ ಪಾರಾಗುವುದು ಹೇಗೆಂದು ಚಿಂತನೆ ಮಾಡಬೇಕು.ಇದು ತಾಲೂಕು ಆಡಳಿತ ಕರೆದಿರುವ ಸಭೆ.ಇಲ್ಲಿ ರಾಜಕೀಯ ನಡೆಸುವುದು ಬೇಡ ಎಂದರು.
ಪ್ರತಿ ದಿನ ಬೆಳಿಗ್ಗೆ 5ರಿಂದ ಸಂಜೆ 6ರವರೆಗೆ ವ್ಯಾಪಾರ, ವಹಿವಾಟು ನಡೆಸಲು ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ನಗರಸಭೆ ಪೌರಾಯುಕ್ತೆ ಎಸ್. ಲಕ್ಷ್ಮೀ, ತಾಲೂಕು ಆರೋಗ್ಯಾಧಿಕಾರಿ ಡಾ| ಚಂದ್ರಮೋಹನ್, ಸಿಪಿಐ ಶಿವಪ್ರಸಾದ್, ಪಿಎಸ್‌ಐ ಶೈಲಶ್ರೀ ಮತ್ತಿತರರು ಭಾಗವಹಿಸಿದ್ದರು.