ನವದೆಹಲಿ: ಸದಾ ವಿವಾದದ ಮೂಲಕ ಸುದ್ದಿಯಲ್ಲಿರುವ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಶುಕ್ರವಾರ (ಡಿಸೆಂಬರ್ 03) ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ಮುಂದಿನ ವರ್ಷ ಪಂಜಾಬ್ ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಹಾಗೂ ಪಂಜಾಬ್ ಕಾಂಗ್ರೆಸ್ ನ ರಾಜ್ಯಾಧ್ಯಕ್ಷ ನವಜ್ಯೋತ್ ಸಿಂಗ್ ಸಿಧು ಗಾಯಕ ಮೂಸೆವಾಲಾ ಅವರನ್ನು ಸ್ವಾಗತಿಸಿದ್ದರು. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಗಾಯಕ ಮೂಸೆವಾಲಾ ಅವರ ತವರಾದ ಮಾನ್ಸಾದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
28ವರ್ಷದ ಸಿಧು ಮೂಸೆವಾಲಾ ಅವರು ತಮ್ಮ ಹಾಡಿನಲ್ಲಿ ಗನ್ ಮತ್ತು ಹಿಂಸೆಯನ್ನು ವೈಭವೀಕರಿಸಿದ್ದರಿಂದ ಹಲವಾರು ಕೇಸುಗಳು ದಾಖಲಾಗಿದ್ದವು. ಆದರೆ ಈ ಬಗ್ಗೆ ನವಜ್ಯೋತ್ ಸಿಧು ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ತಿಳಿಸಿದೆ.
ಯಾಕೆ ನೀವು ಇಂತಹ ಪ್ರಶ್ನೆಗಳನ್ನು ಕೇಳುತ್ತೀರಿ? ಮೂಸೆವಾಲಾ ಬಗ್ಗೆ ಪಂಜಾಬ್ ನ ಜನರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಮಾಧ್ಯಮಗಳು ಯಾವುದನ್ನೂ ನಿರ್ಧರಿಸುವುದು ಬೇಡ ಎಂದು ಸಿಧು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಗಾಯಕ ಮೂಸೆವಾಲಾ ಅವರು ಎಲ್ಲರ ಮನಗೆದ್ದಿದ್ದಾರೆ. ಅವರ ತಂದೆ ನಿವೃತ್ತ ಸೇನಾಧಿಕಾರಿ. ಅವರು ಕಾಂಗ್ರೆಸ್ ಪಕ್ಷ ಹೆಮ್ಮೆ ಪಡುವಂತೆ ಮಾಡಲಿದ್ದಾರೆ ಎಂಬ ವಿಶ್ವಾಸ ಇದ್ದಿರುವುದಾಗಿ ಸಿಧು ಹೇಳಿದರು. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಅವರನ್ನು ಬರಮಾಡಿಕೊಂಡಿರುವುದಾಗಿ ಹೇಳಿದರು.
ತನ್ನ ಹಾಡಿನಲ್ಲಿ ಹಿಂಸಾಚಾರ ಮತ್ತು ಗನ್ ಸಂಸ್ಕೃತಿ ಉತ್ತೇಜಿಸುವ ಹಾಡಿಗೆ ಸಂಬಂಧಿಸಿದಂತೆ ಮೂಸೆವಾಲಾ ಇರುದ್ಧ ಎಫ್ ಐಆರ್ ದಾಖಲಾಗಿತ್ತು. ಸೆಪ್ಟೆಂಬರ್ ತಿಂಗಳಿನಲ್ಲಿ ಕ್ಯಾ.ಅಮರೀಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲಾಗಿತ್ತು.